ಶಿವಮೊಗ್ಗ: ಕನ್ನಡ ರಂಗಭೂಮಿಯ ದಿಗ್ಗಜ ನಿರ್ದೇಶಕ, ಮೈಸೂರಿನ ರಂಗಾಯಣದ ಮಾಜಿ ನಿರ್ದೇಶಕ ಹಾಗೂ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ (ಎನ್‌ಎಸ್‌ಡಿ) ನಿವೃತ್ತ ಪ್ರಾಧ್ಯಾಪಕರಾಗಿದ್ದ ಚಿದಂಬರ ರಾವ್ ಜಂಬೆ ಅವರು ವಿಧಿವಶರಾಗಿದ್ದಾರೆ. ಅವರ ಅಗಲಿಕೆಯಿಂದಾಗಿ ಕನ್ನಡ ನಾಡಿನ ರಂಗ ಪರಂಪರೆಯ ಪ್ರಮುಖ ಕೊಂಡಿಯೊಂದು ಕಳಚಿದಂತಾಗಿದ್ದು, ಇಡೀ ರಂಗಭೂಮಿ ಶೋಕಸಾಗರದಲ್ಲಿ ಮುಳುಗಿದೆ ಎಂಬುದಾಗಿ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಸಂತಾಪ ಸೂಚಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಹೇಳಿಕೆ ಪ್ರಕಟಿಸಿರುವಂತ ಅವರು, ಉತ್ತರ ಕನ್ನಡ ಜಿಲ್ಲೆಯ ಜಂಬೆ ಮೂಲದವರಾದ ಚಿದಂಬರ ರಾವ್ ಅವರು ರಂಗಭೂಮಿಯನ್ನೇ ಬದುಕಾಗಿಸಿಕೊಂಡು ದಶಕಗಳ ಕಾಲ ಸೇವೆ ಸಲ್ಲಿಸಿದವರು. ರಾಷ್ಟ್ರೀಯ ನಾಟಕ ಶಾಲೆಯಲ್ಲಿ (ಎನ್‌ಎಸ್‌ಡಿ) ಪರಿಣಿತಿ ಪಡೆದ ಬಳಿಕ, ಹೆಗ್ಗೋಡಿನ ನೀನಾಸಂ ರಂಗ ಶಿಕ್ಷಣ ಕೇಂದ್ರದ ಪ್ರಾಂಶುಪಾಲರಾಗಿ ಗ್ರಾಮೀಣ ಭಾಗದ ನೂರಾರು ಯುವ ಪ್ರತಿಭೆಗಳಿಗೆ ರಂಗಶಿಕ್ಷಣ ನೀಡಿದರು. ಇಂದು ಚಿತ್ರರಂಗ ಹಾಗೂ ರಂಗಭೂಮಿಯಲ್ಲಿ ಹೆಸರಾಗಿರುವ ಅನೇಕ ಕಲಾವಿದರು ಮತ್ತು ತಂತ್ರಜ್ಞರನ್ನು ರೂಪಿಸಿದ ಹಿರಿಮೆ ಇವರ ಮಾರ್ಗದರ್ಶನಕ್ಕೆ ಸಲ್ಲುತ್ತದೆ ಎಂದಿದ್ದಾರೆ.
ಬಿ.ವಿ. ಕಾರಂತರ ನಂತರ ಮೈಸೂರಿನ ರಂಗಾಯಣದ ಸಾರಥ್ಯ ವಹಿಸಿಕೊಂಡ ಚಿದಂಬರ ರಾವ್ ಜಂಬೆ, ಆ ಸಂಸ್ಥೆಯ ಕಲಾ ಚಟುವಟಿಕೆಗಳಿಗೆ ಮತ್ತಷ್ಟು ಗಾಂಭೀರ್ಯ ಮತ್ತು ಹೊಸ ಆಯಾಮ ತಂದುಕೊಟ್ಟರು. ವಿಶ್ವಶ್ರೇಷ್ಠ ಷೇಕ್ಸ್‌ಪಿಯರ್ ಕೃತಿಗಳು, ಗ್ರೀಕ್ ಮತ್ತು ಸಂಸ್ಕೃತ ನಾಟಕಗಳನ್ನು ಸ್ಥಳೀಯ ಸಂವೇದನೆಗಳಿಗೆ ತಕ್ಕಂತೆ ರಂಗದ ಮೇಲೆ ತಂದು ಅದ್ಭುತ ಯಶಸ್ಸು ಕಂಡರು. ಅವರ ಶಿಸ್ತುಬದ್ಧ ರಂಗ ನಿರ್ದೇಶನ ಮತ್ತು ಪ್ರಯೋಗಶೀಲತೆ ಭಾರತೀಯ ರಂಗಭೂಮಿಯ ಇತಿಹಾಸದಲ್ಲಿ ಸದಾ ಸ್ಮರಣೀಯ ಎಂಬುದಾಗಿ ನೆನಪು ಮಾಡಿಕೊಂಡಿದ್ದಾರೆ.
ರಂಗ ಕ್ಷೇತ್ರಕ್ಕೆ ನೀಡಿದ ನಿಸ್ವಾರ್ಥ ಹಾಗೂ ಅಮೂಲ್ಯ ಕೊಡುಗೆಯನ್ನು ಗುರುತಿಸಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ಗೌರವಗಳು ಅವರಿಗೆ ಲಭಿಸಿದ್ದವು. ತಮ್ಮ ಜೀವನದ ಕೊನೆಯ ಕ್ಷಣದವರೆಗೂ ರಂಗಭೂಮಿಯ ಅಧ್ಯಯನ, ನಾಟಕ ಕೃತಿಗಳ ಅನುವಾದ ಮತ್ತು ರಂಗ ತರಬೇತಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂಬುದಾಗಿ ಹೇಳಿದ್ದಾರೆ.
ಖ್ಯಾತ ರಂಗಭೂಮಿ ನಿರ್ದೇಶಕರು, ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ ಪ್ರಾಧ್ಯಾಪಕರು, ನೀನಾಸಂ ರಂಗ ಶಿಕ್ಷಣ ಕೇಂದ್ರದ ಪ್ರಾಂಶುಪಾಲರು ಹಾಗೂ ಮೈಸೂರಿನ ರಂಗಾಯಣದ ನಿರ್ದೇಶಕರಾಗಿದ್ದರು. ಇಂತಹ ಚಿದಂಬರ ರಾವ್ ಜಂಬೆ ಅವರು ನಿಧನರಾದಂತ ಸುದ್ದಿ ತಿಳಿದು ಅತ್ಯಂತ ದುಖವಾಯಿತು. ಅವರು ಅವರ ಕುಟಂಬ, ಅಪಾರ ಶಿಷ್ಯ ಬಳಗವನ್ನು ಅಗಲಿದ್ದಾರೆ. ಅವರ ಆತ್ಮಕ್ಕೆ ಅಂತಿಮ ನಮನಗಳು ಎಂಬುದಾಗಿ ಸಂತಾಪ ಸೂಚಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..