ಸಾಗರ: ತಾಲ್ಲೂಕಿನ ಕೆಳದಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಪ್ರಸ್ತುತ ಸಾಮಾನ್ಯ ಮೀಸಲಾತಿ (ಕ್ಯಾಟಗರಿ) ಬದಲಾವಣೆಗೆ ಯಾವುದೇ ಹುನ್ನಾರ ನಡೆದರೆ, ಕಾಂಗ್ರೆಸ್ ಕಚೇರಿ ಹಾಗೂ ಕೆಪಿಸಿಸಿ ಮುಂಭಾಗ ಧರಣಿ ಮತ್ತು ಪ್ರತಿಭಟನೆ ನಡೆಸುವುದಾಗಿ ಹಿರಿಯ ಕಾಂಗ್ರೆಸ್ ಮುಖಂಡ ತುಕಾರಾಂ ಶಿರವಾಳ ಎಚ್ಚರಿಕೆ ನೀಡಿದ್ದಾರೆ.
ಇಂದು ಸಾಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಮಾತನಾಡಿದ ಅವರು, ಮುಂಬರುವ ಚುನಾವಣೆಗೆ ಸಂಬಂಧಿಸಿದಂತೆ ಕೆಳದಿ ಕೇಂದ್ರಕ್ಕೆ ಪ್ರಕಟವಾಗಿರುವ ಮೀಸಲಾತಿಯು ಕಾಂಗ್ರೆಸ್ ಪಕ್ಷಕ್ಕೆ ಪೂರಕವಾಗಿದ್ದು, ಗೆಲುವಿಗೆ ಪೂರಕ ವಾತಾವರಣವಿದೆ ಎಂದರು.
ಆದರೆ, ಕೆಲವು ಹಿತಾಸಕ್ತಿಗಳು ಅಥವಾ ಕಾಣದ ಕೈಗಳು ಈ ಕ್ಯಾಟಗರಿಯನ್ನು ಅದಲು-ಬದಲು ಮಾಡಲು ಯತ್ನಿಸುತ್ತಿವೆ ಎಂಬ ಬಲವಾದ ವದಂತಿಗಳು ಕೇಳಿಬರುತ್ತಿವೆ ಎಂದು ತಿಳಿಸಿದರು.
ಶಾಸಕರು ಹಾಗೂ ಮುಖಂಡರ ಭೇಟಿ:
ಮೀಸಲಾತಿ ಪ್ರಕಟವಾದ ಹಿನ್ನೆಲೆಯಲ್ಲಿ ಈಗಾಗಲೇ ಬೆಂಗಳೂರಿಗೆ ತೆರಳಿ ಪಕ್ಷದ ಹಿರಿಯ ಮುಖಂಡರು, ಸಚಿವರು ಹಾಗೂ ಸ್ಥಳೀಯ ಶಾಸಕರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿರುವುದಾಗಿ ತಿಳಿಸಿದ ಅವರು, ಯಾವುದೇ ಕಾರಣಕ್ಕೂ ಕೆಳದಿ ಕ್ಷೇತ್ರದ ಮೀಸಲಾತಿಯನ್ನು ಬದಲಾವಣೆ ಮಾಡುವ ಕೆಲಸ ನಡೆಯಬಾರದು ಎಂದು ವಿನಂತಿಸಿದರು.
ಕರಡು ಮೀಸಲಾತಿ ಆಕ್ಷೇಪಣೆಗೆ ಕಾಲಾವಕಾಶ ಇರುವುದರಿಂದ ಬದಲಾವಣೆ ಮಾಡುವ ಸಾಧ್ಯತೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಅವರು, ಅಂತಹ ಪ್ರಯತ್ನಗಳು ನಡೆದರೆ ಕಾರ್ಯಕರ್ತರೊಂದಿಗೆ ಹೋರಾಟಕ್ಕೆ ಸಿದ್ಧರಾಗಬೇಕಾಗುತ್ತದೆ ಎಂದರು.
ಟಿಕೆಟ್ ಆಕಾಂಕ್ಷೆ ಮತ್ತು ಪಕ್ಷನಿಷ್ಠೆ:
"ನಾನು ಕಳೆದ 30-35 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ. ಬೀಗಾರಿ ಗ್ರಾಮ ಪಂಚಾಯಿತಿಯಲ್ಲಿ ಮೂರು ಬಾರಿ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ಈ ಹಿಂದೆ ಅನಿವಾರ್ಯ ಕಾರಣಗಳಿಂದ ಸ್ವತಂತ್ರವಾಗಿ ಸ್ಪರ್ಧಿಸಿ 5,000ಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದರೂ, ನಂತರ ಪುನಃ ಪಕ್ಷಕ್ಕೆ ಮರಳಿ ಸಕ್ರಿಯವಾಗಿ ಪಕ್ಷ ಸಂಘಟನೆ ಮಾಡಿದ್ದೇನೆ" ಎಂದು ತುಕಾರಾಂ ಶಿರವಾಳ ನೆನಪಿಸಿಕೊಂಡರು.
ಕುಟುಂಬದಲ್ಲಿಯೇ ಇಬ್ಬರು ಆಕಾಂಕ್ಷಿಗಳು:
ಕುಟುಂಬದಿಂದ ತಮ್ಮ ಸಹೋದರನೂ ಟಿಕೆಟ್ ಆಕಾಂಕ್ಷಿಯಾಗಿರುವ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, "ಪ್ರಜಾಪ್ರಭುತ್ವ ಹಾಗೂ ರಾಷ್ಟ್ರೀಯ ಪಕ್ಷದಲ್ಲಿ ಆಕಾಂಕ್ಷಿಗಳು ಇರುವುದು ಸಹಜ. ಪಕ್ಷದಲ್ಲಿ ಯಾರು ಎಷ್ಟು ವರ್ಷ ಸೇವೆ ಮಾಡಿದ್ದಾರೆ ಎಂಬುದನ್ನು ಪರಿಗಣಿಸಿ ಪಕ್ಷವೇ ಅಂತಿಮ ತೀರ್ಮಾನ ಮಾಡಲಿದೆ. ನಾನು ಪಕ್ಷದಲ್ಲಿ ಹಿರಿಯನಾಗಿದ್ದು, ಇದು ನನ್ನ ಕೊನೆಯ ಚುನಾವಣೆಯಾಗಬಹುದು ಎಂಬ ಅಪೇಕ್ಷೆಯಿಂದ ಜನರ ಸೇವೆಗಾಗಿ ಈ ಬಾರಿ ಸ್ಪರ್ಧಿಸಲು ಬಯಸಿದ್ದೇನೆ" ಎಂದು ಸ್ಪಷ್ಟಪಡಿಸಿದರು.
ಪ್ರತಿಭಟನೆಯ ಎಚ್ಚರಿಕೆ:
ಯಾರದೋ ಹಿತಾಸಕ್ತಿಗೆ ಅಥವಾ ಪ್ರಭಾವಕ್ಕೆ ಮಣಿದು ಕೆಳದಿ ಕ್ಷೇತ್ರದ ಮೀಸಲಾತಿಯನ್ನು ಬದಲಾಯಿಸಲು ಹೊರಟರೆ, ಸಾಗರ ಬ್ಲಾಕ್ ಕಾಂಗ್ರೆಸ್, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿ ಮಾತ್ರವಲ್ಲದೆ ಬೆಂಗಳೂರಿನ ಕೆಪಿಸಿಸಿ ಕಚೇರಿಯ ಮುಂಭಾಗದಲ್ಲೂ ಧರಣಿ ಸತ್ಯಾಗ್ರಹ ಕೂರುವುದಾಗಿ ಅವರು ನೇರ ಎಚ್ಚರಿಕೆ ರವಾನಿಸಿದರು. ಈ ಹೋರಾಟಕ್ಕೆ ಕೆಳದಿ ಹೋಬಳಿಯ ಜನತೆ ಮತ್ತು ಪಕ್ಷದ ಕಾರ್ಯಕರ್ತರು ಸಾಥ್ ನೀಡಬೇಕು ಎಂದು ಅವರು ಮನವಿ ಮಾಡಿದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು