ಜಪಾನ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2026ರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿರುವ ಭಾರತೀಯ ಪುರುಷರ ಕ್ರಿಕೆಟ್ ತಂಡದ ಆಟಗಾರರು, ಮೈದಾನದ ಹೊರಗೆ ಜಪಾನ್‌ನ ಸೌಂದರ್ಯವನ್ನು ಆನಂದಿಸಿದ್ದಾರೆ. ಜಪಾನ್ ವಿರುದ್ಧದ ಪಂದ್ಯದ ಬಳಿಕ ಸಿಕ್ಕ ಬಿಡುವಿನ ವೇಳೆಯಲ್ಲಿ ಟೀಮ್ ಇಂಡಿಯಾ ಆಟಗಾರರಾದ ಶ್ರೇಯಸ್ ಅಯ್ಯರ್ ಮತ್ತು ಅಭಿಷೇಕ್ ಶರ್ಮ ಸೇರಿದಂತೆ ಹಲವು ಕ್ರಿಕೆಟಿಗರು ಜಪಾನ್‌ನ ನಗರ ಬೀದಿಗಳಲ್ಲಿ ವಕಿಂಗ್ ನಡೆಸಿದ್ದು, ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಆದರೆ ಈ ಫೋಟೋಗಳಲ್ಲಿ ಅಭಿಮಾನಿಗಳ ಗಮನ ಸೆಳೆದದ್ದು ಕ್ರಿಕೆಟಿಗರ ಕೈಯಲ್ಲಿದ್ದ ಪಾರದರ್ಶಕ ಛತ್ರಿಗಳು (Transparent Umbrellas). ಜಪಾನ್ ಸಂಸ್ಕೃತಿ ಮತ್ತು ದೈನಂದಿನ ಜೀವನದಲ್ಲಿ ಈ ಪ್ರಕೃತಿ ರಕ್ಷಕ ಪ್ಲಾಸ್ಟಿಕ್ ಛತ್ರಿಗಳಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಕಡಿಮೆ ಬೆಲೆಗೆ ಪ್ರತಿಯೊಂದು ಅಂಗಡಿಗಳಲ್ಲೂ ಸುಲಭವಾಗಿ ಸಿಗುವ ಈ ಪಾರದರ್ಶಕ ಛತ್ರಿಗಳು, ಹಠಾತ್ ಮಳೆ ಬಂದಾಗ ಜಪಾನೀಯರ ಮೊದಲ ಆಯ್ಕೆಯಾಗಿರುತ್ತವೆ.
ಈ ಛತ್ರಿಗಳು ಕೇವಲ ಸೌಂದರ್ಯಕ್ಕಷ್ಟೇ ಅಲ್ಲದೆ ಪ್ರಾಯೋಗಿಕವಾಗಿಯೂ ಅತ್ಯಂತ ಉಪಯುಕ್ತವಾಗಿವೆ. ಜನದಟ್ಟಣೆಯ ನಗರಗಳು ಮತ್ತು ಕಿರಿದಾದ ಕಾಲುದಾರಿಗಳಲ್ಲಿ ನಡೆಯುವಾಗ ಪಾರದರ್ಶಕ ಕೊಡೆಗಳ ಮೂಲಕ ಎದುರಿಗೆ ಬರುವ ವ್ಯಕ್ತಿಗಳು ಅಥವಾ ವಸ್ತುಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಇದರಿಂದ ರಸ್ತೆಯಲ್ಲಿ ಯಾರೊಂದಿಗೂ ಡಿಕ್ಕಿಯಾಗದೆ ಸಾಗಲು ಸಾಧ್ಯವಾಗುತ್ತದೆ. 1964ರ ಟೋಕಿಯೋ ಒಲಿಂಪಿಕ್ಸ್ ಸಮಯದಿಂದ ಜಪಾನ್‌ನಲ್ಲಿ ಪ್ರಸಿದ್ಧಿಗೆ ಬಂದ ಈ ಆಧುನಿಕ ಪ್ಲಾಸ್ಟಿಕ್ ಛತ್ರಿಗಳು, ಅಲ್ಲಿನ ಸಾಂಪ್ರದಾಯಿಕ ‘ವಾಗಾಸ’ ವರ್ಣರಂಜಿತ ಕೈಯಿಂದ ಮಾಡಿದ ಕೊಡೆಗಳಿಗಿಂತ ಭಿನ್ನವಾಗಿವೆ.
ಭಾರತೀಯ ಕ್ರಿಕೆಟಿಗರು ಸ್ಥಳೀಯ ಜಪಾನೀಸ್ ಶೈಲಿಯ ಪಾರದರ್ಶಕ ಛತ್ರಿ ಹಿಡಿದು ಕಂಗೊಳಿಸುತ್ತಿರುವ ಶೈಲಿ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.