ಬೆಂಗಳೂರು: ನಾಡಿನ ಖ್ಯಾತ ಹಿರಿಯ ರಂಗಕರ್ಮಿ, ನಿರ್ದೇಶಕ, ರಂಗ ಶಿಕ್ಷಕ, ಚಿಂತಕ ಚಿದಂಬರರಾವ್ ಜಂಬೆ ಅವರ ನಿಧನಕ್ಕೆ ಕರ್ನಾಟಕ ವಿಧಾನಪರಿಷತ್ ಉಪಸಭಾಪತಿಗಳು ಹಾಗೂ ಹಿರಿಯ ಕಲಾವಿದರಾದ ಡಾ. ಉಮಾಶ್ರೀ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕನ್ನಡ ರಂಗಭೂಮಿಯ ಬೆಳವಣೆಗೆಯಲ್ಲಿ ಹಲವು ದಶಕಗಳ ಕಾಲ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಚಿದಂಬರರಾವ್ ಜಂಬೆ ಅವರು, ರಂಗ ನಿರ್ದೇಶನ ಮಾತ್ರವಲ್ಲದೆ, ರಂಗಶಿಕ್ಷಣಕ್ಕೂ ಹೆಚ್ಚಿನ ಮಹತ್ವ ನೀಡಿದ್ದರು. ಹಲವು ತಲೆಮಾರುಗಳ ಕಲಾವಿದರು ಮತ್ತು ರಂಗಾಸಕ್ತರಿಗೆ ತರಬೇತಿ ನೀಡಿದ ರಂಗಶಿಕ್ಷಕರು.
ವಿಭಿನ್ನ ಸಾಹಿತ್ಯಿಕ ಮತ್ತು ಸಾಮಾಜಿಕ ಹಿನ್ನೆಲೆಯ ಕೃತಿಗಳನ್ನು ರಂಗಕ್ಕೆ ಅಳವಡಿಸುವ ಮೂಲಕ ಕನ್ನಡ ರಂಗಭೂಮಿಯ ಪ್ರಯೋಗಶೀಲತೆಯನ್ನು ವಿಸ್ತರಿಸಿದರು. ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ಅನೇಕರು ರಂಗಭೂಮಿ, ಚಿತ್ರರಂಗ, ಕಿರುತೆರೆ ಹಾಗೂ ರಂಗಶಿಕ್ಷಣ ಕ್ಷೇತ್ರಗಳಲ್ಲಿ ತಮ್ಮದೇ ಆದ ಸ್ಥಾನ ಪಡೆದುಕೊಂಡಿದ್ದಾರೆ.
ತಮಗೂ ಕೂಡ ಹಿರಿಯರಾದ ಚಿದಂಬರರಾವ್ ಜಂಬೆ ಅವರು ಒಳ್ಳೆಯ ಮಾರ್ಗದರ್ಶಕರಾಗಿದ್ದರು. ಅವರ ನಿರ್ದೇಶನದ ಶ್ರಮಿಷ್ಠೆ ನಾಟಕವನ್ನು ತಮ್ಮ ಮೂಲಕ ಪ್ರದರ್ಶಿಸಿ, ತಮ್ಮನ್ನು ಇಡೀ ನಾಡಿನಾದ್ಯಂತ ʼಶ್ರಮಿಷ್ಠೆʼ ಯಾಗಿ ಪರಿಚಯಿಸಿದರು. ಶ್ರಮಿಷ್ಠೆ ಮೂಲಕ ಸಮಕಾಲೀನ ಪ್ರೇಕ್ಷಕರಿಗೆ ಪರಿಣಾಮಯಾಗಿ ತಲುಪಿಸುವ ಪ್ರಯತ್ನ ಅವರ ನಿರ್ದೇಶನದಲ್ಲಿ ಎದ್ದು ಕಾಣುತ್ತಿತ್ತು.
ಕರ್ನಾಟಕ ರಂಗಶಿಕ್ಷಣ ಕ್ಷೇತ್ರದಲ್ಲಿ ಚಿದಂಬರರಾವ್ ಜಂಬೆ ಅವರ ಕೊಡುಗೆ ಅನನ್ಯ. ಅವರ ಅಗಲಿಕೆ ನಿಜಕ್ಕೂ ಅತ್ಯಂತ ದುಃಖ ತರುವಂತಹದ್ದು. ಜಂಬೆಯವರ ನಿಧನದಿಂದ ಕನ್ನಡ ರಂಗಕ್ಷೇತ್ರ ಬಡವಾಗಿದೆ. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ. ಅವರ ಅಗಲಿಕೆಯಿಂದ ಆವರ ಕುಟುಂಬಕ್ಕಾಗಿರುವ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಡಾ. ಉಮಾಶ್ರೀ ಅವರು ಪ್ರಾರ್ಥಿಸಿದ್ದಾರೆ.