ಚಾಮರಾಜನಗರ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನೊಬ್ಬನ ಮೇಲೆ ಏಕಾಏಕಿ ಎರಗಿದ ನರಭಕ್ಷಕ ಹುಲಿ, ಆತನನ್ನು ಬಲಿಪಡೆದು ದೇಹದ ಭಾಗಗಳನ್ನು ತಿಂದು ಹಾಕಿರುವ ಘೋರ ಘಟನೆ ಚಾಮರಾಜನಗರ ತಾಲೂಕಿನ ಬಡಗಲಪುರ ಗ್ರಾಮದಲ್ಲಿ ನಡೆದಿದೆ. ಘಟನೆಯಿಂದ ಇಡೀ ಗ್ರಾಮಸ್ಥರು ತೀವ್ರ ಆತಂಕ ಹಾಗೂ ಭಯದ ನೆರಳಿನಲ್ಲಿ ಕಾಲ ಕಳೆಯುತ್ತಿದ್ದಾರೆ.
ಜಮೀನಿನಲ್ಲಿ ಹುಲ್ಲು ಕೊಯ್ಯುವಾಗ ಅಟ್ಯಾಕ್
ಬಡಗಲಪುರ ಗ್ರಾಮದ ನಿವಾಸಿ ಬಸವಣ್ಣ (60) ಮೃತ ದುರ್ದೈವಿ ರೈತ. ಎಂದಿನಂತೆ ತಮ್ಮ ಕೃಷಿ ಜಮೀನಿನಲ್ಲಿ ದನ-ಕರುಗಳಿಗಾಗಿ ಹುಲ್ಲು ಕೊಯ್ಯುತ್ತಿದ್ದ ಸಂದರ್ಭದಲ್ಲಿ ಕಬ್ಬಿನ ಗದ್ದೆ ಅಥವಾ ಪೊದೆಯಲ್ಲಿದ್ದ ಹುಲಿ ಏಕಾಏಕಿ ಬಸವಣ್ಣನ ಮೇಲೆ ದಾಳಿ ನಡೆಸಿದೆ. ತೀವ್ರವಾಗಿ ದಾಳಿ ಮಾಡಿದ ವ್ಯಾಘ್ರ, ರೈತನ ದೇಹದ ಕಾಲು ಭಾಗವನ್ನು ತಿಂದು ಹಾಕಿ ಭೀಕರತೆ ಮೆರೆದಿದೆ.
ಹುಡುಕಿಕೊಂಡು ಹೋದಾಗ ಬಯಲಾಯ್ತು ಘೋರ ದೃಶ್ಯ
ಸಂಜೆಯಾಗಿ ಕತ್ತಲಾವರಿಸಿದರೂ ಬಸವಣ್ಣ ಮನೆಗೆ ಮರಳದ ಕಾರಣ ಗಾಬರಿಗೊಂಡ ಕುಟುಂಬಸ್ಥರು ಆತಂಕದಿಂದ ಜಮೀನಿನ ಕಡೆ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಜಮೀನಿನಲ್ಲಿ ಬಸವಣ್ಣನ ಛಿದ್ರಗೊಂಡ ಶವ ಕಂಡು ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಓಡೋಡಿ ಬಂದ ನೂರಾರು ಗ್ರಾಮಸ್ಥರನ್ನು ನೋಡಿ ಗಾಬರಿಗೊಂಡ ಹುಲಿ, ಸಮೀಪದ ಕಬ್ಬಿನ ತೋಪಿನೊಳಗೆ ನುಗ್ಗಿ ಅಡಗಿ ಕುಳಿತಿದೆ.
ಸ್ಥಳದಲ್ಲೇ ಜಮಾಯಿಸಿದ ಗ್ರಾಮಸ್ಥರು: ಅರಣ್ಯ ಇಲಾಖೆ ವಿರುದ್ಧ ಆಕ್ರೋಶ
ಹುಲಿ ಸಮೀಪದ ಕಬ್ಬಿನ ತೋಟದಲ್ಲೇ ಹೊಂಚು ಹಾಕಿ ಕುಳಿತಿರುವ ಕಾರಣ, ಮೃತದೇಹವನ್ನು ಹುಲಿ ಎಳೆದೊಯ್ಯದಂತೆ ಕಾಯಲು ಕುಟುಂಬಸ್ಥರು ಮತ್ತು ಗ್ರಾಮಸ್ಥರು ಪ್ರಾಣದ ಹಂಗು ತೊರೆದು ಜಮೀನಿನಲ್ಲೇ ಬೀಡುಬಿಟ್ಟಿದ್ದಾರೆ. ಆದರೆ ಸ್ಥಳದಲ್ಲೇ ಹುಲಿ ಇರುವ ಕಾರಣ ಮೃತರ ಕುಟುಂಬಸ್ಥರ ಮೇಲೂ ದಾಳಿ ಮಾಡುವ ಭೀತಿ ಎದುರಾಗಿದೆ.
ಘಟನೆ ನಡೆದು ಗಂಟೆಗಳು ಕಳೆದರೂ ಬಿಳಿಗಿರಿ ರಂಗನಾಥಸ್ವಾಮಿ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ (BRT Tiger Reserve) ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿಲ್ಲ ಎಂದು ಆರೋಪಿಸಿರುವ ಗ್ರಾಮಸ್ಥರು, ಅರಣ್ಯ ಇಲಾಖೆಯ ನಿರ್ಲಕ್ಷ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಹುಲಿಯನ್ನು ಸೆರೆಹಿಡಿದು ಸೂಕ್ತ ರಕ್ಷಣೆ ಒದಗಿಸುವಂತೆ ಸ್ಥಳೀಯರು ಪಟ್ಟುಹಿಡಿದಿದ್ದಾರೆ.