ಶಿವಮೊಗ್ಗ: ಮಲೆನಾಡು ಭಾಗದ ರೈತರ ಜ್ವಲಂತ ಸಮಸ್ಯೆಗಳು, ಅರಣ್ಯ ಇಲಾಖೆ ಅಧಿಕಾರಿಗಳ ಕಿರುಕುಳ, ವನ್ಯಪ್ರಾಣಿಗಳ ಹಾವಳಿ ಹಾಗೂ ಕಸ್ತೂರಿ ರಂಗನ್ ವರದಿ ಜಾರಿಯಿಂದ ಜನರಿಗೆ ಆಗುತ್ತಿರುವ ತೊಂದರೆಗಳ ಕುರಿತು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಸಿಎಂ ಡಿ.ಕೆ ಶಿವಕುಮಾರ್ ಅವರ ಗಮನ ಸೆಳೆದರು.
ಮಲೆನಾಡು ಜನರ ಸಂಕಷ್ಟ ಸರ್ಕಾರದ ಮುಂದಿಟ್ಟ ಶಾಸಕರು:
ಇಂದು ತೀರ್ಥಹಳ್ಳಿಯಲ್ಲಿ ನಡೆಸಿದ ಕಸ್ತೂರಿ ರಂಗನ್ ವರದಿ ಕುರಿತ ಸಿಎಂ ಡಿ.ಕೆ ಶಿವಕುಮಾರ್ ಜೊತೆಗೆ ಸಾರ್ವಜನಿಕರ ಸಂವಾದ ಸಭೆಯಲ್ಲಿ ಮಾತನಾಡಿದ ಅವರು, "ಶಿವಮೊಗ್ಗ ಜಿಲ್ಲೆಯ ರೈತರು ತಮ್ಮ ಹಕ್ಕುಗಳಿಗಾಗಿ ಪಾದಯಾತ್ರೆ ನಡೆಸಿ ಮುಖ್ಯಮಂತ್ರಿಗಳಿಗೆ ಬೇಡಿಕೆ ಸಲ್ಲಿಸಿದ್ದರು. ಇತ್ತೀಚೆಗೆ ನಡೆದ ಮೂರು ಜಿಲ್ಲೆಗಳ ಶಾಸಕರ ಸಭೆಯಲ್ಲಿ ನಾನು ಮಲೆನಾಡಿನ ಜನರ ಅರಣ್ಯ ಭೂಮಿ ಹಾಗೂ ಬದುಕಿನ ಸಂಕಷ್ಟದ ಬಗ್ಗೆ ಧ್ವನಿ ಎತ್ತಿದ್ದೆ. ಆಗ ನಮ್ಮ ನಾಯಕರು 'ಹೋರಾಟ ಮುಂದುವರಿಸಿ, ನಾನೇ ಖುದ್ದು ಮಲೆನಾಡಿಗೆ ಬಂದು ಜನರ ಸಮಸ್ಯೆ ಆಲಿಸುತ್ತೇನೆ' ಎಂದು ಭರವಸೆ ನೀಡಿದ್ದರು. ಅದರಂತೆ ಇವತ್ತು ನಾಯಕರು ಜನರ ಮಧ್ಯೆ ಇರುವುದು ಸಂತಸ ತಂದಿದೆ," ಎಂದರು.
ಅರಣ್ಯ ಅಧಿಕಾರಿಗಳ ಕಿರುಕುಳ ಮತ್ತು ಪ್ರಾಣಿ ಹಾವಳಿಗೆ ಪರಿಹಾರಕ್ಕೆ ಆಗ್ರಹ:
ವೇದಿಕೆಯಲ್ಲಿದ್ದ ಅರಣ್ಯ ಸಚಿವರನ್ನು ಉದ್ದೇಶಿಸಿ ಮಾತನಾಡಿದ ಅವರು, "ನಮ್ಮ ಮಲೆನಾಡು ಭಾಗದ ಜನರಿಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಂದ ನಿರಂತರ ಕಿರುಕುಳ ಉಂಟಾಗುತ್ತಿದೆ. ಮತ್ತೊಂದೆಡೆ ಕಾಡುಹಂದಿ, ಕಾಡುಕೋಣ, ಕೋತಿಗಳು ಹಾಗೂ ಆನೆಗಳ ಹಾವಳಿ ವಿಪರೀತವಾಗಿದೆ. ಜನರು ಊರು ಬಿಟ್ಟು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ಕಾಡುಹಂದಿಯನ್ನು ಓಡಿಸಲು ಹೋದರೂ ಕೇಸ್ ಹಾಕುವಂತಾಗಿದೆ. ಈ ಎಲ್ಲಾ ಗಂಭೀರ ಸಮಸ್ಯೆಗಳಿಗೆ ಅರಣ್ಯ ಇಲಾಖೆ ಶಾಶ್ವತ ಪರಿಹಾರ ಒದಗಿಸಬೇಕು," ಎಂದು ಮನವಿ ಮಾಡಿದರು.
ಕಸ್ತೂರಿ ರಂಗನ್ ವರದಿ ಮತ್ತು ರಾಜಕೀಯ ಆರೋಪ-ಪ್ರತ್ಯಾರೋಪ:
ಕಸ್ತೂರಿ ರಂಗನ್ ವರದಿಯ ವಿಚಾರವಾಗಿ ಮಾತನಾಡಿದ ಅವರು, "ಕೇಂದ್ರ ಸರ್ಕಾರವು ಈ ಹಿಂದೆ ಹನ್ನೊಂದು ಬಾರಿ ಜನಪ್ರತಿನಿಧಿಗಳ ಸಭೆ ಕರೆದು ರಾಜ್ಯದ ವರದಿ ಕೇಳಿದಾಗ ಯಾವ ಸಂಸದರೂ ರೈತರ ಪರವಾಗಿ ಗಟ್ಟಿಯಾಗಿ ಧ್ವನಿ ಎತ್ತಲಿಲ್ಲ. ಅಧಿಕಾರದಲ್ಲಿದ್ದಾಗ ರೈತರ ಪರವಾಗಿ ಮಾತನಾಡದವರು, ಈಗ ಇದು ಕಾಂಗ್ರೆಸ್‌ನ ಪಾಪದ ಫಲ ಎಂದು ದೂರುತ್ತಿದ್ದಾರೆ. ಕಸ್ತೂರಿ ರಂಗನ್ ವರದಿಯ ವಿಷಯದಲ್ಲಿ ಈ ಹಿಂದೆ ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಎರಡು ಬಾರಿ ಹಾಗೂ ನಂತರದ ದಿನಗಳಲ್ಲಿ ಐದು ಬಾರಿ ಪ್ರಕ್ರಿಯೆಗಳು ನಡೆದಿವೆ. ಈ ವರದಿಯನ್ನು ಮಲೆನಾಡಿನ ಜನರ ಮೇಲೆ ಬಲವಂತವಾಗಿ ಹೇರಲಾಗುತ್ತಿದೆ," ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರದಿಂದ ರೈತರ ಹಿತರಕ್ಷಣೆ:
"ಹಿಂದೆ ಶರಾವತಿ ಮುಳುಗಡೆ ಸಂತ್ರಸ್ತರ ಜಮೀನಿನ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿದ್ದ ತೊಡಕನ್ನು ನಿವಾರಿಸಲು ನಮ್ಮ ಸರ್ಕಾರ ಬಂದ ಮೇಲೆ ಸರ್ವೆ ಕಾರ್ಯ ಪೂರ್ಣಗೊಳಿಸಿ ಸುಪ್ರೀಂ ಕೋರ್ಟ್‌ಗೆ ಅಗತ್ಯ ವರದಿ ಸಲ್ಲಿಸಲಾಗಿದೆ. ಮುಂಬರುವ ವಿಧಾನ ಮಂಡಲ ಅಧಿವೇಶನದಲ್ಲಿಯೂ ಮಲೆನಾಡಿನ ಜನರ ಅರಣ್ಯ ಹಕ್ಕು ಮತ್ತು ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ನಾಯಕರು ಭರವಸೆ ನೀಡಿದ್ದಾರೆ. ರೈತರ ಹಿತರಕ್ಷಣೆಗೆ ನಮ್ಮ ಸರ್ಕಾರ ಸದಾ ಬದ್ಧವಾಗಿದೆ," ಎಂದು ಹೇಳಿದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..