ಶಿವಮೊಗ್ಗ: ಪರಿಸರ ಸಮತೋಲನ ಹಾಗೂ ವನ್ಯಜೀವಿಗಳ ಉಳಿವಿಗಾಗಿ ನೈಸರ್ಗಿಕ ಆವಾಸಸ್ಥಾನಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಶಿವಮೊಗ್ಗ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಪ್ರಸನ್ನ ಕೃಷ್ಣ ಪಟಗಾರ್ ಕರೆ ನೀಡಿದ್ದಾರೆ.

ಕರ್ನಾಟಕ ಸರ್ಕಾರ ಅರಣ್ಯ ಇಲಾಖೆಯ ಶಿವಮೊಗ್ಗ ವನ್ಯಜೀವಿ ವಿಭಾಗದ ವತಿಯಿಂದ ಅಕ್ಟೋಬರ್ 2 ರಿಂದ 8ರವರೆಗೆ ಆಯೋಜಿಸಲಾಗಿರುವ 2026ನೇ ಸಾಲಿನ ‘ವನ್ಯಜೀವಿ ಸಪ್ತಾಹ’ದ ಅಂಗವಾಗಿ, ಮಂಗಳವಾರ ನಗರದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ವಿಶೇಷ ಕಾರ್ಯಕ್ರಮ ಜರುಗಿತು.
"ಆವಾಸಸ್ಥಾನಗಳ ಸಂಪರ್ಕ ಮತ್ತು ವನ್ಯಜೀವಿ ಸಮೃದ್ಧಿ" ಎಂಬ ರಾಷ್ಟ್ರೀಯ ಘೋಷವಾಕ್ಯದಡಿ ಅರಣ್ಯ ಇಲಾಖೆಯ ಖಾಯಂ ಮತ್ತು ಹೊರಗುತ್ತಿಗೆ ನೌಕರರು ಹಾಗೂ ಇರುವಕ್ಕಿಯ ಅರಣ್ಯ ವಿದ್ಯಾಲಯದ ವಿದ್ಯಾರ್ಥಿಗಳಿಗಾಗಿ ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ಹಾಗೂ ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಕಾಡು ಮತ್ತು ಸಿಬ್ಬಂದಿಯ ರಕ್ಷಣೆ ಇಲಾಖೆಯ ಆದ್ಯತೆ: ಡಿಸಿಎಫ್ ಮಾತು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಿಸಿಎಫ್ ಪ್ರಸನ್ನ ಕೃಷ್ಣ ಪಟಗಾರ್, ಕಾಡು ಕೇವಲ ಮರ-ಗಿಡಗಳ ಸಂಗ್ರಹವಲ್ಲ, ಅದು ಲಕ್ಷಾಂತರ ವನ್ಯಜೀವಿಗಳ ನೆಲೆವೀಡು. ಪ್ರಸ್ತುತ ನಗರೀಕರಣ ಮತ್ತು ಮಾನವ ಹಸ್ತಕ್ಷೇಪದಿಂದಾಗಿ ವನ್ಯಜೀವಿಗಳ ಆವಾಸಸ್ಥಾನಗಳು ಛಿದ್ರವಾಗುತ್ತಿವೆ ಎಂದು ಖೇದ ವ್ಯಕ್ತ ಪಡಿಸಿದರು.

ಆವಾಸಸ್ಥಾನಗಳ ನಡುವೆ ನೈಸರ್ಗಿಕ ಸಂಪರ್ಕ ಕಾರಿಡಾರ್‌ಗಳನ್ನು ಉಳಿಸಿಕೊಂಡಾಗ ಮಾತ್ರ ಮಾನವ-ವನ್ಯಜೀವಿ ಸಂಘರ್ಷ ತಪ್ಪಿಸಲು ಹಾಗೂ ಜೀವವೈವಿಧ್ಯವನ್ನು ಮುಂದಿನ ಪೀಳಿಗೆಗೆ ಉಳಿಸಲು ಸಾಧ್ಯ. ಕಾಡು-ಮೇಡುಗಳಲ್ಲಿ ಜೀವದ ಹಂಗು ತೊರೆದು ನಿರಂತರ ಕರ್ತವ್ಯ ನಿರ್ವಹಿಸುವ ಅರಣ್ಯ ಸಿಬ್ಬಂದಿಯ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡುವುದು ಇಲಾಖೆಯ ಮುಖ್ಯ ಜವಾಬ್ದಾರಿಯಾಗಿದೆ. ನೌಕರರ ಆರೋಗ್ಯ ಸುಸ್ಥಿತಿಯಲ್ಲಿದ್ದಾಗ ಮಾತ್ರ ಅರಣ್ಯ ಸಂರಕ್ಷಣೆ ಇನ್ನಷ್ಟು ಪರಿಣಾಮಕಾರಿಯಾಗಿ ಸಾಗಲು ಸಾಧ್ಯ ಎಂದು ತಿಳಿಸಿದರು.
ಆರೋಗ್ಯ ಶಿಬಿರ ಮತ್ತು ನೌಕರರಿಗೆ ಅಂಚೆ ವಿಮೆ ಸೌಲಭ್ಯ
ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್. ಮೋಹನ್‌ಕುಮಾರ್, ಅರಣ್ಯ ಇಲಾಖೆ ಸಿಬ್ಬಂದಿಯ ಸೇವೆ ಹಾಗೂ ತ್ಯಾಗವನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಮೆಗ್ಗಾನ್ ಆಸ್ಪತ್ರೆ, ನಂಜಪ್ಪ ಆಸ್ಪತ್ರೆ, ವಾಸನ್ಸ್ ಐ ಕೇರ್ ಹಾಗೂ ಸುಬ್ಬಯ್ಯ ಆಸ್ಪತ್ರೆಗಳ ತಜ್ಞ ವೈದ್ಯರು ಮತ್ತು ಸಿಬ್ಬಂದಿ ಪಾಲ್ಗೊಂಡು ನೌಕರರಿಗೆ ಉಚಿತ ಸಾಮಾನ್ಯ ತಪಾಸಣೆ, ದಂತ ಹಾಗೂ ನೇತ್ರ ತಪಾಸಣೆ ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಹೊರಗುತ್ತಿಗೆ ನೌಕರರಿಗೆ ಸಾಮಾಜಿಕ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ, ಅಂಚೆ ಇಲಾಖೆಯ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಶಾ ಕೆ. ಅವರ ಸಹಯೋಗದೊಂದಿಗೆ ಪೋಸ್ಟಲ್ ಲೈಫ್ ಇನ್ಸುರೆನ್ಸ್ (PLI) ನೋಂದಣಿ ಮಾಡಿಸಿಕೊಡಲಾಯಿತು.

55 ಮಂದಿಯಿಂದ ರಕ್ತದಾನ, ಸಾಕ್ಷ್ಯಚಿತ್ರ ಪ್ರದರ್ಶನ
ರೋಟರಿ ಕ್ಲಬ್ ಶಿವಮೊಗ್ಗ ಮಿಡ್‌ಟೌನ್ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಅರಣ್ಯ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 55 ಮಂದಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. ನಂತರ ವಿದ್ಯಾರ್ಥಿಗಳಲ್ಲಿ ವನ್ಯಜೀವಿ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲು ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ಮುಕ್ತ ಸಂವಾದ ಜರುಗಿತು.

ಕಾರ್ಯಕ್ರಮದಲ್ಲಿ ಕಾರ್ಗಲ್ ವನ್ಯಜೀವಿ ಉಪವಿಭಾಗದ ಎಸಿಎಫ್ ಗುರುರಾಜ್ ಸಿ.ಬಿ., ರೋಟರಿ ಮಿಡ್‌ಟೌನ್ ಅಧ್ಯಕ್ಷ ಹಾಗೂ ಮೆಗ್ಗಾನ್ ಆಸ್ಪತ್ರೆಯ ಇಎನ್‌ಟಿ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ಎಸ್., ಸುಬ್ಬಯ್ಯ ಡೆಂಟಲ್ ಕಾಲೇಜಿನ ಪ್ರಾಂಶುಪಾಲ ಡಾ. ಸುರೇಶ್ ಬಿ.ಎಸ್., ಸರ್ಕಾರಿ ನೌಕರರ ಸಂಘದ ಜಿಲ್ಲಾ ಖಜಾಂಚಿ ಡಾ. ಸಿ.ಎ. ಹಿರೇಮಠ್, ರಾಜ್ಯ ಪರಿಷತ್ ಸದಸ್ಯ ಎನ್.ಎಂ. ರಂಗನಾಥ್, ನಂಜಪ್ಪ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ರಾಕೇಶ್ ಎಂ.ಎಲ್., ಡಾ. ವಿನ್ಸೆಂಟ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಶಿಬಿರದಲ್ಲಿ ಇಲಾಖೆಯ 189 ಸಿಬ್ಬಂದಿಗಳು ಹಾಗೂ ಕಾಲೇಜಿನ 47 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು...