LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಾನು ಕಾನೂನು ಚೌಕಟ್ಟಿನಲ್ಲಿ ಆಸ್ತಿ ಸಂಪಾದಿಸಿದ್ದೇನೆ: ಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟನೆ

ನವದೆಹಲಿ : "ಹೌದು, ಇಂದಿನ ಮೌಲ್ಯದಲ್ಲಿ ನನ್ನ ಬಳಿ 1,400 ಕೋಟಿ ರೂ. ಮೌಲ್ಯದ ಆಸ್ತಿ ಇದೆ. ನಾನು ಕಾನೂನು ಚೌಕಟ್ಟಿನಲ್ಲಿ ಆಸ್ತಿ ಸಂಪಾದಿಸಿದ್ದೇನೆ. ಕುಮಾರಸ್ವಾಮಿ ಅವರು ಹತಾಶಾರಾಗಿ ಈ ರೀತಿ ಮಾತನಾಡುತ್ತಿದ್ದಾರೆ" ಎಂದು ಸಿಎಂ ಡಿ ಕೆ ಶಿವಕುಮಾರ್ ತಿರುಗೇಟು ನೀಡಿದರು.

ನವದೆಹಲಿಯಲ್ಲಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು.

ಕುಮಾರಸ್ವಾಮಿ ಅವರ ಆರೋಪಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, "ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಲ್ಲಿ ಬಿರುಕು, ತಾ ಮುಂದು ನಾ ಮುಂದು ಎಂಬ ಪೈಪೋಟಿಯಲ್ಲಿ ಕುಮಾರಸ್ವಾಮಿ ಅವರು ಹತಾಶರಾಗಿದ್ದಾರೆ. ಅವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಅವರು ಇಷ್ಟು ದಿನ ಏಕೆ ಸುಮ್ಮನಿದ್ದರು. ಅವರ ತಂದೆ ದೇವೇಗೌಡರೇ ಆ ಯೋಜನೆಗೆ ಸಹಿ ಹಾಕಿದ್ದರು. ಜೊತೆಗೆ ಇವರು ಸಹ ಮುಖ್ಯಮಂತ್ರಿಯಾಗಿದ್ದರು. ಅಲ್ಲದೇ ಗಾಂಧಿ ಎನ್ನುವವರೊಬ್ಬರಿಗೆ ಇವರೇ ಪ್ರಯತ್ನಿಸಿ ಟೆಂಡರ್ ಕೊಡಿಸಿದರು. ಈ ವಿಚಾರವಾಗಿ ನ್ಯಾಯಾಲಯವು ಛಿಮಾರಿ ಹಾಕಿತ್ತು. ಬೇನಾಮಿ ಹೆಸರಿನಲ್ಲಿ ಅಲ್ಲಲ್ಲಿ ಸಾಕಷ್ಟು ವ್ಯವಹಾರಗಳು ನಡೆದವು. ಅವರಂತೆ ನಾನು ಹೆಸರುಗಳನ್ನು ತೆಗೆದುಕೊಳ್ಳಲು ಹೋಗುವುದಿಲ್ಲ" ಎಂದು ತಿಳಿಸಿದರು. 

ಕುಮಾರಸ್ವಾಮಿ ಅವರು ಐಟಿ ಅಧಿಕಾರಿಯೇ?

"ನನ್ನ ಆಸ್ತಿ ವಿಚಾರವಾಗಿ ಮಾತನಾಡಿದ್ದಾರೆ. ರೈತನ ಮಗ, ಉದ್ಯಮಿಯಾದ ನನಗೆ ಆಸ್ತಿ ಇರಬಾರದೇ? ನನ್ನ ಮಕ್ಕಳು ಆಸ್ತಿ ಕೊಂಡುಕೊಳ್ಳಬಾರದೇ? ಕಾನೂನಾತ್ಮಕ ಇರುವ ಅವಕಾಶದಲ್ಲೇ ನಾನು ಆಸ್ತಿ ಮಾಡಿದ್ದೇ‌ನೆ. ತಪ್ಪೇನಿದೆ?ಕುಮಾರಸ್ವಾಮಿ ಅವರು ಏನಾದರೂ ಆದಾಯ ತೆರಿಗೆ ಅಧಿಕಾರಿಯೇ? ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಿ" ಎಂದು ಸವಾಲು ಹಾಕಿದರು.

"ಇವರುಗಳು ಮಾತ್ರ ಯಾವುದೋ ಊರಿಂದ ಬಂದು ಇಲ್ಲೆಲ್ಲಾ ಆಸ್ತಿಗಳನ್ನ ತೆಗೆದುಕೊಳ್ಳಬಹುದಾ. ಬಿಎಂಐಸಿಎಪಿಎ , ನೈಸ್ ರಸ್ತೆ ಯೋಜನೆಯೊಳಗೆ ಇವರ ಆಸ್ತಿ ಇಲ್ಲವೇ? ಆಸ್ತಿಗಳನ್ನು ಯಾರ್ಯಾರು ತಗೊಂಡಿದ್ದಾರೆ? ಯಾಕೆ ಇವರ ಆಸ್ತಿಗಳೆಲ್ಲಾ ವ್ಯಾಪ್ತಿಯಲ್ಲಿ, ಬಿಡದಿ ಟೌನ್ ಶಿಪ್ ಯೋಜನೆಯೊಳಗೆ ಹೇಗೆ ಆಸ್ತಿ ಬಂದಿತು?" ಎಂದು ಪ್ರಶ್ನಿಸಿದರು.  

"ಕುಮಾರಸ್ವಾಮಿ ಅವರು ಏನಾದರೂ ಮಾಡಿಕೊಳ್ಳಲಿ. ಅದರ ಬಗ್ಗೆ ನಾನು ತಲೆಕೆಡಿಸಿಕೊಳ್ಳೋದಿಲ್ಲ. ನನಗೆ ಆಸ್ತಿ ಇದೆ. ನನ್ನ ಮಕ್ಕಳಿಗೆ ಇನ್ನೂ ತೆಗೆದುಕೊಳ್ಳುವ ಶಕ್ತಿ ಇದ್ದರೆ ತೆಗೆದುಕೊಳ್ಳುತ್ತಾರೆ. ಕಾನೂನಲ್ಲಿ ಅವಕಾಶ ಇದೆ, ಖರೀದಿ ಮಾಡುವ ಸಾಮರ್ಥ್ಯವಿದೆ, ಬದುಕುತ್ತಾರೆ" ಎಂದು ಸ್ಪಷ್ಟಪಡಿಸಿದರು. 

ನಾನು ಲಂಚ ಪಡೆದಿದ್ದೇನಾ ಅಥವಾ ಹಗರಣದಲ್ಲಿ ಸಿಕ್ಕಿಬಿದ್ದಿದ್ದೇನಾ?

ಶೋಭಾ ಡೆವಲಪರ್ಸ್ ಜೊತೆ 5 ಕೋಟಿ ಹೂಡಿಕೆ ಮಾಡಿ ಈಗ 2,000 ಕೋಟಿ ಮಾಡಿದ್ದಾರೆ ಎನ್ನುವ ಆರೋಪದ ಬಗ್ಗೆ ಕೇಳಿದಾಗ, "ಹೌದು, ನಾವು ಎಷ್ಟಾದರೂ ಮಾಡುತ್ತೇವೆ. ನನಗೆ ಮಾಜಿ ಸಿಎಂ ದಿವಂಗತ ಬಂಗಾರಪ್ಪ ಅವರು 1 ಲಕ್ಷ ರೂಪಾಯಿಗೆ ಆಗ ಒಂದು ನಿವೇಶನ ನೀಡಿದ್ದರು. ಇಂದು ಅದರ ಬೆಲೆ 20 ಕೋಟಿ ಇದೆ. ಇದರಲ್ಲಿ ಏನಾದರೂ ತಪ್ಪಿದೆಯೇ? ನಾನು ಲಂಚ ಹೊಡೆದಿದ್ದೇನೆಯೇ? ಇಲ್ಲ ಯಾವುದಾದರೂ ಹಗರಣದಲ್ಲಿ ಸಿಕ್ಕಿಹಾಕಿಕೊಂಡಿದ್ದೆನೆಯೇ? ಯಾವುದೂ ಇಲ್ವವಲ್ಲಾ" ಎಂದು ವ್ಯಂಗ್ಯವಾಡಿದರು.  

ಕದ್ದು ಏನನ್ನೂ ಮಾಡಿಕೊಂಡಿಲ್ಲ

"ನನಗೆ ಉದ್ದಿಮೆ ಮಾಡಲು ಎಲ್ಲಾ ರೀತಿಯ ಹಕ್ಕು, ಅವಕಾಶವಿದೆ. ನನ್ನ ಮಕ್ಕಳಿಗೂ ಸಾಮರ್ಥ್ಯವಿದೆ. ಇನ್ನೂ ಖರೀದಿ ಮಾಡುವ ಸಾಮರ್ಥ್ಯವಿದೆ. ನಾನು ಕದ್ದುಮುಚ್ಚಿ ಮಾಡೋ ಅವಶ್ಯಕತೆಯಿಲ್ಲ. ನನ್ನ ಆಸ್ತಿಯನ್ನ ಈಗಾಗಲೇ ಘೋಷಣೆ ಮಾಡಿಕೊಂಡಿದ್ದೇನೆ" ಎಂದರು.

"ಕುಮಾರಸ್ವಾಮಿ ಅವರದ್ದು ಏನೇನಿದೆ ಅಂತ ನಾನು ಈಗ ಮಾತನಾಡಲು ಹೋಗುವುದಿಲ್ಲ. ನನಗೆ ಈ ವಿಚಾರಗಳನ್ನು ಯಾರೋ ಹೇಳಿದರು. ಕುಮಾರಸ್ವಾಮಿ ಅವರು ಎಲ್ಲಾ ಎತ್ತಿಕೊಂಡು ಹೋಗಿ ಸಂಸ್ಥೆಗಳಿಗೆಲ್ಲಾ ಈಗಾಗಲೇ ಕೊಟ್ಟಿದ್ದಾರಲ್ಲಾ? ಇನ್ನೆಷ್ಟು ಬಾರಿ ಕೊಡುತ್ತಾರೆ. ಅವರಿಗೆ ಲಾರಿ ಬೇಕಾದರೆ ಕಳುಹಿಸಿಕೊಡೋಣ" ಎಂದು ಲೇವಡಿ ಮಾಡಿದರು.

ವಿಧಾನಸಭೆಗೆ ಬಂದು ಚರ್ಚೆ ಮಾಡಲಿ

ಕುಮಾರಸ್ವಾಮಿ ಅವರು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಚರ್ಚೆಗೆ ಸವಾಲು ಹಾಕಿರುವ ಬಗ್ಗೆ ಕೇಳಿದಾಗ, "ವಿಧಾನಸೌಧದ ಮೆಟ್ಟಿಲುಗಳ ಮೇಲೆ ಯಾಕೆ? ಧೈರ್ಯವಿದ್ದರೆ ಯಾರನ್ನಾದರೂ ಕೌನ್ಸಿಲ್ ಅಥವಾ ಅಸೆಂಬ್ಲಿ ಸದಸ್ಯತ್ವಕ್ಕೆ ರಾಜೀನಾಮೆ ಕೊಡಿಸಿ, ಅಸೆಂಬ್ಲಿ ಒಳಗಡೆ ಬಂದು ಚರ್ಚೆ ಮಾಡಲಿ. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಚರ್ಚೆ ಮಾಡುವ ಬದಲು ಫ್ರೀಡಂ ಪಾರ್ಕ್ ಇದೆ, ಅಲ್ಲಿಗೆ ಹೋಗಿ ಚರ್ಚೆ ಮಾಡಿಕೊಳ್ಳಲಿ" ಎಂದರು.

ಗೊಡ್ಡು ಬೆದರಿಕೆಗೆಲ್ಲಾ ಡಿ ಕೆ ಶಿವಕುಮಾರ್ ಹೆದರುವುದಿಲ್ಲ

ನೈಸ್ ಯೋಜನೆ ಜಾರಿಗೆ ತಮಗೆ ಬೆಂಬಲ ಇರಲಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಮಾತನಾಡಿ, "2007 ರಲ್ಲಿ ಅವರಿಗೆ ಅಧಿಕಾರವಿತ್ತಲ್ಲ. ಇವರೇ ಹರಾಜಿನಲ್ಲಿ   ನಿಖಿಲ್ ಗಾಂಧಿ  ಕೊಟ್ಟಿದ್ದರಲ್ಲ. ಯಾಕೆ ಮಾಡಲು ಆಗಿಲ್ಲ? ಅಧಿಕಾರದಲ್ಲಿದ್ದಾಗ ಟೋಲ್ ರದ್ದು ಮಾಡದವರು ಈಗ ದೇಶಾದ್ಯಂತ ಟೋಲ್ ಬಂದ್ ಮಾಡಿಸಲು ಪ್ರಧಾನಿ ಮೋದಿಯವರಿಗೆ ಹೇಳಲಿ. ಈ ಗೊಡ್ಡು ಬೆದರಿಕೆಗೆಲ್ಲಾ ಡಿ ಕೆ ಶಿವಕುಮಾರ್ ಹೆದರುವುದಿಲ್ಲ. ಈ ನಾಟಕ, ಡ್ರಾಮಾ, ಫಿಲಾಸಫಿ, ಬ್ಲಾಕ್ ಮೇಲ್  ಎಲ್ಲಾ ಬೇಕಾದಷ್ಟು ನೋಡಿದ್ದೀನಿ. ಇವಕ್ಕೆಲ್ಲಾ ತಲೆಕೆಡಿಸಿಕೊಳ್ಳುವುದಿಲ್ಲ. ಮಾಡುವ ಕೆಲಸ ಮಾಡೋಣ. ನಮ್ಮ ಸರ್ಕಾರದ ಜನಪ್ರಿಯತೆಯನ್ನು ಅವರಿಗೆ ತಡೆದುಕೊಳ್ಳಲಾಗುತ್ತಿಲ್ಲ. ಅಸೂಯೆಗೆ ಮದ್ದಿಲ್ಲ ಎಂದು ಹಿಂದೆಯೂ ಹೇಳಿದ್ದೇನೆ, ಈಗಲೂ ಹೇಳುತ್ತಿದ್ದೇನೆ, ನಾಳೆಯೂ ಹೇಳುತ್ತೇನೆ" ಎಂದರು.   

ಬ್ಲ್ಯಾಕ್‌ಮೇಲ್ ಹಾಗೂ ಫೋನ್ ಟ್ಯಾಪಿಂಗ್ ತಂತ್ರಕ್ಕೆ ಹೆದರುವುದಿಲ್ಲ

ಕುಮಾರಸ್ವಾಮಿ ಅವರು ಇದು ಭಾಗ 1 ಎಂದು ಹೇಳಿದ್ದಾರೆ ಎಂದು ಕೇಳಿದಾಗ, "ಪಾರ್ಟ್ 1, 2, 3,4 ಸ್ಟಿಂಗ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಅವರ ಹತ್ರ ಇರೋದೆಲ್ಲಾ ಗೊತ್ತಿದೆ. ಚೆನ್ನಿಗಪ್ಪನ ಕಾಲದಿಂದಲೂ ಗೊತ್ತಿದೆ. ಬಾಲ ಗಂಗಾಧರನಾಥ ಸ್ವಾಮೀಜಿ, ನಿರ್ಮಲಾನಂದನಾಥ ಸ್ವಾಮೀಜಿ ಫೋನ್ ನನ್ನೇ ಟ್ಯಾಪ್ ಮಾಡಿಸಿದವರು, ಅವರನ್ನೇ ಬಿಟ್ಟಿಲ್ಲಾ, ನನ್ನನ್ನು ಬಿಡುತ್ತಾರೆಯೇ? ಹಾಗೆಂದು ಭಾವಿಸಿದರೆ ನಮ್ಮಂಥ ಮುಠ್ಠಾಳರು ಯಾರೂ ಇಲ್ಲ. ಅವರು ಮುಖ್ಯಮಂತ್ರಿಯಾಗಿದ್ದಾಗ ನಾನು ಹೆದರಲಿಲ್ಲ, ಈಗ ಹೆದರುತ್ತೇನೆಯೇ? ನನ್ನನ್ನು ದೊಡ್ಡ ಬೆದರಿಕೆ ಹಾಕಿ ಹೆದರಿಸುವ ಅಥವಾ ಬ್ಲ್ಯಾಕ್‌ಮೇಲ್ ಮಾಡುವ ಜಾಯಮಾನ ನನ್ನದಲ್ಲ" ಎಂದರು.  

ಸ್ವಂತ ಅಪ್ಪ, ಅಣ್ಣ-ತಮ್ಮಂದಿರನ್ನೇ ಜೀರ್ಣಿಸಿಕೊಳ್ಳದವರು ನಮ್ಮನ್ನು ಬಿಡುತ್ತಾರೆಯೇ?

"ಸ್ವಂತ ಅಪ್ಪನನ್ನೇ, ಅಣ್ಣ-ತಮ್ಮಂದಿರನ್ನೇ ಜೀರ್ಣಿಸಿಕೊಳ್ಳಲಾಗದವರು ನಮ್ಮನ್ನು ಬಿಡುತ್ತಾರೆಯೇ? ನಾವೇನೂ ಅವರಿಂದ ಒಳ್ಳೆಯದನ್ನು ನಿರೀಕ್ಷಿಸಿಲ್ಲ.  ನಮ್ಮ ಸರ್ಕಾರದ ಜನಪ್ರಿಯತೆಯನ್ನು ತಡೆದುಕೊಳ್ಳಲು ಆಗದೆ 'ಅಸೂಯೆ'ಯಿಂದ ಹೀಗೆ ಮಾಡುತ್ತಿದ್ದಾರೆ. ಅವರಿಗೆ ಸಂಸ್ಕಾರವೂ ಇಲ್ಲ, ಸಂಸ್ಕೃತಿಯೂ ಇಲ್ಲ" ಎಂದು ವಾಗ್ದಾಳಿ ನಡೆಸಿದರು.  

ಇದಕ್ಕೆ ತಾರ್ತಿಕ ಅಂತ್ಯವಿಲ್ಲವೇ ಎಂದು ಕೇಳಿದಾಗ, "ನನಗೆ ಅವರ ಮೇಲೆ ಆರೋಪ ಮಾಡಲು ಇಷ್ಟವಿಲ್ಲ. ಅದಕ್ಕೆಲ್ಲ ನನ್ನ ಬಳಿ ಸಮಯವೂ ಇಲ್ಲ. ನೀವು ಹೇಳಿದ್ದಕ್ಕೆ ನಾನು ಉತ್ತರ ಕೊಡುತ್ತಿದ್ದೇನೆ ಅಷ್ಟೇ. ಉತ್ತರ ಕೊಡಲೂ ನನಗೆ ಇಷ್ಟವಿಲ್ಲ" ಎಂದರು. 

ಕಸ ಹೊಡೆದು ಸಂಪಾದಿಸಿದ ಹಣ ನನ್ನ ಬಳಿ ಇಲ್ಲ

ಬಂಗಾರಪ್ಪ ಅವರು ನೀಡಿದ್ದ ನಿವೇಶನದ ಬಗ್ಗೆ ಕೇಳಿದಾಗ, "ಮಾಜಿ ಮುಖ್ಯಮಂತ್ರಿ ದಿ.ಬಂಗಾರಪ್ಪನವರ ಕಾಲದಲ್ಲಿ 99 ಸಾವಿರ ನೀಡಿ ನಿವೇಶನ ಖರೀದಿಸಿದ್ದೆ. ಅವರೇ ಅದನ್ನು ಹಂಚಿಕೆ ಮಾಡಿದ್ದರು. ಇವತ್ತಿಗೆ 20 ಕೋಟಿ ಬೆಲೆ ಬಾಳುತ್ತದೆ. ನನ್ನ ಆಸ್ತಿಯ ಬೆಲೆ ಹೆಚ್ಚಾಗಿದೆ. ಅದನ್ನು ಘೋಷಿಸಿದ್ದೇನೆ. ತಪ್ಪೇನಿದೆ? ಇಂಥ ನೂರಾರು ಆಸ್ತಿ ನನ್ನ ಬಳಿ ಇದೆ. ಲಾರಿ ಇಟ್ಟುಕೊಂಡು ಕಸ ಹೊಡೆದು ಸಂಪಾದಿಸಿದ ಹಣ ನನ್ನ ಬಳಿ ಇಲ್ಲ. ನನ್ನದೇ ವೃತ್ತಿ, ವ್ಯವಹಾರ ಬದುಕಿದೆ. ಪ್ರತಿ ವರ್ಷವೂ ಆಸ್ತಿ ಘೋಷಿಸಿದ್ದೇನೆ. ಚುನಾವಣಾ ಆಯೋಗ, ಇಡಿ ಎಲ್ಲಾ ನೋಡಿ ಆಗಿದೆ. ಇನ್ನು ಯಾವುದಾದರೂ ದೊಡ್ಡ ಏಜೆನ್ಸಿಯನ್ನು ಹಾಕಿ ನೋಡಲಿ. ಯಾರು ಬೇಡ ಹೇಳುತ್ತಾರೆ" ಎಂದರು. 

ಯತೀಂದ್ರ ಸಿದ್ದರಾಮಯ್ಯ ಮೇಲಿನ ದೂರು ಸುಳ್ಳು

ಶಾಸಕ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿರುವ ಬಗ್ಗೆ ಕೇಳಿದಾಗ, "ಅವರು ಮಂತ್ರಿಯಾಗಿ ಅಥವಾ ಹುದ್ದೆಗೆ ಬಂದು ಇನ್ನಷ್ಟೇ ಕೆಲವು ತಿಂಗಳುಗಳಾಗಿವೆ, ಅಷ್ಟರಲ್ಲೇ 444 ಕೋಟಿ ಅಕ್ರಮ ಮಾಡಲು ಸಾಧ್ಯವೇ? ಅದೆಲ್ಲವೂ ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ" ಎಂದು ತಳ್ಳಿಹಾಕಿದರು.
  
ದೆಹಲಿಯಲ್ಲಿ ಶಿಕ್ಷಣ ನೀತಿ ಕುರಿತು ಪ್ರಮುಖ ಸಭೆ

ತಮ್ಮ ದೆಹಲಿ ಪ್ರವಾಸದ ಕುರಿತು ವಿವರಣೆ ನೀಡಿದ ಸಿಎಂ, "ಇವತ್ತು ನಾವು ದೆಹಲಿಯಲ್ಲಿ ದಕ್ಷಿಣ ಭಾರತದ ರಾಜ್ಯಗಳ ಶಿಕ್ಷಣ ನೀತಿ (Education Policy) ಹಾಗೂ ಪರೀಕ್ಷಾ ಅಕ್ರಮಗಳನ್ನು ತಡೆಯುವ ಬಗ್ಗೆ ಮಹತ್ವದ ಸಭೆ ನಡೆಸಿದ್ದೇವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕೆ.ಸಿ. ವೇಣುಗೋಪಾಲ್ ಹಾಗೂ ತಮಿಳುನಾಡು, ತೆಲಂಗಾಣ, ಕೇರಳ, ಹಿಮಾಚಲ ಪ್ರದೇಶದ ಸಚಿವರು ಮತ್ತು ಸಿಎಂಗಳು ಭಾಗವಹಿಸಿದ್ದರು. ಕೆಪಿಎಸ್‍ಸಿ ಸೇರಿದಂತೆ ಎಲ್ಲಾ ಪರೀಕ್ಷೆಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಹಾಗೂ ಪೇಪರ್ ಲೀಕ್ ತಡೆಯುವ ಕುರಿತು ಹೈಕಮಾಂಡ್ ನಾಯಕರು ನಮಗೆ ಸ್ಪಷ್ಟ ಮಾರ್ಗದರ್ಶನ ನೀಡಿದ್ದಾರೆ. ನಾವು ಸಚಿವ ಯು ಟಿ ಖಾದರ್ ಅವರ ನೇತೃತ್ವದ ಸಚಿವ ಸಂಪುಟ ಉಪಸಮಿತಿಯ ಮೂಲಕ ಶಿಕ್ಷಣ ರಂಗದಲ್ಲಿ ಸುಧಾರಣೆ ತರಲು ಬದ್ಧರಾಗಿದ್ದೇವೆ" ಎಂದರು.  

"ಕೆಲವು ರಾಜ್ಯಗಳಲ್ಲಿ ಬಿಜೆಪಿ ಸಿದ್ಧಾಂತವನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಲು ಪ್ರಯತ್ನಿಸುತ್ತಿದ್ದಾರೆ. ನಮ್ಮಲ್ಲಿ ಮೊದಲಿನಿಂದಲೂ ಇರುವ ತತ್ವಗಳ ಆಧಾರದ ಮೇಲೆ ರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ಕ್ರಮ ವಹಿಸಲು ಮಾರ್ಗದರ್ಶನವಿದೆ" ಎಂದರು

ಗುತ್ತಿಗೆದಾರರ ಬಾಕಿ ಹಣದ ಬಿಡುಗಡೆ ಕೋರಿಕೆ

ಗುತ್ತಿಗೆದಾರರ ಸಂಘವು ₹38,000 ಕೋಟಿ ಬಾಕಿ ಹಣ ಬಿಡುಗಡೆಗೆ ಬರೆದಿರುವ ಪತ್ರದ ಕುರಿತು ಮಾತನಾಡಿ, "ಹಿಂದಿನ ಯಡಿಯೂರಪ್ಪನವರ ಸರ್ಕಾರ ಅಷ್ಟೊಂದು ಜಾಸ್ತಿ ಕೆಲಸಗಳನ್ನು ಕೊಟ್ಟು ಆರ್ಥಿಕ ಹೊರೆ ಹಾಕಿ ಹೊರಟುಹೋದರು. ಪತಿಕಾ ಗೋಷ್ಠಿ ನಡೆಸುತ್ತಿರುವವರಿಗೆ ಇದಕ್ಕೆ ಪರಿಹಾರ ಸೂಚಿಸಲು ಹೇಳಿ ಎಂದು ವ್ಯಂಗ್ಯವಾಡಿದರು. ಪರಿಸ್ಥಿತಿ ಕಷ್ಟವಿದೆ, ಆದರೂ ಅದರ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಿನಿಮಾ ಟಿಕೆಟ್ ಗೆ ಶೇ. 2ರಷ್ಟು ಸೆಸ್ ವಿರೋಧಿಸಿ ಹೈಕೋರ್ಟ್ ಮೆಟ್ಟಿಲೇರಿದ ಚಿತ್ರಮಂದಿರ ಮಾಲೀಕರುEPFO ವೇತನ ಮಿತಿ ₹25,000ಕ್ಕೆ ಏರಿಕೆ; ಸೆಪ್ಟೆಂಬರ್ PF ಲೆಕ್ಕ ಹೇಗೆ? ಇಲ್ಲಿದೆ 3 ಲೆಕ್ಕಾಚಾರಬೆಂಗಳೂರು ಸೇರಿ ರಾಜ್ಯದ ಹಲವೆಡೆ ಭಾರಿ ಮಳೆ; 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ಕಾಶ್ಮೀರದಲ್ಲಿ ಎನ್ ಕೌಂಟರ್: ಸೇನೆಯಿಂದ ಲಷ್ಕರ್-ಎ-ತೈಬಾ ಉಗ್ರನ ಹತ್ಯೆಹೈಟೆಕ್ ವೇಶ್ಯಾವಾಟಿಕೆ ದಂಧೆ ಜಾಲ ಪತ್ತೆ: ಭೋಜ್‌ಪುರಿ ಚಿತ್ರರಂಗದ ನಟಿ ಮುಂಬೈನಲ್ಲಿ ಅರೆಸ್ಟ್‌ !ವಿಮೆ ಕಂತು ಕಟ್ಟಿದ ಒಂದೇ ವರ್ಷಕ್ಕೆ ಸಾವು; ಕುಟುಂಬಕ್ಕೆ ಪರಿಹಾರ ನಿರಾಕರಿಸಿದ್ದ LICಗೆ ಕೋರ್ಟ್ ಆದೇಶPost office Scheme : ಈ ಯೋಜನೆಯಡಿ ದಿನಕ್ಕೆ ₹200 ಉಳಿಸಿ, 5 ವರ್ಷದಲ್ಲಿ ₹4.28 ಲಕ್ಷ ಪಡೆಯಿರಿಸಾರ್ವಜನಿಕರೇ ಗಮನಿಸಿ : ನಾಳೆಯಿಂದ ಬದಲಾಗಲಿದೆ ಈ 10 ಪ್ರಮುಖ ನಿಯಮಗಳು |rules change from oct.1ಶಕ್ತಿ ಯೋಜನೆ ದುರ್ಬಳಕೆಗೆ ಬ್ರೇಕ್: 250 ಕೋಟಿ ವೆಚ್ಚದಲ್ಲಿ 1 ಕೋಟಿ ಮಹಿಳೆಯರಿಗೆ 'ಶಕ್ತಿ ಸ್ಮಾರ್ಟ್ ಕಾರ್ಡ್' ವಿತರಣೆ ಮುಂದಾದ ಸರ್ಕಾರ!ಕರ್ನಾಟಕದ ಭೀಕರ ಬರ: ರೂ 18,748 ಕೋಟಿ ಬೆಳೆ ಹಾನಿ; ಕೇಂದ್ರದಿಂದ ನೆರವು ಕೋರಿದ ಸಚಿವ ಕುಮಾರಸ್ವಾಮಿ