ಇಸ್ಲಾಮಾಬಾದ್: ಪಾಕಿಸ್ತಾನ ಸೇನೆಯ ತರಬೇತಿ ವಿಮಾನವೊಂದು ಬಲೂಚಿಸ್ತಾನ ಪ್ರಾಂತ್ಯದ ಕ್ವೆಟ್ಟಾ ಬಳಿ ಪತನಗೊಂಡಿದೆ. ದುರಂತದಲ್ಲಿ ಇಬ್ಬರು ಪೈಲಟ್ ಗಳು ಸಜೀವದಹನವಾಗಿದ್ದಾರೆ.
ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾ ಬಳಿ ಪಾಕ್ ಸೇನೆಯ ತರಬೇತಿ ವಿಮಾನ ಪತನಗೊಂಡು ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ. ಮೃತ ಪೈಲಟ್‌ಗಳನ್ನು ತರಬೇತುದಾರ ಇನ್‌ಸ್ಟ್ರಕ್ಟರ್ ಮೇಜರ್ ಹುಸ್ನೇನ್ ಶಹಜಾದ್ ಹುಮಾಯೂನ್ ಮತ್ತು ತರಬೇತಿ ಪಡೆಯುತ್ತಿದ್ದ ಕ್ಯಾಪ್ಟನ್ ಅಬ್ದುಲ್ ಸಮದ್ ಎಂದು ಗುರುತಿಸಲಾಗಿದೆ.
ಮಧ್ಯಾಹ್ನದ ವೇಳೆಗೆ ಪಾಕಿಸ್ತಾನ ಆರ್ಮಿ ಏವಿಯೇಷನ್‌ನ ‘ಮುಶಕ್’ ತರಬೇತಿ ವಿಮಾನವು ತಾಂತ್ರಿಕ ದೋಷದಿಂದಾಗಿ ಕ್ವೆಟ್ಟಾದ ನವಾನ್ ಕಿಲ್ಲಿ ಬಳಿ ಪತನಗೊಂಡಿದೆ. ಈ ಅಪಘಾತದಲ್ಲಿ ಇಬ್ಬರು ಪೈಲಟ್ ಗಳು ಮೃತಪಟ್ಟಿದ್ದಾರೆ ಎಂದು ಪಾಕ್ ಸೇನೆ ತಿಳಿಸಿದೆ.
ಕ್ವೆಟ್ಟಾ ಜಿಲ್ಲೆಯ ನವಾನ್ ಕಿಲ್ಲಿ ಎಂಬ ಪ್ರದೇಶದಲ್ಲಿ ಪಾಕಿಸ್ತಾನ ಆರ್ಮಿ ಏವಿಯೇಷನ್‌ಗೆ ಸೇರಿದ ಮುಶಕ್ ಮಾದರಿಯ ತರಬೇತಿ ವಿಮಾನವು ಎಂದಿನಂತೆ ಹಾರಾಟ ನಡೆಸುತ್ತಿದ್ದಾಗ, ಮಧ್ಯಾಹ್ನದ ವೇಳೆಗೆ ತಾಂತ್ರಿಕ ದೋಷ ಕಾಣಿಸಿಕೊಂಡು ನೆಲಕ್ಕೆ ಅಪ್ಪಳಿಸಿದೆ. ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣದಿಂದ ಈ ದುರಂತ ಸಂಭವಿಸಿದ್ದು, ಇಬ್ಬರೂ ಪೈಲಟ್‌ಗಳು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಜೂನ್ ತಿಂಗಳಲ್ಲಿ ಮುಜಫರಾಬಾದ್ ಬಳಿ ಪಾಕಿಸ್ತಾನ ಸೇನೆಯ Mi-17 ಹೆಲಿಕಾಪ್ಟರ್ ಟೇಕ್ ಆಫ್ ಆಗುವಾಗ ತಾಂತ್ರಿಕ ದೋಷದಿಂದ ಪತನಗೊಂಡು ಸಿಬ್ಬಂದಿ ಮೃತಪಟ್ಟಿದ್ದರು. ಜೂನ್ ತಿಂಗಳಲ್ಲಿ ಮರ್ದಾನ್‌ನಲ್ಲಿ ತರಬೇತಿ ನಿರತ ವಾಯುಪಡೆಯ ವಿಮಾನ ಪತನಗೊಂಡು ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದ್ದರು.
ಇನ್ನು ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ದಿಯಾಮೆರ್ ಜಿಲ್ಲೆಯ ಚಿಲಾಸ್ ಪಟ್ಟಣದಲ್ಲಿ ಸೇನಾ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ಪತನಗೊಂಡು ಐವರು ಸಿಬ್ಬಂದಿ ಮೃತಪಟ್ಟಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಮಗಳ ಮೇಲೆ ಸಾಮೂಹಿಕ ಅತ್ಯಾಚಾರ: ಕೇಸ್ ಹಿಂಪಡೆಯಲು ನಿರಾಕರಿಸಿದ್ದಕ್ಕೆ ಸಂತ್ರಸ್ತೆಯ ತಂದೆಯನ್ನೇ ಬರ್ಬರವಾಗಿ ಹತ್ಯೆಗೈದ ದುರುಳರು
ಜೈಪುರ: ಇದೆಂತಹ ಭೀಭತ್ಯ್ಸ. ಮಗಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದ ಕಿರಾತಕರು ಮಗಳಿಗೆ ನ್ಯಾಯಕ್ಕಾಗಿ ಕಾನೂನು ಹೋರಾಟ ನಡೆಸುತ್ತಿದ್ದ ತಂದೆ ಕೇಸ್ ಹಿಂಪಡೆಯಲು ಒಪ್ಪಿಲ್ಲ ಎಂದು ಅವರನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ರಾಜಸ್ಥಾನದ ಜೈಪುರದ ಕಲ್ವಾರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅತ್ಯಾಚಾರವೆಸಗಿದ್ದ ಆರೋಪಿಗಳೇ ಸಂತ್ರಸ್ತೆಯ ತಂದೆಯನ್ನು ಕೊಲೆಗೈದಿದ್ದಾರೆ. 58 ವರ್ಷದ ವ್ಯಕ್ತಿಯೊಬ್ಬರ ಮೃತದೇಹವು ಅವರ ಮನೆಯ ಸಮೀಪವಿರುವ ಬಯಲು ಪ್ರದೇಶವೊಂದರಲ್ಲಿ ಹಗ್ಗದ ಕುಣಿಕೆಗೆ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತ ವ್ಯಕ್ತಿಯ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಒಂದು ತಿಂಗಳ ನಂತರ ಈ ಘಟನೆ ನಡೆದಿದೆ. ಆರಂಭದಲ್ಲಿ ಪೊಲೀಸರು ಆತ್ಮಹತ್ಯೆ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿದ್ದರಾದರೂ, ಇದೀಗ ಸಂತ್ರಸ್ತೆಯ ತಾಯಿ ನೀಡಿದ ದೂರಿನ ಮೇರೆಗೆ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ.
ಮಗಳನ್ನು ಜೂನ್ ತಿಂಗಳಲ್ಲಿ ಅಪಹರಿಸಲಾಗಿತ್ತು. ಅಪಹರಣಕಾರ ತನ್ನ ಸ್ನೇಹಿತರ ಸಹಾಯದಿಂದ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದ ಎಂದು ಮೃತ ವ್ಯಕ್ತಿಯ ಪತ್ನಿ ದೂರಿನಲ್ಲಿ ಆರೋಪಿಸಿದ್ದಾರೆ. ಎರಡು ದಿನಗಳ ನಂತರ ಮಗಳು ವಾಪಸ್ ಆದಾಗ ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಯಿತು. ನಾಲ್ವರು ವ್ಯಕ್ತಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರದ ಪ್ರಕರಣವನ್ನು ದಾಖಲಿಸಲಾಯಿತು. ತನಿಖೆಯ ನಂತರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.
ಪ್ರಕರಣ ದಾಖಲಾದಾಗಿನಿಂದಲೂ ಆರೋಪಿಯು ನಮಗೆ ನಿರಂತರವಾಗಿ ಬೆದರಿಕೆ ಹಾಕುತ್ತಿದ್ದ. ಪ್ರಕರಣವನ್ನು ಹಿಂಪಡೆಯದಿದ್ದರೆ ನಿನ್ನ ಪತಿಯನ್ನು ಕೊಲ್ಲುವುದಾಗಿ ಹೆದರಿಸಿದ್ದ. ನನ್ನ ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪಿಗಳು ಸಂಚು ರೂಪಿಸಿ, ಈಗ ನನ್ನ ಪತಿಯನ್ನೂ ಹತ್ಯೆ ಮಾಡಿದ್ದಾರೆ. ಘಟನೆಯನ್ನು ಆತ್ಮಹತ್ಯೆಯಂತೆ ಬಿಂಬಿಸಲು ಮೃತದೇಹವನ್ನು ಫ್ಯಾನ್‌ಗೆ ನೇತುಹಾಕಿದ್ದರು ಎಂದು ದೂರಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.