ಹಾಸನ: ನಗರದ ಹೊರವಲಯದ ಕೆಂಚಟ್ಟಹಳ್ಳಿ ಬಳಿಯ ಫ್ಲೈಓವರ್ ಮೇಲೆ ಪೆಟ್ರೋಲ್ ತುಂಬಿದ್ದ ಟ್ಯಾಂಕರ್ ನಿಯಂತ್ರಣ ತಪ್ಪಿ ಉರುಳಿ ಬಿದ್ದಿರುವ ಗಂಭೀರ ಘಟನೆ ಸಂಭವಿಸಿದೆ. ಅಪಘಾತದ ರಭಸಕ್ಕೆ ಟ್ಯಾಂಕರ್‌ನಿಂದ ಅಪಾರ ಪ್ರಮಾಣದ ಪೆಟ್ರೋಲ್ ರಸ್ತೆಯಲ್ಲೆಲ್ಲ ಹರಿದು ಹೋಗುತ್ತಿದ್ದು, ಬಿಸಿಲ ತಾಪಮಾನ ಹೆಚ್ಚಾಗಿರುವುದರಿಂದ ಬೆಂಕಿ ಹೊತ್ತಿಕೊಳ್ಳುವ ಭೀತಿ ಎದುರಾಗಿದೆ. ಅಪಾಯವನ್ನು ಮನಗಂಡು ಮುನ್ನೆಚ್ಚರಿಕಾ ಕ್ರಮವಾಗಿ ಫ್ಲೈಓವರ್ ಮೇಲಿನ ವಾಹನ ಸಂಚಾರವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ.
ಈ ಟ್ಯಾಂಕರ್ ತಮಿಳುನಾಡಿನಿಂದ ಹಾಸನದ ಹೆಚ್‌ಪಿಸಿಎಲ್ (HPCL) ಘಟಕಕ್ಕೆ ಆಗಮಿಸುತ್ತಿತ್ತು ಎಂದು ತಿಳಿದುಬಂದಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ, ಬೆಂಕಿ ಅವಘಡ ತಡೆಯಲು ಪೆಟ್ರೋಲ್ ಹರಿಯುತ್ತಿರುವ ಜಾಗಕ್ಕೆ ನಿರಂತರವಾಗಿ ನೀರು ಚಿಮುಕಿಸುತ್ತಿದ್ದಾರೆ. ಪ್ರಾಣಾಪಾಯ ಅಥವಾ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಸೋರುತ್ತಿರುವ ಪೆಟ್ರೋಲ್ ಅನ್ನು ನಿಯಂತ್ರಣಕ್ಕೆ ತರಲು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ವಾರಾಂತ್ಯ ಹಾಗೂ ಗೌರಿ-ಗಣೇಶ ಹಬ್ಬದ ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 75 (ಬೆಂಗಳೂರು-ಮಂಗಳೂರು ರಸ್ತೆ)ಯಲ್ಲಿ ವಾಹನಗಳ ದಟ್ಟಣೆ ಈಗಾಗಲೇ ಹೆಚ್ಚಾಗಿತ್ತು. ಇದೀಗ ಈ ರಸ್ತೆ ಬಂದ್ ಆಗಿರುವುದರಿಂದ ಹೆದ್ದಾರಿಯಲ್ಲಿ ಕಿಲೋಮೀಟರ್‌ಗಟ್ಟಲೆ ಭಾರಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ತೀವ್ರ ಪರದಾಟ ನಡೆಸುತ್ತಿದ್ದಾರೆ. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಮತ್ತು ವಾಹನ ದಟ್ಟಣೆ ನಿಯಂತ್ರಿಸಲು ಸಂಚಾರಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.