ಹಾವೇರಿ: ಪ್ರೀತಿಸಿದ ಯುವತಿಯನ್ನು ಮದುವೆಯಾಗಿದ್ದರೂ, ಪೋಷಕರ ವಿರೋಧದಿಂದಾಗಿ ಆಕೆಯಿಂದ ದೂರವಾಗಬೇಕಾಗಿ ಬಂದ ನೋವಿನಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ಹಾವೇರಿ ನಗರದ ದೇವದಾರ್ ಬಡಾವಣೆಯಲ್ಲಿ ವರದಿಯಾಗಿದೆ.
ಸ್ಥಳೀಯ ನಿವಾಸಿ 24 ವರ್ಷದ ಮಂಜುನಾಥ್ ಅಗಡಿ ಮೃತ ದುರ್ದೈವಿ. ಸಾವಿಗೂ ಮುನ್ನ ಆತ ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ, ‘ಮುಂದಿನ ಜನ್ಮ ಅಂತ ಒಂದಿದ್ದರೆ, ನಾನು ನಿನ್ನವನಾಗಿಯೇ ಹುಟ್ಟಿ ಬರುತ್ತೇನೆ’ ಎಂದು ಭಾವುಕ ಸಂದೇಶ ಹಂಚಿಕೊಂಡು ಈ ಕೃತ್ಯಕ್ಕೆ ಕೈಹಾಕಿದ್ದಾನೆ.
ಪ್ರಕರಣದ ಹಿನ್ನೆಲೆ:
ಮಂಜುನಾಥ್ ಕಳೆದ ಎರಡು ವರ್ಷಗಳಿಂದ ಯುವತಿಯೊಬ್ಬಳನ್ನು ಗಾಢವಾಗಿ ಪ್ರೀತಿಸುತ್ತಿದ್ದ. ಇಬ್ಬರೂ ಇತ್ತೀಚೆಗೆ ದೇವಸ್ಥಾನವೊಂದರಲ್ಲಿ ಸರಳವಾಗಿ ವಿವಾಹವಾಗಿದ್ದರು. ಆದರೆ, ಈ ವಿವಾಹ ಸಂಬಂಧಕ್ಕೆ ಯುವತಿಯ ಕುಟುಂಬದವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಸಂಬಂಧ ಆಕೆಯ ಪೋಷಕರು ಹಾವೇರಿಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು (ಮಿಸ್ಸಿಂಗ್ ಕೇಸ್) ದಾಖಲಿಸಿದ್ದರು.
ದೂರಿನನ್ವಯ ಪೊಲೀಸರು ಇತ್ತೀಚೆಗೆ ಇಬ್ಬರನ್ನೂ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು. ವಿಚಾರಣೆಯ ನಂತರ ಯುವತಿಯ ಕುಟುಂಬಸ್ಥರು ಆಕೆಯನ್ನು ಬಲವಂತವಾಗಿ ತಮ್ಮೊಂದಿಗೆ ಮನೆಗೆ ಕರೆದೊಯ್ದಿದ್ದರು ಎನ್ನಲಾಗಿದೆ. ಕೈಹಿಡಿದ ಹೆಂಡತಿ ಕಣ್ಮುಂದೆಯೇ ದೂರವಾದ ಆಘಾತ ಹಾಗೂ ತೀವ್ರ ಮಾನಸಿಕ ಖಿನ್ನತೆಗೆ ಒಳಗಾದ ಮಂಜುನಾಥ್, ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾನೆ.
ಮಗನ ಅಕಾಲಿಕ ಸಾವಿನಿಂದ ಆಘಾತಕ್ಕೊಳಗಾದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.