LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರೈತರಿಗೆ ಯಾವುದೇ ಹೊಸ ನೋಟಿಸ್ ನೀಡುವಂತಿಲ್ಲ: ಸಿಎಂ ಡಿ.ಕೆ. ಶಿವಕುಮಾರ್ ಅರಣ್ಯ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ

ಶಿವಮೊಗ್ಗ / ತೀರ್ಥಹಳ್ಳಿ: "ನಾನು ಜನರ ಭಾವನೆಗಳ ಮೇಲೆ ರಾಜಕಾರಣ ಮಾಡಲು ಬಂದಿಲ್ಲ, ಜನರ ಬದುಕಿನ ಮೇಲೆ ರಾಜಕಾರಣ ಮಾಡಲು ಬಂದಿದ್ದೇನೆ. ರೈತರನ್ನು ರಕ್ಷಣೆ ಮಾಡಲು ಹಾಗೂ ಅವರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ನಾನೇ ಖುದ್ದಾಗಿ ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇನೆ," ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.

​ಮಲೆನಾಡಿನ ತೀರ್ಥಹಳ್ಳಿಯಲ್ಲಿ ಆಯೋಜಿಸಲಾಗಿದ್ದ ಕಸ್ತೂರಿ ರಂಗನ್ ವರದಿ ಕುರಿತ ಸಂವಾದ ಸಭೆಯಲ್ಲಿ ಬೃಹತ್ ಜನಪ್ರತಿನಿಧಿಗಳು ಹಾಗೂ ರೈತರ ಸಂವಾದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರೈತರ ಭೂಮಿ ಹಕ್ಕು, ಕಸ್ತೂರಿರಂಗನ್ ವರದಿ, ಬಗರ್‌ಹುಕುಂ, ಅರಣ್ಯ ಒತ್ತುವರಿ ಹಾಗೂ ಪರಿಸರ ಸೂಕ್ಷ್ಮ ವಲಯದ ಸಮಸ್ಯೆಗಳ ಕುರಿತು ಸುದೀರ್ಘವಾಗಿ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದರು.

​ವೇದಿಕೆಯಲ್ಲಿ ಪಕ್ಷಾತೀತ ನಾಯಕರ ಸಮಾಗಮ

​ಸಭೆಯ ವೇದಿಕೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಆರಗ ಜ್ಞಾನೇಂದ್ರ, ಗೋಪಾಲಕೃಷ್ಣ ಬೇಳೂರು, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಎಸ್.ಎನ್. ಚನ್ನಬಸಪ್ಪ, ಶಾರದಾ ಪೂರ್ಯಾನಾಯ್ಕ್, ಧನಂಜಯ ಸರ್ಜಿ, ಬಲ್ಕೀಸ್ ಬಾನು, ಎಂಎಲ್‌ಸಿ ಅರುಣ್, ಮಾಜಿ ಶಾಸಕ ಸ್ವಾಮಿರಾವ್, ಪ್ರಸನ್ನಕುಮಾರ್ ಹಾಗೂ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು ಉಪಸ್ಥಿತರಿದ್ದರು.

​ಜನರ ಬಳಿಗೇ ಬಂದ ಸರ್ಕಾರ

​ವಿಧಾನಸೌಧದಲ್ಲಿ ಕುಳಿತು ಅಧಿಕಾರಿಗಳೊಂದಿಗೆ ಕ್ಯಾಬಿನೆಟ್ ಸಭೆ ನಡೆಸಿ ಕಾಗದದ ಮೇಲೆ ಆದೇಶ ಹೊರಡಿಸುವುದರಿಂದ ಜನರ ಸಂಕಷ್ಟಗಳಿಗೆ ಪರಿಹಾರ ಸಿಗುವುದಿಲ್ಲ. ನಮ್ಮನ್ನು ಅಧಿಕಾರಕ್ಕೆ ತಂದ ಜನರ ಕಷ್ಟ-ಸುಖಗಳನ್ನು ಅವರ ಬಳಿಗೇ ತೆರಳಿ ಆಲಿಸಬೇಕು ಎಂಬ ಉದ್ದೇಶದಿಂದ ಈ ಸಭೆ ನಡೆಸಲಾಗುತ್ತಿದೆ. ಕಸ್ತೂರಿರಂಗನ್ ವರದಿಯ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜ್ಯದ ಅಭಿಪ್ರಾಯ ಕೇಳಿದೆ. ಈ ಹಿನ್ನೆಲೆಯಲ್ಲಿ ರೈತರು, ಸಾರ್ವಜನಿಕರು ಹಾಗೂ ಸರ್ವಪಕ್ಷಗಳ ಶಾಸಕರ ಅಭಿಪ್ರಾಯವನ್ನು ಪಡೆದು, ಎಲ್ಲರ ಭಾವನೆಗಳನ್ನು ಒಗ್ಗೂಡಿಸಿ ಕೇಂದ್ರ ಸರ್ಕಾರಕ್ಕೆ ಬಲವಾದ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.

​ರೈತರಿಗೆ ಯಾವುದೇ ಹೊಸ ನೋಟಿಸ್ ನೀಡದಂತೆ ತಾಕೀತು

​ಮಲೆನಾಡಿನ ರೈತರು ತಲೆತಲಾಂತರಗಳಿಂದ ಸಾಂಪ್ರದಾಯಿಕವಾಗಿ ಉಳುಮೆ ಮಾಡಿಕೊಂಡು ಬಂದಿರುವ ಜಮೀನು ಹಾಗೂ ನಿರ್ಮಿಸಿಕೊಂಡಿರುವ ಮನೆಗಳಿಗೆ ಯಾವುದೇ ಕಾರಣಕ್ಕೂ ತೊಂದರೆ ಕೊಡಬಾರದು. ಯಾವೊಬ್ಬ ರೈತನಿಗೂ ಹೊಸದಾಗಿ ಅರಣ್ಯ ಇಲಾಖೆಯಿಂದ ನೋಟಿಸ್ ಜಾರಿ ಮಾಡಬಾರದು ಎಂದು ಸಭೆಯಲ್ಲಿಯೇ ಹಾಜರಿದ್ದ ಅರಣ್ಯ ಸಚಿವರು ಮತ್ತು ಅಪರ ಮುಖ್ಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ (PCCF) ಖಡಕ್ ಸೂಚನೆ ನೀಡಿದರು. ಇದೇ ವೇಳೆ, ರೈತರೂ ಕೂಡ ಹೊಸದಾಗಿ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಲು ಮುಂದಾಗಬಾರದು ಎಂದು ಎಚ್ಚರಿಸಿದರು.

​ಪ್ರಜಾಸೇವಾ ಇಲಾಖೆ ಮೂಲಕ ಜನರ ಬಳಿಗೆ ಆಡಳಿತ

​ಜನಸಾಮಾನ್ಯರ ಕುಂದುಕೊರತೆಗಳನ್ನು ಪರಿಹರಿಸಲು ಸರ್ಕಾರ 'ಪ್ರಜಾಸೇವಾ ಇಲಾಖೆ' ಎಂಬ ನೂತನ ಇಲಾಖೆಯನ್ನು ಆರಂಭಿಸಿದೆ. ಸಚಿವರು ಕಡ್ಡಾಯವಾಗಿ ತಿಂಗಳಿಗೆ ಎರಡು ದಿನ ತಾಲೂಕು ಮತ್ತು ಹೋಬಳಿ ಮಟ್ಟಕ್ಕೆ ಭೇಟಿ ನೀಡಿ ಜನರ ಅಹವಾಲುಗಳನ್ನು ಆಲಿಸಬೇಕು. ಸಾರ್ವಜನಿಕರು ನೀಡುವ ಪ್ರತಿಯೊಂದು ಅರ್ಜಿಗೂ ಸ್ವೀಕೃತಿ ನೀಡಿ, ಕಂಪ್ಯೂಟರೀಕರಿಸಿ, ಹಂತ-ಹಂತವಾಗಿ ಪರಿಹಾರ ಒದಗಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.

​ಕರಾವಳಿ-ಮಲೆನಾಡು ಪ್ರವಾಸೋದ್ಯಮ ನೀತಿ ಜಾರಿ

​ನಿನ್ನೆ ಮಂಗಳೂರಿನಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಸಚಿವ ಸಂಪುಟ ಸಭೆ ನಡೆಸಿ ಹೊಸ ಪ್ರವಾಸೋದ್ಯಮ ನೀತಿಯನ್ನು ಅನುಮೋದಿಸಲಾಗಿದೆ. ಕರಾವಳಿಯ 360 ಕಿಲೋಮೀಟರ್ ಜತೆಗೆ ಮಲೆನಾಡು ಹಾಗೂ ಕಾಫಿ ನಾಡಿನ ಪ್ರದೇಶಗಳನ್ನೂ ಈ ನೀತಿಗೆ ಸೇರಿಸಲಾಗಿದೆ. ಇಲ್ಲಿನ ಪರಿಸರವನ್ನು ಸಂರಕ್ಷಿಸಿಕೊಂಡೇ ಪ್ರವಾಸೋದ್ಯಮವನ್ನು ಉತ್ತೇಜಿಸಿ, ಸ್ಥಳೀಯ ಜನರಿಗೆ ಉದ್ಯೋಗ ಮತ್ತು ಬಂಡವಾಳ ಹೂಡಿಕೆಗೆ ವಿಫುಲ ಅವಕಾಶ ಕಲ್ಪಿಸುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದರು.

​'ತೇಗದ ಸಿರಿ' ವಿನೂತನ ಯೋಜನೆ ಪ್ರಕಟ

​ರೈತರ ಜಮೀನಿನ ಬದಿಯ ಸರ್ಕಾರಿ ರಸ್ತೆ ಬದಿಗಳಲ್ಲಿ ಅರಣ್ಯ ಇಲಾಖೆಯಿಂದ ಉಚಿತವಾಗಿ ತೇಗದ ಸಸಿಗಳನ್ನು ನೀಡುವ 'ತೇಗದ ಸಿರಿ' ಯೋಜನೆಯನ್ನು ಪ್ರಕಟಿಸಿದರು. ಈ ಸಸಿಗಳನ್ನು ರೈತರೇ ಸಂರಕ್ಷಿಸಿ ಬೆಳೆಸಬೇಕು. 20-25 ವರ್ಷಗಳ ನಂತರ ಮರ ಕಟಾವಿಗೆ ಬಂದಾಗ ಬರುವ ಒಟ್ಟು ಆದಾಯದಲ್ಲಿ ಶೇಕಡಾ 70ರಷ್ಟು ಪಾಲು ರೈತರಿಗೆ ಹಾಗೂ ಶೇಕಡಾ 30ರಷ್ಟು ಪಾಲು ಸರ್ಕಾರಕ್ಕೆ ಸಿಗುವಂತೆ ಅಧಿಕೃತ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

​ಅಡಿಕೆ ದರ ಮತ್ತು ಕೇಂದ್ರಕ್ಕೆ ನಿಯೋಗ

​ಅಡಿಕೆ ಮೇಲಿನ ತೆರಿಗೆ ಮತ್ತು ಧಾರಣೆ ಕುಸಿತದ ವಿಚಾರವಾಗಿ ಸಭೆಯಲ್ಲಿ ಚರ್ಚೆಯಾಗಿದ್ದು, ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ಎಲ್ಲ ಮುಖಂಡರೊಂದಿಗೆ ದೆಹಲಿಗೆ ಸರ್ವಪಕ್ಷ ನಿಯೋಗ ತೆರಳಿ ಕೇಂದ್ರ ಸರ್ಕಾರದ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳಲು ಶ್ರಮಿಸಲಾಗುವುದು. ಬಗರ್‌ಹುಕುಂ, 94C ಹಕ್ಕುಪತ್ರ ವಿತರಣೆ ಹಾಗೂ ಈಕೋ ಸೆನ್ಸಿಟಿವ್ ಝೋನ್ (ESZ) ನಿಯಮಗಳ ಕುರಿತು ಶಾಸಕರ ಸಮಿತಿ ಸಭೆ ನಡೆಸಿ, ಅಗತ್ಯವಿದ್ದರೆ ವಿಧಾನಸಭಾ ಅಧಿವೇಶನದಲ್ಲಿ ನಿರ್ಣಯ ಅಂಗೀಕರಿಸಿ ಕಾನೂನು ಚೌಕಟ್ಟಿನಲ್ಲಿ ರಕ್ಷಣೆ ಒದಗಿಸಲಾಗುವುದು ಎಂದು ಆಶ್ವಾಸನೆ ನೀಡಿದರು.

​ಬಡವರ ಪರ ಗ್ಯಾರಂಟಿ ಬದ್ಧತೆ

​ಹಿಂದೆ ಉಳುವವನಿಗೆ ಭೂಮಿ ಹಕ್ಕು ನೀಡಿದ್ದು ಡಿ. ದೇವರಾಜ ಅರಸು ನೇತೃತ್ವದ ಕಾಂಗ್ರೆಸ್ ಸರ್ಕಾರ, ಅದೇ ರೀತಿ ಅರಣ್ಯ ಹಕ್ಕು ಕಾಯ್ದೆ ತಂದಿದ್ದು ಯುಪಿಎ ಸರ್ಕಾರ. ನುಡಿದಂತೆ ನಾವು ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಜನರ ಕೈಹಿಡಿದಿದ್ದೇವೆ. ರಾಜಕಾರಣದಲ್ಲಿ ವಿರೋಧಿಗಳು ಮತ್ತು ಟೀಕೆಗಳು ಇದ್ದಾಗಲೇ ಗಟ್ಟಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ನಾನು ನಿಮ್ಮ ಸೇವಕನಾಗಿ ನಿಮ್ಮೊಂದಿಗೆ ಸದಾ ಇರುತ್ತೇನೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹಣ ಡಬಲ್ ಆಗುವ ಅವಕಾಶ ! ಸರ್ಕಾರದ ಈ ಉಳಿತಾಯ ಯೋಜನೆಗಳ ಬಗ್ಗೆ ನಿಮಗೆ ಗೊತ್ತೇ?8.86 ಎಕರೆ ಭೂ ಹಗರಣ ಪ್ರಕರಣ: ಹೇಮಂತ್ ಸೊರೆನ್‌ಗೆ ಹೈಕೋರ್ಟ್‌ನಲ್ಲೂ ತಡೆ ಇಲ್ಲ; PMLA ವಿಚಾರಣೆ ಮುಂದುವರಿಕೆಸಂಸತ್ತೇ ಸುಪ್ರೀಂ, ಕಸ್ತೂರಿ ರಂಗನ್ ವರದಿ ತಿದ್ದುಪಡಿ ಮಾಡಿ: ಮಾಜಿ ಸಚಿವ ಕಿಮ್ಮಾನೆ ರತ್ನಾಕರ್ ಆಗ್ರಹರಾಜ್ಯದಲ್ಲಿ ಶೀಘ್ರವೇ 'ರಾಜಕೀಯ ವ್ಯವಹಾರಗಳ ಸಮಿತಿ' ರಚನೆ; ತುಳು ಭಾಷೆ ಸ್ಥಾನಮಾನಕ್ಕೆ ಬಿ.ಕೆ. ಹರಿಪ್ರಸಾದ್ ಸ್ವಾಗತರೈತರಿಗೆ ಯಾವುದೇ ಹೊಸ ನೋಟಿಸ್ ನೀಡುವಂತಿಲ್ಲ: ಸಿಎಂ ಡಿ.ಕೆ. ಶಿವಕುಮಾರ್ ಅರಣ್ಯ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ‘ಮದ್ಯ’ ನಿಷೇಧದಿಂದ ಒಳಿತಿಗಿಂತ ಹಾನಿಯೇ ಹೆಚ್ಚು; ಸುಪ್ರೀಂಕೋರ್ಟ್‌ ಮಹತ್ವದ ಅಭಿಪ್ರಾಯಅಂತರರಾಜ್ಯ ಮಂಡಳಿ ನಿಯಮಕ್ಕೆ ತಿದ್ದುಪಡಿ: ರಾಷ್ಟ್ರಪತಿ ಆಳ್ವಿಕೆ ಜಾರಿಯಾದರೆ ದೆಹಲಿ, ಜಮ್ಮು-ಕಾಶ್ಮೀರ, ಪುದುಚೇರಿ ಎಲ್‌ಜಿಗಳಿಗೆ ಸಭೆಯಲ್ಲಿ ಅವಕಾಶಟಿಎಂಸಿ ಹೆಸರು–ಚಿಹ್ನೆ ವಿವಾದ ಸುಪ್ರೀಂ ಕೋರ್ಟ್‌ಗೆ: ಚುನಾವಣಾ ಆಯೋಗದ ಕ್ರಮ ಪ್ರಶ್ನಿಸಿ ಮಮತಾ ಬಣ ಅರ್ಜಿಶಾಲೆಯ ಮೆಟ್ಟಿಲಿನಿಂದ ಬಿದ್ದು 4ನೇ ತರಗತಿ ವಿದ್ಯಾರ್ಥಿನಿ ಸಾವು; ಆಘಾತಕಾರಿ ವೀಡಿಯೋ ವೈರಲ್ |WATCH VIDEOಸಿಎಂ ಆಸ್ತಿ ಕೊಟ್ಟರೆ ರಾಜ್ಯದ ರೈತರ ಸಾಲ ಮನ್ನಾ ಮಾಡಬಹುದು : ಕೇಂದ್ರ ಸಚಿವ HD ಕುಮಾರಸ್ವಾಮಿ ಹೇಳಿಕೆ!