2007ರ ಸೆಪ್ಟೆಂಬರ್ 19ರಂದು ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್‌ನ ಸೂಪರ್ 8 ಪಂದ್ಯದಲ್ಲಿ ಭಾರತದ ದೈತ್ಯ ಆಟಗಾರ ಯುವರಾಜ್ ಸಿಂಗ್ ಇಂಗ್ಲೆಂಡ್ ವಿರುದ್ಧ ಸೃಷ್ಟಿಸಿದ ಆ ಚಾರಿತ್ರಿಕ ಕ್ಷಣಕ್ಕೆ ಈಗ 19 ವರ್ಷಗಳು ತುಂಬಿವೆ. ಟಿ೨೦ ಕ್ರಿಕೆಟ್‌ಗೆ ಹೊಸ ಮೆರುಗು ತಂದಿತ್ತ ಆ ಸ್ಮರಣೀಯ ಪಂದ್ಯದಲ್ಲಿ ಯುವರಾಜ್ ಸಿಂಗ್, ಇಂಗ್ಲೆಂಡ್‌ನ ಯುವ ವೇಗಿ ಸ್ಟುವರ್ಟ್ ಬ್ರಾಡ್ ಎಸೆದ ಒಂದೇ ಓವರ್‌ನ ಎಲ್ಲಾ 6 ಎಸೆತಗಳನ್ನು ಸಿಕ್ಸರ್‌ಗಟ್ಟುವ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಬರೆದಿದ್ದರು.
ಈ ಐತಿಹಾಸಿಕ ಕ್ಷಣಕ್ಕೂ ಮುನ್ನ ಮೈದಾನದಲ್ಲಿ ನಡೆದಿದ್ದ ಘಟನೆಗಳು ಇಂದಿಗೂ ರೋಮಾಂಚನ ಉಂಟುಮಾಡುತ್ತವೆ. ಇಂಗ್ಲೆಂಡ್‌ನ ಹಿರಿಯ ಆಟಗಾರ ಆಂಡ್ರ್ಯೂ ಫ್ಲಿಂಟಾಫ್ ಜೊತೆ ನಡೆದ ತೀವ್ರ ಮಾತಿನ ಚಕಮಕಿಯಿಂದ ಯುವರಾಜ್ ಕೋಪಗೊಂಡಿದ್ದರು. ಆ ಸಿಟ್ಟನ್ನು ಮುಂದಿನ ಓವರ್‌ನಲ್ಲೇ ತೋರಿಸಿದ ಅವರು, ಇಂಗ್ಲೆಂಡ್ ನಾಯಕ ಪೌಲ್ ಕಾಲಿಂಗ್‌ವುಡ್ ಯುವ ಬೌಲರ್ ಸ್ಟುವರ್ಟ್ ಬ್ರಾಡ್ ಕೈಗೆ ಚೆಂಡು ನೀಡುತ್ತಿದ್ದಂತೆ ರೌದ್ರಾವತಾರ ತಾಳಿದರು.
ಬ್ರಾಡ್ ಎಸೆದ ೧೯ನೇ ಓವರ್‌ನ ಮೊದಲ ಎಸೆತವನ್ನು ಮಿಡ್‌ವಿಕೆಟ್ ಮೇಲೆ, ಎರಡನೆಯದನ್ನು ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್, ಮೂರನೆಯದನ್ನು ಎಕ್ಸ್ಟ್ರಾ ಕವರ್, ನಾಲ್ಕನೆಯದನ್ನು ಕವರ್ಸ್ ಮೇಲೆ, ಐದನೆಯದನ್ನು ಮತ್ತೆ ಮಿಡ್‌ವಿಕೆಟ್ ಹಾಗೂ ಅಂತಿಮ ಎಸೆತವನ್ನು ಲಾಂಗ್ ಆನ್ ಮೇಲೆ ಗಡಿಯಾರವನ್ನು ದಾಟಿ ಬೌಂಡರಿ ರೇಖೆಯಾಚೆಗೆ ಅಟ್ಟಿದ್ದರು. ಈ ದೈತ್ಯಾಕಾರದ ಸಿಕ್ಸರ್‌ಗಳ ನೆರವಿನಿಂದ ಯುವರಾಜ್ ಸಿಂಗ್ ಕೇವಲ ೧೨ ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಅಂತಾರಾಷ್ಟ್ರೀಯ ಟಿ೨೦ ಕ್ರಿಕೆಟ್‌ನಲ್ಲಿ ಅತಿ ವೇಗದ ಅರ್ಧಶತಕದ ವಿಶ್ವ ದಾಖಲೆ ನಿರ್ಮಿಸಿದರು. ಪಂದ್ಯದಲ್ಲಿ ಒಟ್ಟು ೧೬ ಎಸೆತಗಳಲ್ಲಿ ೫೮ ರನ್ ಸಿಡಿಸಿದ ಅವರ ಪವರ್ ಹಿಟ್ಟಿಂಗ್ ನೆರವಿನಿಂದ ಭಾರತ ೨೧೮ ರನ್ ಕಲೆಹಾಕಿ ೧೮ ರನ್‌ಗಳಿಂದ ರೋಚಕ ಜಯ ಸಾಧಿಸಿತು.
ಅಂತರರಾಷ್ಟ್ರೀಯ ಟಿ೨೦ ಕ್ರಿಕೆಟ್‌ನಲ್ಲಿ ಒಂದೇ ಓವರ್‌ನಲ್ಲಿ ೬ ಸಿಕ್ಸರ್ ಸಿಡಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಯುವರಾಜ್ ಪಾತ್ರರಾದರು. ಅಂದು ಯುವರಾಜ್ ತೋರಿಸಿದ ಆಕ್ರಮಣಕಾರಿ ಆಟದ ಶೈಲಿಯು ಇಂದಿನ ಯುವ ಪೀಳಿಗೆಯ ಆಟಗಾರರಾದ ಅಭಿಷೇಕ್ ಶರ್ಮಾ ಹಾಗೂ ವೈಭವ್ ಸೂರ್ಯವಂಶಿ ಅವರಂತಹ ಸಿಕ್ಸರ್ ಕಿಂಗ್‌ಗಳಿಗೆ ದೊಡ್ಡ ಸ್ಫೂರ್ತಿಯಾಗಿ ಮುಂದುವರಿದಿದೆ. ೧೯ ವರ್ಷಗಳು ಕಳೆದರೂ ಸೆಪ್ಟೆಂಬರ್ ೧೯ ರಂದಿನ ಆ ೬ ಸಿಕ್ಸರ್‌ಗಳ ವಿಕ್ರಮ ಇಂದಿಗೂ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ಹಸಿರಾಗಿ ಉಳಿದಿದೆ.