ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿ ಆಂತರಿಕ ಕಿತ್ತಾಟ ಜೋರಾಗಿದೆ ಎಂದ ಸಿಎಂ ಡಿಕೆ ಶಿವಕುಮಾರ್, "ಈಗ ಬಿಜೆಪಿಯಲ್ಲಿ ದೊಡ್ಡ ಮಟ್ಟದ ಕಾಂಪಿಟೇಷನ್ ನಡೆಯುತ್ತಿದೆ. ಆರ್‌ಎಸ್‌ಎಸ್ ಅಥವಾ ಬಿಜೆಪಿ ನಾಯಕರು ಆರ್. ಅಶೋಕ ಅವರನ್ನು ಇಳಿಸಬೇಕಾ, ಬಿ.ವೈ. ವಿಜಯೇಂದ್ರ ಅವರನ್ನು ಇಳಿಸಬೇಕಾ ಎಂಬ ಬಗ್ಗೆ ಯೋಚಿಸುತ್ತಿದ್ದಾರೆ. ಇಲ್ಲವೇ ದೆಹಲಿಯಿಂದ ಯಾರಾದರೂ ಬಂದು ಇಲ್ಲಿ ಅಧ್ಯಕ್ಷ ಸ್ಥಾನದಲ್ಲಿ ಕೂರಬೇಕಾ ಎಂಬ ಸ್ಪರ್ಧೆ ಅವರಲ್ಲಿ ನಡೆಯುತ್ತಿದೆ" ಎಂದು ಲೇವಡಿ ಮಾಡಿದರು.
"ನಾವೆಲ್ಲ ಹಿಂದೂಗಳು ಅಲ್ಲವಾ, ಅವರದೆಲ್ಲ ಬರೀ ನಾಟಕ" ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬಿಜೆಪಿ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಗರದ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, "ಶ್ರೀರಾಮನ ಹೆಸರಿನಲ್ಲಿ ಬಂದ ದುಡ್ಡನ್ನೇ ಹೊಡೆದು ತಿಂದಿದ್ದಾರೆ. ನಿಮ್ಮ ಬೆವರು ಉಪ್ಪು, ನನ್ನ ಬೆವರೂ ಉಪ್ಪು, ಬಿಜೆಪಿ ನಾಯಕರ ರಕ್ತವೇನಾದರೂ ಪ್ರತ್ಯೇಕವಾಗಿದೆಯಾ? ಎಲ್ಲ ಜಾತಿಗಳನ್ನು ತನ್ನೊಳಗೆ ಒಳಗೊಂಡಿರುವುದೇ ನಮ್ಮ ಧರ್ಮ" ಎಂದು ಕಿಡಿಕಾರಿದರು.
ಬಿಜೆಪಿ ನಾಯಕರ ಅಲ್ಪಸಂಖ್ಯಾತರ ವಿರೋಧಿ ಹೇಳಿಕೆಗಳಿಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, "ಬಿಜೆಪಿ ನಾಯಕರು ನಿರಂತರವಾಗಿ ಅಲ್ಪಸಂಖ್ಯಾತರನ್ನು ವಿರೋಧಿಸುತ್ತಿದ್ದಾರೆ. ಅಷ್ಟೊಂದು ವಿರೋಧವಿದ್ದರೆ ಕೇಂದ್ರದಲ್ಲಿರುವ ಮೈನಾರಿಟಿ ಇಲಾಖೆಯನ್ನು ತಕ್ಷಣವೇ ಮುಚ್ಚಿಬಿಡಲಿ ನೋಡೋಣ. ಅಲ್ಪಸಂಖ್ಯಾತರನ್ನು 'ಪಂಕ್ಚರ್ ಹಾಕೋರು' ಎಂದು ಕೀಳಾಗಿ ಮಾತನಾಡುತ್ತಾರೆ, ಆದರೆ ಅವರು ಇಲ್ಲದಿದ್ದರೆ ಇವರ ಗಾಡಿ ಓಡುತ್ತದೆಯೇ?" ಎಂದು ಆಕ್ರೋಶ ಹೊರಹಾಕಿದರು.
ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಿರುದ್ಧವೂ ವಾಗ್ದಾಳಿ ನಡೆಸಿದ ಡಿಕೆಶಿ, "ಜನ ಅಧಿಕಾರ ಕೊಟ್ಟಾಗ ಕುಮಾರಸ್ವಾಮಿ ಏನನ್ನೂ ಮಾಡಲಿಲ್ಲ. ದೆಹಲಿಯಲ್ಲಿ ಬಾಂಬ್ ಬೀಳುತ್ತದೆ, ದೇಶವೇ ಅಲ್ಲೋಲ ಕಲ್ಲೋಲ ಆಗುತ್ತದೆ ಎಂದೆಲ್ಲ ಹೇಳುತ್ತಾರಲ್ಲ, ಈಗ ಅವರ ಸ್ಥಿತಿಯೇ ಅಲ್ಲೋಲ ಕಲ್ಲೋಲ ಆಗಿದೆ" ಎಂದರು. ಅಲ್ಲದೆ, "ಪೆನ್ ಡ್ರೈವ್ ಸುದ್ದಿ ಬಗ್ಗೆ ಕೇಳಬೇಡಿ, ಪಾಪ ಯಾರ ಯಾರ ಕುಟುಂಬಕ್ಕೆ ಏನೇನಾಯ್ತು ಎಂಬುದು ಎಲ್ಲರಿಗೂ ಗೊತ್ತಿದೆ. ನಮ್ಮ ಎದುರಿಗೆ ಇಡಿ (ED) ಬಿಡಿ, ಬೇರೆ ಯಾವುದೇ ತನಿಖಾ ಸಂಸ್ಥೆ ಬಿಡಿ, ಕೊನೆಗೆ ಜೈಲಿಗಾದರೂ ಹಾಕಿ, ನಾವು ಯಾವುದಕ್ಕೂ ಹೆದರುವುದಿಲ್ಲ" ಎಂದು ಡಿಕೆ ಶಿವಕುಮಾರ್ ಸವಾಲು ಹಾಕಿದರು.