ಜನಪ್ರಿಯ ರಿಯಾಲಿಟಿ ಶೋ ‘ರೈಸ್ ಅಂಡ್ ಫಾಲ್’ ಸೀಸನ್ 2 ರಂಪಾಟದೊಂದಿಗೆ ಆರಂಭಗೊಂಡಿದ್ದು, ಪಂಜಾಬಿ ನಟಿ ಹಾಗೂ ಗಾಯಕಿ ಸಾರಾ ಗುರ್‌ಪಾಲ್ ಕ್ರಿಕೆಟಿಗರ ಬಗ್ಗೆ ಮಾಡಿರುವ ಶಾಕಿಂಗ್ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.
ಕಾರ್ಯಕ್ರಮದ ನಿರೂಪಕರಾಗಿರುವ ಭಾರತ ತಂಡದ ಮಾಜಿ ಸ್ಪೋಟಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಅವರೊಂದಿಗಿನ ಸಂಭಾಷಣೆಯ ವೇಳೆ, ಪ್ರಸ್ತುತ ಟೀಮ್ ಇಂಡಿಯಾದಲ್ಲಿ ಆಡುತ್ತಿರುವ ಹಲವು ಕ್ರಿಕೆಟಿಗರು ತಮಗೆ ಸೋಶಿಯಲ್ ಮೀಡಿಯಾದಲ್ಲಿ (DM) ಮೆಸೇಜ್ ಮಾಡುತ್ತಿದ್ದಾರೆ ಎಂದು ಸಾರಾ ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲದೆ, ತಮ್ಮ ಮೊಬೈಲ್ ಫೋನ್ ತೆರೆದು ಸೆಹ್ವಾಗ್ ಅವರಿಗೆ ಆ ಚಾಟ್‌ಗಳನ್ನು ತೋರಿಸಿದ್ದಾರೆ.
ಫೋನ್‌ನಲ್ಲಿ ಕ್ರಿಕೆಟಿಗರ ಮೆಸೇಜ್‌ಗಳನ್ನು ಪರಿಶೀಲಿಸುತ್ತಿದ್ದ ಸೆಹ್ವಾಗ್, ತಮ್ಮದೇ ಶೈಲಿಯಲ್ಲಿ ತಮಾಷೆ ಮಾಡುತ್ತಾ, “ಓಹ್! ಇವನು ಕೂಡ ಮೆಸೇಜ್ ಮಾಡಿದ್ದಾನಾ… ಅದಕ್ಕೇ ಗ್ರೌಂಡ್‌ನಲ್ಲಿ ರನ್ ಬಾರಿಸುತ್ತಿಲ್ಲ!” ಎಂದು ಕಾಲೆಳೆದಿದ್ದಾರೆ. ಮುಂದುವರಿದು, “ಇಲ್ಲಿ ಲೆಫ್ಟ್ ಹ್ಯಾಂಡರ್, ರೈಟ್ ಹ್ಯಾಂಡರ್ ಮತ್ತು ವಿಕೆಟ್ ಕೀಪರ್ ಬ್ಯಾಟರ್ ಎಲ್ಲರೂ ಇದ್ದಾರಲ್ಲಪ್ಪಾ!” ಎಂದು ನಕ್ಕಿದ್ದಾರೆ. ಸೆಹ್ವಾಗ್ ಅವರ ಈ ಹಾಸ್ಯಮಯ ನುಡಿಗಳ ವೀಡಿಯೋ ತುಣುಕು ಸದ್ಯ ನೆಟ್ಟಿಗರಲ್ಲಿ ಕುತೂಹಲ ಮೂಡಿಸಿದೆ.
ವೀಡಿಯೋದಲ್ಲಿ ಯಾವುದೇ ಕ್ರಿಕೆಟಿಗರ ಹೆಸರುಗಳನ್ನು ನೇರವಾಗಿ ಬಹಿರಂಗಪಡಿಸಿಲ್ಲವಾದರೂ, ಸಾರಾಗೆ ಮೆಸೇಜ್ ಮಾಡಿದ ಆ ಆಟಗಾರರು ಯಾರಿಿರಬಹುದು ಎಂದು ಸೋಷಿಯಲ್ ಮೀಡಿಯಾದಲ್ಲಿ ಕ್ರಿಕೆಟ್ ಪ್ರಿಯರು ತೀವ್ರವಾಗಿ ಚರ್ಚಿಸುತ್ತಿದ್ದಾರೆ. ಸೆಪ್ಟೆಂಬರ್ 26 ರಿಂದ ಪ್ರಾರಂಭವಾಗಿರುವ ಈ ರಿಯಾಲಿಟಿ ಶೋ ಮೂಲಕ ವೀರೇಂದ್ರ ಸೆಹ್ವಾಗ್ ನಿರೂಪಕರಾಗಿ ತಮ್ಮ ಹೊಸ ಪಯಣ ಆರಂಭಿಸಿದ್ದಾರೆ.