ತೀರ್ಥಹಳ್ಳಿ: ಮಲೆನಾಡು ಭಾಗದ ರೈತರು ಹಾಗೂ ಬಡವರ ಭೂಮಿ ಹಕ್ಕುಗಳ ರಕ್ಷಣೆಗಾಗಿ ಕಸ್ತೂರಿ ರಂಗನ್ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು ಎಂದು ಮಾಜಿ ಸಚಿವ ಕಿಮ್ಮಾನೆ ರತ್ನಾಕರ್ ಸರ್ಕಾರವನ್ನು ಬಲವಾಗಿ ಆಗ್ರಹಿಸಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಡೆದ ಕಸ್ತೂರಿ ರಂಗನ್ ವರದಿ ಕುರಿತ ಸಿಎಂ ಡಿ.ಕೆ ಶಿವಕುಮಾರ್ ಜೊತೆಗೆ ಸಾರ್ವಜನಿಕರ ಸಂವಾದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಸಂಸತ್ತೇ ಸರ್ವೋಚ್ಚ, ಕಾಯ್ದೆ ತಿದ್ದುಪಡಿಗೆ ಆಗ್ರಹ
ಸಂವಿಧಾನದ ಚೌಕಟ್ಟಿನಲ್ಲಿ ಪಾರ್ಲಿಮೆಂಟ್‌ಗೆ ಅತ್ಯುನ್ನತ ಅಧಿಕಾರವಿದೆ ಎಂದು ಪ್ರತಿಪಾದಿಸಿದ ಅವರು, ಜನಪರ ಕಾಯ್ದೆ ತಿದ್ದುಪಡಿ ತರುವ ಸಂಪೂರ್ಣ ಶಕ್ತಿ ಸಂಸತ್ತಿಗಿದೆ ಎಂದರು. ಬಡ ಕುಟುಂಬಗಳಿಗೆ 30x40 ನಿವೇಶನ ಅಥವಾ ಕನಿಷ್ಠ ಜಮೀನು ಮಂಜೂರು ಮಾಡುವ ಸಂಪೂರ್ಣ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ವಹಿಸುವಂತೆ ಕೇಂದ್ರದ ಮೇಲೆ ಸಂಸದರು ಒತ್ತಡ ತರಬೇಕು ಎಂದು ಅವರು ಮನವಿ ಮಾಡಿದರು.
ಅವಾಸ್ತವಿಕ ಕಸ್ತೂರಿ ರಂಗನ್ ವರದಿಯ ಆತಂಕ
ಗಾಡ್ಗೀಳ್ ಮತ್ತು ಕಸ್ತೂರಿ ರಂಗನ್ ವರದಿಗಳು ಉಪಗ್ರಹ ಆಧಾರಿತ ಸರ್ವೇಯಿಂದ ಕೆಲವೇ ಅವಧಿಯಲ್ಲಿ ಸಿದ್ಧಗೊಂಡಿದ್ದು, ವಾಸ್ತವ ಜನಸಂಖ್ಯೆಯ ಬೆಳವಣಿಗೆಯನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ವರದಿ ಜಾರಿಯಾದರೆ ಮಲೆನಾಡಿಗರು ಮನೆ ಕಟ್ಟಲು, ರಸ್ತೆ ನಿರ್ಮಿಸಲು ಅಥವಾ ಶೌಚಾಲಯ ನಿರ್ಮಾಣ ಮಾಡಲೂ ಅನುಮತಿಗಾಗಿ ಪರದಾಡಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿ, ವರದಿಯನ್ನು ಪೂರ್ಣವಾಗಿ ತಿರಸ್ಕರಿಸುವಂತೆ ಕೋರಿದರು.
ಹಕ್ಕುಪತ್ರ ರದ್ದತಿ ನೋಟಿಸ್‌ಗಳ ವಿರುದ್ಧ ಆಕ್ರೋಶ
ತೀರ್ಥಹಳ್ಳಿ ಸೇರಿದಂತೆ ವಿವಿಧೆಡೆ ಮೈಸೂರು ಮಹಾರಾಜರ ಕಾಲದಲ್ಲೇ ಮಂಜೂರಾಗಿದ್ದ ಜಮೀನುಗಳಿಗೂ ಅಧಿಕಾರಿಗಳು ನೋಟಿಸ್ ನೀಡುತ್ತಿರುವುದು ಸರಿಯಲ್ಲ ಎಂದರು.
ಇಲ್ಲಿನ ಶೇಕಡಾ 90ರಷ್ಟು ಜನರು ಬಡವರಾಗಿದ್ದು, ಅವರಿಗೆ ನೀಡಲಾಗಿರುವ ಹಕ್ಕುಪತ್ರ ರದ್ದುಪಡಿಸುವ ನೋಟಿಸ್‌ಗಳನ್ನು ತಕ್ಷಣವೇ ಹಿಂಪಡೆಯಬೇಕು ಹಾಗೂ ಯಾವುದೇ ಬಡ ಕುಟುಂಬವನ್ನು ಬೀದಿಗೆ ತಳ್ಳಬಾರದು ಎಂದು ಒತ್ತಾಯಿಸಿದರು.
ಬೆಳೆಹಾನಿ ಹಾಗೂ ಮಾನವ–ಪ್ರಾಣಿ ಸಂಘರ್ಷ
ಮಲೆನಾಡಿನ ಕೃಷಿಕರು ಎಲೆಚುಕ್ಕಿ ಮತ್ತು ಅಡಿಕೆ ಕೊಳೆರೋಗದಿಂದ ಈಗಾಗಲೇ ನಲುಗಿದ್ದು, ಮತ್ತೊಂದೆಡೆ ಮಂಗಗಳ ಕಾಟದಿಂದ ಬೆಳೆ ರಕ್ಷಿಸಿಕೊಳ್ಳುವುದು ಸವಾಲಾಗಿದೆ ಎಂದು ತಿಳಿಸಿದರು.
ವನ್ಯಜೀವಿಗಳ ಹಾವಳಿಗೆ ಕಾನೂನಾತ್ಮಕವಾಗಿ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಹಾಗೂ ಸರ್ಕಾರ ದಿಟ್ಟ ಹೆಜ್ಜೆ ಇಡಬೇಕೆಂದು ತಿಳಿಸಿದರು.
ಬಡವರ ಸೂರು ರಕ್ಷಣೆಗೆ ಜೈಲಿಗೂ ಸಿದ್ಧ
ಸರ್ಕಾರಿ ಜಾಗದಲ್ಲಿ ಸಣ್ಣದೊಂದು ಸೂರು ಕಟ್ಟಿಕೊಂಡು ಬದುಕುತ್ತಿರುವ ಬಡವರ ಮನೆಗಳನ್ನು ತೆರವುಗೊಳಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಬಡವರ ಸೂರು ಮತ್ತು ಜೀವನ ರಕ್ಷಣೆಗಾಗಿ ಅಗತ್ಯಬಿದ್ದರೆ ಅವರ ಪರವಾಗಿ ಜೈಲಿಗೆ ಹೋಗಲೂ ತಾವು ಸಿದ್ಧವೆಂದು ಘೋಷಿಸಿದ ಅವರು, ವಿಧಾನಸಭೆಯಲ್ಲಿ ಈ ಬಗ್ಗೆ ಸ್ಪಷ್ಟ ನಿರ್ಣಯ ಕೈಗೊಳ್ಳುವಂತೆ ಸರ್ಕಾರಕ್ಕೆ ವಿನಂತಿಸಿದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..