ಬೆಂಗಳೂರು: ಎಂಜಿನಿಯರಿಂಗ್ ಸೇರಿದಂತೆ ಯುಜಿ ಸಿಇಟಿ ಕೋರ್ಸ್ ಗಳ 3ನೇ ಹಾಗೂ ಅಂತಿಮ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಪೂರ್ಣ ಆಗಿದ್ದು, ಒಪ್ಪಂದದ ಪ್ರಕಾರ ಉಳಿಕೆ ಸೀಟುಗಳನ್ನು ಆಯಾ ಕಾಲೇಜುಗಳ ಆಡಳಿತ ಮಂಡಳಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಹಸ್ತಾಂತರ ಮಾಡಿದೆ.
ಎಲ್ಲ ವಿಧದ ಎಂಜಿನಿಯರಿಂಗ್ ಕೋರ್ಸ್ ಗಳ 24,283 ಸೀಟು ಹಾಗೂ ಆರ್ಕಿಟೆಕ್ಚರ್ ಕೋರ್ಸ್ ನ 252 ಸೀಟು ಹಂಚಿಕೆಯಾಗದೆ ಉಳಿದಿವೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.
ಎಂಜಿನಿಯರಿಂಗ್ ಹೊರತುಪಡಿಸಿದರೆ ನರ್ಸಿಂಗ್ ನಲ್ಲಿ ಅತಿ ಹೆಚ್ಚು ಸೀಟು ಉಳಿದಿವೆ. ಒಟ್ಟು 36,238 ಸೀಟುಗಳ ಪೈಕಿ13,407 ಸೀಟು ಮಾತ್ರ ಹಂಚಿಕೆಯಾಗಿ, 22,832 ಸೀಟು ಹಾಗೆಯೇ ಉಳಿದಿವೆ ಎಂದು ಅವರು ವಿವರಿಸಿದ್ದಾರೆ.
ಪಶು ವೈದ್ಯಕೀಯ ಕೋರ್ಸ್ ನ ಎಲ್ಲ 366 ಸೀಟು ಹಂಚಿಕೆಯಾಗಿವೆ. ಫಾರ್ಮಸಿ ಕೋರ್ಸ್ ನ 489, ಬಿಪಿಟಿ- 22, ಕೃಷಿ ಮತ್ತು ಸಂಬಂಧಿತ ಕೋರ್ಸ್ ಗಳ 20, ಬಿಎಸ್ಸಿ ಎಎಚ್ಎಸ್ ನ 2,465 ಸೀಟು ಉಳಿದಿವೆ. ಯೋಗಾ ಮತ್ತು ನ್ಯಾಚುರೋಪತಿ ಕೋರ್ಸ್ ನ ಒಟ್ಟು 520 ಸೀಟುಗಳಲ್ಲಿ 214 ಸೀಟು ಉಳದಿವೆ ಎಂದು ಅವರು ವಿವರಿಸಿದ್ದಾರೆ.
3ನೇ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿರುವವರಿಗೆ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಸೆ.11ರವರೆಗೆ ಅವಕಾಶ ನೀಡಲಾಗಿದೆ. ಕಡ್ಡಾಯ ಪ್ರವೇಶವಾಗಿರುವ ಕಾರಣ ಎಲ್ಲರೂ ತಪ್ಪದೆ ಪ್ರವೇಶ ಪಡೆಯಬೇಕು ಎಂದು ಅವರು ಹೇಳಿದರು.
ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆ ಮಾತ್ರ ಆಗಿದೆ. ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಚಾಲ್ತಿಯಲ್ಲಿ ಇದೆ ಎಂದು ಅವರು ಹೇಳಿದರು.