ಬಳ್ಳಾರಿ: ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿರುವ ‘ಬಳ್ಳಾರಿ ಚಲೋ’ ಪಾದಯಾತ್ರೆ ಇದೀಗ ಮುಕ್ತಾಯದ ಹಂತ ತಲುಪಿದೆ. ರಾಯಚೂರು ಜಿಲ್ಲೆಯ ಲಿಂಗಸಗೂರಿನಿಂದ ಆರಂಭಗೊಂಡಿದ್ದ ಈ ಪಾದಯಾತ್ರೆಯು ಬರೋಬ್ಬರಿ 170 ಕಿಲೋಮೀಟರ್ ದೂರ ಕ್ರಮಿಸಿ ಬಳ್ಳಾರಿ ಗ್ರಾಮೀಣ ಕ್ಷೇತ್ರಕ್ಕೆ ಪ್ರವೇಶಿಸಿದೆ.
ಭವ್ಯ ಸ್ವಾಗತ ಹಾಗೂ ಜನ ಸಂಪರ್ಕ:
ಪಾದಯಾತ್ರೆಯ 9ನೇ ದಿನದ ಭಾಗವಾಗಿ ಸಂಡೂರು ಕ್ಷೇತ್ರದ ಕುಡತಿನಿಯಿಂದ ಪ್ರಯಾಣ ಬೆಳೆಸಿದ ನಾಯಕರು, ಸಾಗುವ ಮಾರ್ಗದಲ್ಲೆಲ್ಲಾ ಹೆಜ್ಜೆ ಹಾಕಿದರು. ಈ ವೇಳೆ ಕಾರ್ಯಕರ್ತರು ಹಾಗೂ ಬೆಂಬಲಿತ ಅಭಿಮಾನಿಗಳು ಹೂಮಳೆ ಸುರಿಸಿ, ಬೃಹತ್ ಹಾರಗಳನ್ನು ಹಾಕಿ ಅದ್ಧೂರಿಯಾಗಿ ಬರಮಾಡಿಕೊಂಡರು. ಮಾರ್ಗಮಧ್ಯೆ ಕುಡತಿನಿಯ ಭೂ ಸಂತ್ರಸ್ತರನ್ನು ಭೇಟಿಯಾದ ವಿಜಯೇಂದ್ರ, ಅವರ ಕುಂದುಕೊರತೆಗಳನ್ನು ಆಲಿಸಿದರು. ಇದೇ ವೇಳೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನಮ್ಮ ಈ ಸುದೀರ್ಘ ಹೋರಾಟಕ್ಕೆ ಮಣಿದಿರುವ ಮುಖ್ಯಮಂತ್ರಿಗಳು ಇದೀಗ ಬಡವರ ಹಾಗೂ ಕಾರ್ಮಿಕರ ಜೊತೆ ಸಂವಾದ ನಡೆಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ವ್ಯಂಗ್ಯವಾಡಿದರು.
ಗುರುವಾರ ಬೃಹತ್ ರಣಕಹಳೆ:
ಪಾದಯಾತ್ರೆಯು ನಗರದ ಪ್ರಮುಖ ವೃತ್ತಗಳಾದ ಅಲ್ಲಿಪುರ, ಸುಧಾ ಕ್ರಾಸ್, ರೇಡಿಯೋ ಪಾರ್ಕ್, ಕೌಲ್ ಬಜಾರ್, ಮೋತಿ ಸರ್ಕಲ್ ಹಾಗೂ ರಾಯಲ್ ಸರ್ಕಲ್ ಮೂಲಕ ಸಾಗಿ ಕನಕದುರ್ಗಮ್ಮ ದೇವಸ್ಥಾನದ ಬಳಿ ತಲುಪಲಿದೆ. ಗುರುವಾರ ಬೆಳಿಗ್ಗೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ, ನಾಯಕರು ಪಾದಯಾತ್ರೆ ಮೂಲಕವೇ ಸಮಾವೇಶದ ವೇದಿಕೆಗೆ ಆಗಮಿಸಲಿದ್ದಾರೆ. ಸಂಜೆ ಮುನ್ಸಿಪಲ್ ಮೈದಾನದಲ್ಲಿ ಬೃಹತ್ ಬಹಿರಂಗ ಸಮಾವೇಶ ನಡೆಯಲಿದ್ದು, ಸಾವಿರಾರು ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆಯಿದೆ.
ಅಡ್ಡಿಪಡಿಸುತ್ತಿದೆ ಸರ್ಕಾರ – ಕಮಲ ನಾಯಕರ ಆಕ್ರೋಶ:
ಸಮಾವೇಶಕ್ಕೆ ಮುನ್ಸಿಪಲ್ ಮೈದಾನ ನೀಡಲು ಜಿಲ್ಲಾಡಳಿತ ವಿಳಂಬ ಮಾಡಿದ್ದು ಮತ್ತು ನಗರದಲ್ಲಿ ಹಾಕಲಾಗಿದ್ದ ಬಿಜೆಪಿ ಬ್ಯಾನರ್ ಹಾಗೂ ಬಾವುಟಗಳನ್ನು ಪಾಲಿಕೆ ಸಿಬ್ಬಂದಿ ತೆರವುಗೊಳಿಸಿರುವುದಕ್ಕೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಕುಮ್ಮಕ್ಕಿನಿಂದಲೇ ಈ ರೀತಿಯ ಅಡೆತಡೆಗಳನ್ನು ಉಂಟುಮಾಡಲಾಗುತ್ತಿದೆ ಎಂದು ನಾಯಕರು ದೂರಿದ್ದಾರೆ.
ದೊಡ್ಡ ಸಂಖ್ಯೆಯಲ್ಲಿ ಬನ್ನಿ: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮನವಿ
ಬಳ್ಳಾರಿ: ನಾಳೆ ಸಂಜೆ ನಾಲ್ಕು ಗಂಟೆಗೆ ಈ ಪಾದಯಾತ್ರೆಯ ಸಮಾರೋಪ ಕಾರ್ಯಕ್ರಮ ನಡೆಯಲಿದೆ. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಇವತ್ತು ಅಭಿಮಾನಿಗಳು ಬರಲಿದ್ದಾರೆ. ಎಲ್ಲಾ ಕಾರ್ಯಕರ್ತರು, ತಾಯಂದಿರು, ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮನವಿ ಮಾಡಿದ್ದಾರೆ.
ರಾಜ್ಯದ ಈ ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಾಲ್ನಡಿಗೆ ಯಶಸ್ವಿಯಾಗಿದೆ. ದಲಿತ ವಿರೋಧಿ, ಬಡವರ ವಿರೋಧಿ, ರೈತ ವಿರೋಧಿ, ಮಹಿಳಾ ವಿರೋಧಿ, ಯುವಕರ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿಯ ಈ ಬೃಹತ್ ಪಾದಯಾತ್ರೆ ನಡೆದಿದೆ. ಈ ಸರಕಾರವು ಭ್ರಷ್ಟಾಚಾರದಲ್ಲಿ ಮುಳುಗಿದೆ. ಇಂಥ ಭ್ರಷ್ಟ ಕಾಂಗ್ರೆಸ್ ಸರ್ಕಾರದ ಬಣ್ಣ ಬಯಲು ಮಾಡುವ ಈ ಅಭೂತಪೂರ್ವ ಪಾದಯಾತ್ರೆ ನಾಳೆ ಸಮಾರೋಪಗೊಳ್ಳಲಿದೆ. ತಾವು ಎಲ್ಲರೂ ಕೂಡ ದೊಡ್ಡ ಸಂಖ್ಯೆಯಲ್ಲಿ ಬಂದು ನಮ್ಮ ಹೋರಾಟಕ್ಕೆ ಬೆಂಬಲ ನೀಡಬೇಕು ಅಂತ ಹೇಳಿ ವಿನಂತಿಸಿದರು.
ನಾಲ್ಕು ಗಂಟೆಗೆ ಸರಿಯಾಗಿ ಮುನ್ಸಿಪಲ್ ಕಾಲೇಜು ಮೈದಾನಕ್ಕೆ ಬರಬೇಕು. ನಾಲ್ಕುವರೆಗೆ ಬೃಹತ್ ಬಹಿರಂಗ ಸಭೆ ಕಾರ್ಯಕ್ರಮ ಪ್ರಾರಂಭ ಆಗಲಿದೆ. ನಾಲ್ಕು ಗಂಟೆಗೆ ಸರಿಯಾಗಿ ಈ ಪಾದಯಾತ್ರೆ ಪ್ರಾರಂಭ ಆಗುತ್ತದೆ. ನಾಲ್ಕುವರೆಗೆ ಬಹಿರಂಗ ಸಭೆ ಇದೆ ಎಂದರು.