ಬೆಂಗಳೂರು : ಅರಣ್ಯ ಒತ್ತುವರಿದಾರರಿಗೆ ಸಿಂಹಸ್ವಪ್ನವಾಗಿದ್ದ ಈಶ್ವರ ಖಂಡ್ರೆ, ಈಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿ ಗ್ರಾ.ಪಂ.ಗೆ ಸೇರಿದ ಕೆರೆ ಒತ್ತುವರಿ ತೆರವಿಗೆ ಆದೇಶಿಸಿದ್ದು, ಇಂದು ತುಮಕೂರು, ಹಿರೇಹಳ್ಳಿಯ ಒತ್ತುವರಿ ಪ್ರದೇಶದ ತೆರವು ಕಾರ್ಯಾಚರಣೆ ನಡೆಯುತ್ತಿದೆ.
ರಾಜ್ಯದಲ್ಲಿ ಗ್ರಾ.ಪಂ.ಗೆ ಸೇರಿದ 32504 ಕೆರೆಗಳ ಪೈಕಿ ತೆರವಾಗದೆ ಉಳಿದಿರುವ 4828 ಕೆರೆಗಳ 11671 ಎಕರೆ ಒತ್ತುವರಿಯನ್ನು ನಿಯಮಾನುಸಾರ ತೆರವು ಮಾಡುವಂತೆ ಇತ್ತೀಚೆಗಷ್ಟೇ ಸಚಿವರು ಆದೇಶ ನೀಡಿದ್ದರು. ಬಳಿಕ ಸೆ.5ರಂದು ತುಮಕೂರು ಗ್ರಾಮಾಂತರ ಜಿಲ್ಲೆ ಊರ್ಡಿಗೆರೆ ಹೋಬಳಿ ಹಿರೇಹಳ್ಳಿ ಕೆರೆ ಪ್ರದೇಶಕ್ಕೆ ಖುದ್ದು ಭೇಟಿ ನೀಡಿ ಒತ್ತುವರಿ ತೆರವಿಗೆ ಸೂಚನೆ ನೀಡಿದ್ದರು.
ಸಚಿವರ ಭೇಟಿ ಹಾಗೂ ಆದೇಶದ ಬೆನ್ನಲ್ಲೆ ಪಂಚಾಯತಿ ಅಧಿಕಾರಿಗಳು, ಸರ್ವೆ ನಂ.118ರಲ್ಲಿರುವ 17.32 ಎಕರೆ ಕೆರೆ ಅಂಗಳದ ಪೈಕಿ ಒತ್ತುವರಿಯಾಗಿರುವ ಪ್ರದೇಶವನ್ನು ಭೂಮಾಪಕರ ನೆರವಿನಿಂದ ಗುರುತಿಸಿ, ತೆರವು ಮಾಡಿ, ಗಡಿ ಗುರುತಿಸಿ ಹದ್ದುಬಸ್ತು ಮಾಡಲು ಮುಂದಾಗಿದ್ದಾರೆ.
ಜೆಸಿಬಿ ವಾಹನಗಳ ಜೊತೆ ಕಾರ್ಯಾಚರಣೆಗಿಳಿದಿರುವ ಪಂಚಾಯತಿ ಅಧಿಕಾರಿ, ಸಿಬ್ಬಂದಿ, ಅಕ್ರಮವಾಗಿ ಕೆರೆಗೆ ಮಣ್ಣು ತುಂಬಿ ಒತ್ತುವರಿ ಮಾಡಿದ್ದ ಸುಮಾರು 28 ಗುಂಟೆ ತೆರವು ಮಾಡಿಸಿದ್ದು, ಕೆರೆಯ ಹೆಚ್ಚಿನ ಭೂಮಿ ಸಾರ್ವಜನಿಕ ರಸ್ತೆಯಾಗಿ ಬಳಕೆಯಾಗುತ್ತಿರುವುದನ್ನು ಗುರುತಿಸಿದ್ದಾರೆ. ಕೆರೆಯ ಉಳಿಕೆ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿಯಲಿದೆ. ಸಂಪೂರ್ಣ 17.32 ಎಕರೆ ಕೆರೆಗೂ ಗಡಿ ಗುರುತು ಮಾಡುವ ಕಾರ್ಯ ಪ್ರಗತಿಯಲ್ಲಿದ್ದು, ಇದು ರಾಜ್ಯದ ಇತರೆ ಕೆರೆ ಒತ್ತುವರಿದಾರರಿಗೂ ಎಚ್ಚರಿಕೆಯ ಗಂಟೆಯಾಗಿದೆ.