ಬೆಂಗಳೂರು : ಜಿಬಿಎ ವ್ಯಾಪ್ತಿಯಲ್ಲಿ ಸಾರ್ವಜನಿಕರ ದೂರುಗಳ ಪರಿಹಾರ ವ್ಯವಸ್ಥೆಯನ್ನು ಮತ್ತಷ್ಟು ಜನಸ್ನೇಹಿ, ಪಾರದರ್ಶಕ ಹಾಗೂ ಪರಿಣಾಮಕಾರಿಗೊಳಿಸುವ ಉದ್ದೇಶದಿಂದ ‘ಸಹಾಯ 3.0’ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ನಗರದಲ್ಲಿ ‘ಸಹಾಯ 3.0’ ತಂತ್ರಾಂಶ ಹಾಗೂ ರಸ್ತೆ ಇನ್‌ಫ್ರಾಸ್ಟ್ರಕ್ಚರ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (RIMS) ಕುರಿತು ಇಂದು ಜಿಬಿಎ ಕೇಂದ್ರ ಕಛೇರಿಯ ನೌಕರರ ಭವನದಲ್ಲಿ ನಾಗರಿಕರೊಂದಿಗೆ ನಡೆದ ಸಮಾಲೋಚನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ‘ಸಹಾಯ 2.0’ ತಂತ್ರಾಂಶದಲ್ಲಿ ಈಗಾಗಲೇ ಕೆಲವು ಬದಲಾವಣೆಗಳನ್ನು ತರಲಾಗಿದೆ. ಇದೀಗ ಅದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು, ನಾಗರಿಕರೊಂದಿಗೆ ಸಮಾಲೋಚನೆ ನಡೆಸಿ, ಅವರು ನೀಡುವ ಮೌಲ್ಯಯುತ ಸಲಹೆಗಳನ್ನು ಅಳವಡಿಸಿಕೊಂಡು ‘ಸಹಾಯ 3.0’ ತಂತ್ರಾಂಶವನ್ನು ಶೀಘ್ರದಲ್ಲೇ ಅನುಷ್ಠಾನಕ್ಕೆ ತರಲಾಗುವುದು ಎಂದು ತಿಳಿಸಿದರು.
ನಾಗರಿಕರು ದೂರು ಸಲ್ಲಿಸುವ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭಗೊಳಿಸಲು ಫೋಟೋ ಮತ್ತು ಲೊಕೇಶನ್ ಜೊತೆಗೆ ಧ್ವನಿ ಸಂದೇಶ (Voice Note) ಅಪ್‌ಲೋಡ್ ಮಾಡುವ ಸೌಲಭ್ಯವೂ ಇರಬೇಕು. ಇದರಿಂದ ದೂರುದಾರರಿಗೆ ತಮ್ಮ ದೂರುಗಳನ್ನು ದಾಖಲಿಸಲು ಮತ್ತಷ್ಟು ಅನುಕೂಲವಾಗಲಿದ್ದು, ದೂರು ಬರೆಯಲು ತೆಗೆದುಕೊಳ್ಳುವ ಸಮಯವೂ ಉಳಿತಾಯವಾಗಲಿದೆ. ಈ ನಿಟ್ಟಿನಲ್ಲಿ ಇನ್ನೂ ಹಲವು ಅಗತ್ಯತೆಗಳಿದ್ದು, ಸಾರ್ವಜನಿಕರು ಹಾಗೂ ತಜ್ಞರಿಂದ ಉತ್ತಮ ಸಲಹೆ-ಆಲೋಚನೆಗಳನ್ನು ಸ್ವೀಕರಿಸಿ ‘ಸಹಾಯ 3.0’ ತಂತ್ರಾಂಶವನ್ನು ಮತ್ತಷ್ಟು ಪರಿಣಾಮಕಾರಿಗೊಳಿಸುವುದು ಈ ಸಮಾಲೋಚನಾ ಸಭೆಯ ಪ್ರಮುಖ ಉದ್ದೇಶವಾಗಿದೆ ಎಂದು ಸಚಿವರು ವಿವರಿಸಿದರು.
ಕಾಮಗಾರಿಗಳ ಪೋರ್ಟಲ್ ಅಭಿವೃದ್ಧಿ:
ಸರ್ಕಾರದ ವಿವಿಧ ಇಲಾಖೆಗಳ ನಡುವಿನ ಸಮನ್ವಯದ ಕೊರತೆ ನಮ್ಮ ರಾಜ್ಯದ ಅತ್ಯಂತ ಹಳೆಯ ಸಮಸ್ಯೆಗಳಲ್ಲಿ ಒಂದಾಗಿದೆ. ಹೀಗಾಗಿ ಎಲ್ಲಾ ಇಲಾಖೆಗಳನ್ನೂ ಒಳಗೊಂಡ ಒಂದು ಸಮಗ್ರ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಸದ್ಯ ರಸ್ತೆ ಇನ್‌ಫ್ರಾಸ್ಟ್ರಕ್ಚರ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (RIMS) ಎಂಬ ಹೆಸರಿನಲ್ಲಿ ದತ್ತಾಂಶಗಳನ್ನು ಸ್ವೀಕರಿಸಲಾಗುತ್ತಿದೆ. ಶೀಘ್ರದಲ್ಲೇ ಈ ಪೋರ್ಟಲ್‌ಗೆ ಸೂಕ್ತವಾದ ಹೆಸರನ್ನು ಇಡಲಾಗುವುದು ಎಂದು ತಿಳಿಸಿದರು.
ರಸ್ತೆ ನಿರ್ಮಾಣ, ಪೈಪ್‌ಲೈನ್ ಅಳವಡಿಕೆ, ವಿದ್ಯುತ್ ಕೇಬಲ್ ಅಳವಡಿಕೆ ಮುಂತಾದ ಕಾಮಗಾರಿಗಳನ್ನು ಕೈಗೊಳ್ಳುವ ಮುನ್ನ ವಿವಿಧ ಇಲಾಖೆಗಳ ನಡುವೆ ಸಮನ್ವಯ ಸಾಧಿಸಲು ಈ ಪೋರ್ಟಲ್ ಸಹಕಾರಿಯಾಗಬೇಕು. ಯಾವುದೇ ರಸ್ತೆ ಅಥವಾ ಮೂಲಸೌಕರ್ಯ ಕಾಮಗಾರಿ ಆರಂಭವಾಗುವ ಕನಿಷ್ಠ ಆರು ತಿಂಗಳ ಮುಂಚಿತವಾಗಿಯೇ ಪೋರ್ಟಲ್‌ನಲ್ಲಿ ಮಾಹಿತಿ ದಾಖಲಿಸುವಂತಿರಬೇಕು. ಇದರಿಂದ ಸಾರ್ವಜನಿಕರು ತಮ್ಮ ವೈಯಕ್ತಿಕ ಯೋಜನೆಗಳನ್ನು ರೂಪಿಸಿಕೊಳ್ಳಲು ಅನುಕೂಲವಾಗಲಿದೆ ಎಂದರು.
ರಸ್ತೆ ಗುಂಡಿ, ಬೀದಿ ದೀಪದಂತಹ ಪ್ರತಿಯೊಂದು ಸಮಸ್ಯೆ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಬೇರೆ ಬೇರೆ ತಂತ್ರಾಂಶಗಳ ಅಗತ್ಯವಿಲ್ಲ. ಒಂದೇ ತಂತ್ರಾಂಶದ ಮೂಲಕ ಸಾರ್ವಜನಿಕರಿಂದ ದೂರು ಸ್ವೀಕರಿಸುವುದು, ದೂರು ಪರಿಹರಿಸುವುದು, ಕಾಮಗಾರಿಗಳ ಯೋಜನೆ ಹಾಗೂ ಪ್ರಗತಿ ಪರಿಶೀಲನೆ, ದತ್ತಾಂಶ ನಿರ್ವಹಣೆ ಮತ್ತು ಬ್ಯಾಕ್‌ಎಂಡ್‌ನಲ್ಲಿ ಪಾವತಿ (Payment Generation) ಪ್ರಕ್ರಿಯೆಗಳನ್ನು ಕೈಗೊಳ್ಳುವಂತಿರಬೇಕು ಎಂದು ತಿಳಿಸಿದರು.
‘ಸಹಾಯ 3.0’ ತಂತ್ರಾಂಶ ಕುರಿತು:
ಜಿಬಿಎ ವ್ಯಾಪ್ತಿಯಲ್ಲಿ ನಾಗರಿಕರ ದೂರುಗಳನ್ನು ಪರಿಣಾಮಕಾರಿಯಾಗಿ ಸ್ವೀಕರಿಸಿ, ಪರಿಹರಿಸುವ ಉದ್ದೇಶದಿಂದ ‘ಸಹಾಯ 2.0’ ಮೂಲಕ ಮೊಬೈಲ್ ಮೂಲಕ ದೂರು ಸಲ್ಲಿಕೆ, ನಿಗದಿತ ಅಧಿಕಾರಿಗಳ ಜವಾಬ್ದಾರಿ, ಎಸ್.ಎಲ್.ಎ. ಆಧಾರಿತ ದೂರು ಪರಿಹಾರ ವ್ಯವಸ್ಥೆ ಹಾಗೂ ಮೂರು ಹಂತದ ಮೇಲ್ಮನವಿ ವ್ಯವಸ್ಥೆಯನ್ನು ಒಳಗೊಂಡ ಏಕೀಕೃತ ಡಿಜಿಟಲ್ ದೂರು ಪರಿಹಾರ ವೇದಿಕೆ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದೆ.
ಇದೀಗ ‘ಸಹಾಯ 3.0’ ಅನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಇರುವ ತಂತ್ರಾಂಶದಲ್ಲಿಯೆ ಹೊಸ ವೈಶಿಷ್ಟ್ಯಗಳನ್ನು ಸೇರ್ಪಡೆಗೊಳಿಸಲಾಗುತ್ತಿದೆ. ನಾಗರಿಕರು ದೂರುಗಳನ್ನು ಸುಲಭವಾಗಿ ದಾಖಲಿಸುವಂತಾಗಿಸುವುದು ಹಾಗೂ ದೂರು ಪರಿಹಾರದ ಪ್ರತಿಯೊಂದು ಹಂತದಲ್ಲೂ ಹೆಚ್ಚಿನ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸುವುದು ‘ಸಹಾಯ 3.0’ರ ಪ್ರಮುಖ ಉದ್ದೇಶವಾಗಿದೆ.*
‘ಸಹಾಯ 3.0’ರಲ್ಲಿ ಪ್ರಸ್ತಾವಿತ ಪ್ರಮುಖ ಸುಧಾರಣೆಗಳು:
* ಭಾರತೀಯ ಭಾಷೆಗಳ ಬೆಂಬಲ: ವಿವಿಧ ಭಾರತೀಯ ಭಾಷೆಗಳಲ್ಲಿ ದೂರು ದಾಖಲಿಸಲು ಅನುಕೂಲವಾಗುವ ವ್ಯವಸ್ಥೆ.
* ಧ್ವನಿ ಆಧಾರಿತ ದೂರು ನೋಂದಣಿ: ಟೈಪ್ ಮಾಡುವ ಅಗತ್ಯವಿಲ್ಲದೆ ಧ್ವನಿ ಮೂಲಕ ದೂರು ದಾಖಲಿಸುವ ವ್ಯವಸ್ಥೆ.
* ಕಡಿಮೆ ಬ್ಯಾಂಡ್‌ವಿಡ್ತ್‌ನಲ್ಲಿಯೂ ಬಳಕೆ: ಕಡಿಮೆ ಇಂಟರ್ನೆಟ್ ವೇಗದಲ್ಲಿಯೂ ವೇದಿಕೆಯನ್ನು ಸುಗಮವಾಗಿ ಬಳಸುವ ವ್ಯವಸ್ಥೆ.
* ಆಯ್ದ ಪ್ರಕರಣಗಳಲ್ಲಿ ಅನಾಮಧೇಯ ದೂರು: ಅಗತ್ಯವಿರುವ ನಿರ್ದಿಷ್ಟ ಪ್ರಕರಣಗಳಲ್ಲಿ ನಾಗರಿಕರ ಗುರುತನ್ನು ಬಹಿರಂಗಪಡಿಸದೆ ದೂರು ಸಲ್ಲಿಸಲು ಅವಕಾಶ.
* ಸರಳ ಮರುತೆರೆಯುವ ವ್ಯವಸ್ಥೆ: ಸಮರ್ಪಕವಾಗಿ ಪರಿಹಾರವಾಗದ ದೂರುಗಳನ್ನು ನಾಗರಿಕರು ಸುಲಭವಾಗಿ ಮರುತೆರೆಯಲು ಅವಕಾಶ.
* ಮುಕ್ತಾಯಕ್ಕೂ ಮುನ್ನ ನಾಗರಿಕರ ದೃಢೀಕರಣ: ದೂರುವನ್ನು ಮುಕ್ತಾಯಗೊಳಿಸುವ ಮೊದಲು ಪರಿಹಾರವಾಗಿರುವುದರ ಕುರಿತು ನಾಗರಿಕರಿಂದ ದೃಢೀಕರಣ ಪಡೆಯುವ ವ್ಯವಸ್ಥೆ.
* ಸಾರ್ವಜನಿಕ ಕಾರ್ಯಕ್ಷಮತೆ ಡ್ಯಾಶ್‌ಬೋರ್ಡ್: ದೂರುಗಳ ಸ್ವೀಕೃತಿ, ಪರಿಹಾರ ಹಾಗೂ ಬಾಕಿ ಇರುವ ಪ್ರಕರಣಗಳ ಕುರಿತು ಸಾರ್ವಜನಿಕರಿಗೆ ಪಾರದರ್ಶಕ ಮಾಹಿತಿಯನ್ನು ಒದಗಿಸುವ ವ್ಯವಸ್ಥೆ.
* ಸ್ವಯಂಚಾಲಿತ ಎಸ್.ಎಲ್.ಎ. ಎಚ್ಚರಿಕೆಗಳು: ನಿಗದಿತ ಎಸ್.ಎಲ್.ಎ. ಅವಧಿ ಮೀರದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸ್ವಯಂಚಾಲಿತ ಎಚ್ಚರಿಕೆ ನೀಡುವ ವ್ಯವಸ್ಥೆ.
* ಅಧಿಕಾರಿಗಳ ಜವಾಬ್ದಾರಿಯ ಸ್ಪಷ್ಟತೆ: ಪ್ರತಿ ದೂರಿಗೆ ಸಂಬಂಧಿಸಿದ ಜವಾಬ್ದಾರಿಯುತ ಅಧಿಕಾರಿಯ ವಿವರಗಳನ್ನು ಸ್ಪಷ್ಟವಾಗಿ ಪ್ರದರ್ಶಿಸುವ ವ್ಯವಸ್ಥೆ.
* ಏಕರೂಪದ ಸ್ಥಳ ಪರಿಶೀಲನೆ: ದೂರುಗಳ ವಾಸ್ತವಿಕ ಸ್ಥಿತಿಯನ್ನು ಪರಿಶೀಲಿಸಲು ಏಕರೂಪದ ಸ್ಥಳ ಪರಿಶೀಲನಾ ವ್ಯವಸ್ಥೆಯನ್ನು ಜಾರಿಗೆ ತರುವುದು.
‘ಸಹಾಯ 3.0’ ಮೂಲಕ ದೂರು ದಾಖಲಿಸುವುದರಿಂದ ಹಿಡಿದು ಅದರ ಅಂತಿಮ ಪರಿಹಾರ ಹಾಗೂ ಮುಕ್ತಾಯದವರೆಗೆ ಪ್ರತಿಯೊಂದು ಹಂತವೂ ನಾಗರಿಕರಿಗೆ ಸ್ಪಷ್ಟವಾಗಿ ಗೋಚರಿಸುವಂತೆ ಮಾಡುವುದರ ಜೊತೆಗೆ, ಸಂಬಂಧಿಸಿದ ಅಧಿಕಾರಿಗಳ ಜವಾಬ್ದಾರಿಯನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ಹೊಂದಲಾಗಿದೆ.
ರಸ್ತೆ ಕಾಮಗಾರಿಗಳ ಸಮಗ್ರ ನಿರ್ವಹಣೆಗೆ ‘RIMS’ ಡಿಜಿಟಲ್ ವೇದಿಕೆ ಕುರಿತು:
ಜಿಬಿಎ ವ್ಯಾಪ್ತಿಯ ರಸ್ತೆ ಆಸ್ತಿಗಳು, ಅನುದಾನಗಳು ಹಾಗೂ ಮೂಲಸೌಕರ್ಯ ಕಾಮಗಾರಿಗಳ ಸಮಗ್ರ ನಿರ್ವಹಣೆಗಾಗಿ ರೋಡ್ ಇನ್‌ಫ್ರಾಸ್ಟ್ರಕ್ಚರ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (RIMS) ಎಂಬ ಡಿಜಿಟಲ್ ವೇದಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ.
ನಗರದ ಜಿಐಎಸ್ ಆಧಾರಿತ ರಸ್ತೆ ಜಾಲದೊಂದಿಗೆ ಸಂಪರ್ಕ ಹೊಂದಿರುವ RIMS ಮೂಲಕ ಎಲ್ಲಾ ರಸ್ತೆ ಕಾಮಗಾರಿಗಳನ್ನು ದಾಖಲಿಸಿ, ವಾರಕ್ಕೊಮ್ಮೆ ಅವುಗಳ ಪ್ರಗತಿಯನ್ನು ನವೀಕರಿಸಿ ಮೇಲ್ವಿಚಾರಣೆ ಮಾಡಲು ಸಾಧ್ಯವಾಗಲಿದೆ. ಅಲ್ಲದೆ, ಒಂದೇ ರಸ್ತೆಯಲ್ಲಿ ಈ ಹಿಂದೆ ಕೈಗೊಂಡಿರುವ ಕಾಮಗಾರಿಗಳ ಸಂಪೂರ್ಣ *‘ರಸ್ತೆ ಕಾಮಗಾರಿಗಳ ಇತಿಹಾಸ’ (Road History)*ವನ್ನೂ ದಾಖಲಿಸಿ ವೀಕ್ಷಿಸಬಹುದಾಗಿದೆ.
ನಾಗರಿಕರಿಗೆ ಇಂಟರಾಕ್ಟಿವ್ ಮ್ಯಾಪ್ ಮೂಲಕ ತಮ್ಮ ಸುತ್ತಮುತ್ತ ನಡೆಯುತ್ತಿರುವ ಹಾಗೂ ಪ್ರಸ್ತಾವಿತ ರಸ್ತೆ ಕಾಮಗಾರಿಗಳ ಮಾಹಿತಿಯನ್ನು ನೈಜ ಸಮಯದಲ್ಲಿ (Real Time) ವೀಕ್ಷಿಸಲು ಅವಕಾಶ ಕಲ್ಪಿಸಲಾಗುತ್ತದೆ.
RIMSನಲ್ಲಿ 2022-23ನೇ ಸಾಲಿನಿಂದ 2026-27ನೇ ಸಾಲಿನವರೆಗೆ (ಪ್ರಸ್ತುತ ಸಾಲು ಸೇರಿದಂತೆ) ಐದು ವರ್ಷಗಳ ರಸ್ತೆ ಕಾಮಗಾರಿಗಳ ಮಾಹಿತಿಯು ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಲಭ್ಯವಿದೆ. 2,000ಕ್ಕೂ ಹೆಚ್ಚು ಕಿ.ಮೀ. ರಸ್ತೆ ಕಾಮಗಾರಿಗಳ ಮಾಹಿತಿ ಹಾಗೂ ವಿವಿಧ ಸರ್ಕಾರಿ ಅನುದಾನ ಮೂಲಗಳಿಂದ ಒದಗಿಸಲಾದ ₹9,151 ಕೋಟಿ ಅನುದಾನದ ಮಾಹಿತಿಯೂ ಲಭ್ಯವಿದೆ.
ನಿಖರತೆ, ದಕ್ಷತೆ ಹಾಗೂ ಪಾರದರ್ಶಕತೆಗೆ ಆದ್ಯತೆ:
RIMS ವ್ಯವಸ್ಥೆಯು ರಸ್ತೆ ಕಾಮಗಾರಿಗಳ ಮಾಹಿತಿಯಲ್ಲಿನ ದೋಷಗಳು ಮತ್ತು ಅಸಮರ್ಪಕತೆಗಳನ್ನು ಕಡಿಮೆಗೊಳಿಸುವುದು, ಪ್ರಕ್ರಿಯೆಯ ಹರಿವನ್ನು ಉತ್ತಮಗೊಳಿಸುವುದು ಹಾಗೂ AI ಆಧಾರಿತ ತಂತ್ರಜ್ಞಾನಗಳನ್ನು ಸಂಯೋಜಿಸುವ ಮೂಲಕ ರಸ್ತೆ ಅಭಿವೃದ್ಧಿ ಯೋಜನೆ, ಕಾಮಗಾರಿಗಳ ಮೇಲ್ವಿಚಾರಣೆ, ಹೂಡಿಕೆ ಆದ್ಯತೆ ನಿಗದಿ ಹಾಗೂ ಸಾರ್ವಜನಿಕ ಪಾರದರ್ಶಕತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶವನ್ನು ಹೊಂದಿದೆ.
RIMS ಮೂಲಕ ರಸ್ತೆ ಕಾಮಗಾರಿಗಳ ಯೋಜನೆ, ಅನುಷ್ಠಾನ, ಮೇಲ್ವಿಚಾರಣೆ ಮತ್ತು ಸಾರ್ವಜನಿಕರಿಗೆ ಮಾಹಿತಿ ಒದಗಿಸುವ ಪ್ರಕ್ರಿಯೆಯನ್ನು ಒಂದೇ ಡಿಜಿಟಲ್ ವೇದಿಕೆಯಲ್ಲಿ ಸಮಗ್ರಗೊಳಿಸುವುದರೊಂದಿಗೆ, ನಗರ ರಸ್ತೆ ಮೂಲಸೌಕರ್ಯ ನಿರ್ವಹಣೆಯನ್ನು ಮತ್ತಷ್ಟು ಪರಿಣಾಮಕಾರಿ ಹಾಗೂ ಪಾರದರ್ಶಕಗೊಳಿಸುವ ಗುರಿಯನ್ನು ಹೊಂದಲಾಗಿದೆ.
ಈ ವೇಳೆ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್, ನಗರ ಪಾಲಿಕೆ ಆಯುಕ್ತರಾದ ರಮೇಶ್ ಡಿ.ಎಸ್., ಜಿ. ಜಗದೀಶ್, ರಮೇಶ್ ಕೆ.ಎನ್., ಡಾ. ರಾಜೇಂದ್ರ ಕೆ.ವಿ., ಉಪ ಆಯುಕ್ತರಾದ ಗಾಯತ್ರಿ ನಾಯ್ಕ್, ನಾಗರಿಕರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.