ಖ್ಯಾತ ಆನ್‌ಲೈನ್ ಕಂಟೆಂಟ್ ಕ್ರಿಯೇಟರ್ ಹಾಗೂ ಬರ್ಲೆಸ್ಕ್ ಪರ್ಫಾರ್ಮರ್ ಆಗಿ ಗುರುತಿಸಿಕೊಂಡಿದ್ದ ಲುಲು ಲವ್‌ಬಾಟಮ್ ಅಲಿಯಾಸ್ ಹಂಟರ್ ಹಾರ್ಡಿನ್ ತಮ್ಮ 31ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಲಾಸ್ ಏಂಜಲೀಸ್ ಕೌಂಟಿ ಮೆಡಿಕಲ್ ಎಕ್ಸಾಮಿನರ್ ಈ ಸಾವು ಸೆಪ್ಟೆಂಬರ್ 7ರಂದು ಸಂಭವಿಸಿದೆ ಎಂದು ದೃಢಪಡಿಸಿದ್ದು, ಪ್ರಕರಣದ ತನಿಖೆ ನಡೆಯುತ್ತಿದೆ.
ನಿಧನಕ್ಕೂ ಮುನ್ನ ಲುಲು ಲವ್‌ಬಾಟಮ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಕೊನೆಯವರೆಗೂ ಹೋರಾಡಲು ಸಾಧ್ಯವಾಗದ್ದಕ್ಕೆ ಕ್ಷಮೆ ಕೋರುತ್ತಾ, ಎಲ್ಲರಿಗೂ ಪ್ರೀತಿಯ ವಿದಾಯ ಎಂದು ಬರೆದುಕೊಂಡಿದ್ದರು. ಜೊತೆಗೆ ವೈಯಕ್ತಿಕ ಜೀವನದಲ್ಲಿ ಎದುರಾದ ನೋವಿನ ಬಗ್ಗೆಯೂ ಅವರು ಸುಳಿವು ನೀಡಿದ್ದರು. ಈ ಪೋಸ್ಟ್ ಬೆನ್ನಲ್ಲೇ ಅವರ ಕೊಠಡಿಯಲ್ಲಿದ್ದ ಗೆಳೆಯರು ಪೊಲೀಸರಿಗೆ ಮತ್ತು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕೆ ತಲುಪುವಷ್ಟರಲ್ಲಿ ಪ್ರಾಣ ಪಕ್ಷಿ ಹಾರಿಹೋಗಿತ್ತು.
ಹಂಟರ್ ಹಾರ್ಡಿನ್ ಕೇವಲ ಬರ್ಲೆಸ್ಕ್ ಪರ್ಫಾರ್ಮರ್ ಮಾತ್ರವಲ್ಲದೆ, ತಮ್ಮ ಪ್ರೌಢಶಾಲಾ ದಿನಗಳಲ್ಲಿ ಫುಟ್‌ಬಾಲ್‌ನಲ್ಲಿ ಸ್ಟೇಟ್ ಚಾಂಪಿಯನ್ ಆಗಿ ಪ್ರಶಸ್ತಿ ಗೆದ್ದಿದ್ದರು. ಕ್ರೀಡಾರಂಗದಿಂದ ಗ್ಲಾಮರ್ ಲೋಕಕ್ಕೆ ಹೆಜ್ಜೆ ಇಟ್ಟಿದ್ದ ಇವರು, ಮಾನಸಿಕ ಖಿನ್ನತೆಯ ವಿರುದ್ಧ ಹೋರಾಡಲು ಕ್ರೀಡೆ ತಮಗೆ ನೆರವಾಯಿತು ಎಂದು ಹಿಂದೆ ಹೇಳಿಕೊಂಡಿದ್ದರು. ನಂತರ ಆನ್‌ಲೈನ್ ಲೋಕದಲ್ಲಿ ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿದ್ದರು.
ಇವರ ಹಠಾತ್ ಅಗಲಿಕೆಗೆ ಅಭಿಮಾನಿಗಳು ಹಾಗೂ ಆನ್‌ಲೈನ್ ರಂಗದ ಸ್ನೇಹಿತರು ಕಂಬನಿ ಮಿಡಿದಿದ್ದಾರೆ. ಪ್ರೀತಿ ಮತ್ತು ಸಕಾರಾತ್ಮಕತೆಯಿಂದ ಎಲ್ಲರ ಗಮನ ಸೆಳೆಯುತ್ತಿದ್ದ ಗೆಳೆಯನ ಅಗಲಿಕೆ ತೀವ್ರ ದುಃಖ ತಂದಿದೆ ಎಂದು ಅವರ ಆಪ್ತ ಸ್ನೇಹಿತರು ಕಂಬನಿ ಮಿಡಿದಿದ್ದಾರೆ.