ಮುದ್ದೇನಹಳ್ಳಿ: ಪ್ರಧಾನಿಗಳಾದ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತವು ವಿಶ್ವದ ಮೂರನೇ ಬೃಹತ್ ಆರ್ಥಿಕ ಶಕ್ತಿ ಆಗುವತ್ತ ದಾಪುಗಾಲು ಇಡುತ್ತಿದೆ. ಅದಕ್ಕೆ ಪೂರಕವಾಗಿ ನಮ್ಮ ಸನಾತನ ಸಂಸ್ಕೃತಿ, ಮಮತೆ, ಪ್ರೀತಿ, ಕರುಣೆಯಿಂದ ಕೂಡ ಸಮಾಜ ಪರಮಪೂಜ್ಯ ಮಧುಸೂಧನ ಸಾಯಿ ಅವರ ನೇತೃತ್ವದಲ್ಲಿಯೇ ಪುನರುಜ್ಜೀವನ ಆಗಬೇಕು ಸಂಗೀತ ಎಂದು ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಹೇಳಿದರು.
ಇಲ್ಲಿನ ಶ್ರೀ ಸತ್ಯಸಾಯಿ ಗ್ರಾಮದಲ್ಲಿ ಶ್ರೀ ಶ್ರೀ ಮಧುಸೂಧನ ಸಾಯಿ ಅವರ ದಿವ್ಯ ಸಾನ್ನಿಧ್ಯದಲ್ಲಿ ನಡೆದ ನವರಾತ್ರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಚಿವರು ಮಾತನಾಡಿದರು.
ಇದೊಂದು ಅಪರೂಪದ ಕಾರ್ಯಕ್ರಮ. ಮಾನವೀಯ ಮೌಲ್ಯಗಳನ್ನು ಕಲಿಕೆ, ದೈವ ಸೇವೆ, ಕರುಣೆ, ಪ್ರೀತಿ ಭಾವಗಳು, ಮೌಲ್ಯಗಳು ಇಲ್ಲಿ ನೆಲೆಸಿವೆ. ಸದ್ಗುರುಗಳ ಆಶಯಕ್ಕೆ ಅನುಗುಣವಾಗಿ ಇಲ್ಲಿ ನಡೆಯುತ್ತಿರುವ ಕಾರ್ಯಗಳು ನನಗೆ ದಿವ್ಯ ಅನುಭೂತಿ ನೀಡುವೆ ಎಂದರು ಕೇಂದ್ರ ಸಚಿವರು.
ನಮ್ಮ ಸಂಸ್ಕೃತಿ ಅನನ್ಯ ಸಂಕೇತವಾದ ವಿಜಯ ದಶಮಿಯ ಕಾಲ ಇದಾಗಿದ್ದು, ತಾಯಿ ಚಾಮುಂಡೇಶ್ವರಿ ಆರಾಧನೆ ಎಲ್ಲರೂ ಮಾಡುತ್ತಿದ್ದೇವೆ. ವಿಶೇಷವೆಂದರೆ ಇಂದು ಗುರುಗಳ ವಾರ ಗುರುವಾರ. ನಾನು ಗುರುಗಳ ಸಾನ್ನಿಧ್ಯಕ್ಕೆ ಬಂದಿದ್ದೇನೆ. ಇದು ಗುರುಕೃಪೆ ಎಂದು ಭಾವಿಸಿದ್ದೇನೆ ಎಂದು ಸಚಿವರು ನುಡಿದರು.
ಈ ಸಂಸ್ಥೆಗೆ ರಾಷ್ಟ್ರಪತಿಗಳು, ಪ್ರಧಾನಿಗಳು ಸೇರಿದಂತೆ ದೇಶ ವಿದೇಶಗಳ ಅನೇಕ ಮಹನೀಯರು ಬಂದು ಇಲ್ಲಿ ಸದ್ಗುರುಗಳು ಸೃಷ್ಟಿಸಿರುವ ಪವಾಡಸದೃಶ ಸೇವಾ ಪರಂಪರೆಯನ್ನು ವೀಕ್ಷಿಸಿದ್ದಾರೆ. ಒಂದು ಸರ್ಕಾರ ಮಾಡಲಾಗದ ಕಾರ್ಯಗಳನ್ನು ಸದ್ಗುರು ಅವರು ಸಾಕ್ಷಾತ್ಕರಿಸಿದ್ದಾರೆ. ಶಿಕ್ಷಣ, ಕಲೆ, ಸಂಸ್ಕೃತಿ, ಆರೋಗ್ಯ, ಪೌಷ್ಟಿಕಾಂಶ ನೀಡಿಕೆ ಮುಂತಾದ ಕಾರ್ಯಗಳಲ್ಲಿ ಸದ್ಗುರುಗಳ ಮುಂಚೂಣಿಯಲ್ಲಿ ನಿಂತು ಕೊಡುಗೆ ನೀಡುತ್ತಿದ್ದಾರೆ. ಇಲ್ಲಿನ ವಾತಾವರಣ ಕಂಡು ನಾನು ಧನ್ಯನಾಗಿದ್ದೇನೆ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.
ಇದೆಲ್ಲವನ್ನೂ ನೋಡಿದರೆ ಇಲ್ಲಿ ಪವಾಡವೇ ನಡೆದಿರಬಹುದು ಎಂದು ಹೇಳದೆ ಇರಲು ನನಗೆ ಸಾಧ್ಯವಾಗುತ್ತಿಲ್ಲ. ಭಗವಂತನ ದಯೆ, ಗುರುಕೃಪೆ, ದೂರದೃಷ್ಟಿ ಮತ್ತು ಸೇವಾ ತತ್ಪರತೆಯಿಂದ ಇದೆಲ್ಲವೂ ಸಾಧ್ಯವಾಗಿದೆ ಎಂದು ನಾನು ನಂಬಿದ್ದೇನೆ ಎಂದು ಅವರು ನುಡಿದರು.
ಈಗಿನ ಸಮಾಜ ಯಾವ ದಿಕ್ಕಿನಲ್ಲಿದೆ ಎಂಬುದನ್ನು ನೋಡಿದರೆ ಕಳವಳ ಆಗುತ್ತದೆ. ಒಂದು ಜಗತ್ತು, ಒಂದು ಕುಟುಂಬ ಎನ್ನುವ ಭಾವನೆ ಬಹಳ ಶ್ರೇಷ್ಠ ಎಂಬುದು ನನ್ನ ಭಾವನೆ. ಜಗತ್ತಿನಲ್ಲಿ ಯುದ್ಧಗಳು ನಡೆಯುತ್ತಿವೆ, ಅಭಿವೃದ್ಧಿ ಬದಲು ಸಂಘರ್ಷ ಉಂಟಾಗಿದೆ, ಮನುಷ್ಯ ಅಶಾಂತಿಯಲ್ಲಿ ಇದ್ದಾನೆ. ಅಭಿವೃದ್ಧಿ ಪೈಪೋಟಿಯ ನಡುವೆ ಮಾನವೀಯತೆ ಸಾರುತ್ತಿರುವ ಈ ಮಹಾನ್ ಸಂಸ್ಥೆ ಪ್ರಭಾವಶೀಲವಾಗಿದೆ ಎಂದರು ಸಚಿವರು.
ನಾಡಿನಲ್ಲಿ, ದೇಶದಲ್ಲಿ ಅಭಿವೃದ್ಧಿ ಕಾಣುತ್ತಿದ್ದೇವೆ. ಸಂಸ್ಕೃತಿ ಮನವಿಯ ಮೌಲ್ಯಗಳು ನಶಿಸುತ್ತಿವೆ. ಪರಿಶುದ್ಧ ಮನಸು ಎಲ್ಲರಿಗೂ ಅಗತ್ಯವಾಗಿದೆ. ಸಮಾನತೆ ಕೇವಲ ಘೋಷಣೆಗೆ ಮಾತ್ರ ಸೀಮಿತವಾಗಿದೆ, ಸದ್ಗುರುಗಳು ಅದನ್ನು ಕಾರ್ಯರೂಪಕ್ಕೆ ತಂದಿದ್ದಾರೆ, ಇದು ನಮಗೆಲ್ಲರಿಗೂ ಪ್ರೇರಣೆ ನೀಡುತ್ತಿದೆ. ನಾಡಿನ ಪ್ರತಿ ಕುಟುಂಬ ನೆಮ್ಮದಿ, ಸಮೃದ್ಧಿ ಕೂಡಿರಬೇಕು ಎಂಬುದು ನನ್ನ ಕನಸು. ನನ್ನ ಕನಸು ನನಸಾಗಿಲ್ಲ. ಸದ್ಗುರುಗಳೇ ನನ್ನ ಕನಸಿಗೆ ಶಕ್ತಿ ತುಂಬಿ ಆಶೀರ್ವದಿಸಬೇಕು ಎಂದು ಪ್ರಾರ್ಥಿಸುತ್ತೇನೆ ಎಂದರು ಕುಮಾರಸ್ವಾಮಿ ಅವರು.
ಶಿಕ್ಷಣ, ಆರೋಗ್ಯ ದುಬಾರಿಯಾಗಿದೆ. ಶ್ರೀಗಳು ಅದನ್ನು ಉಚಿತವಾಗಿ ಕೊಡುತ್ತಿದ್ದಾರೆ. ಇದು ನಾಡಿಗೆ ದಾರಿದೀಪ. ಸದ್ಗುರುಗಳ ದೂರದೃಷ್ಟಿ, ಅನುಷ್ಠಾನದ ರೀತಿ ನೋಡಿ ನಾನು ಚಿಕಿತನಾಗಿದ್ದೇನೆ. ಗುಣಾತ್ಮಕ, ರಚನಾತ್ಮಕ ಹಾಗೂ ಮಾನವೀಯ ಮೌಲ್ಯಗಳನ್ನು ರೂಪಿಸುವ ಶಿಕ್ಷಣದ ರೂವಾರಿಗಳಾಗಿ ಅವರು ಸಮಾಜಕ್ಕೆ ದೊಡ್ಡ ಶಕ್ತಿಯಾಗಿದ್ದಾರೆ. ಸದ್ಗುರುಗಳ ಸಾನ್ನಿಧ್ಯದಲ್ಲಿ ಹೇಳುತ್ತಿದ್ದೇನೆ. ಸದ್ಗುರುಗಳ ಮಾರ್ಗದರ್ಶನದಲ್ಲಿ ನನ್ನ ಗುರಿ ಮುಟ್ಟುವ ಕೆಲಸ ಮಾಡುತ್ತೇನೆ ಎಂದರು ಕುಮಾರಸ್ವಾಮಿ ಅವರು.
ಶ್ರೀ ಶ್ರೀ ಸದ್ಗುರು ಮಧುಸೂಧನ ಸಾಯಿ ಅವರು ತಮ್ಮ ಆಶೀರ್ವಚನ ನೀಡಿದರು. ಟ್ರಸ್ಟಿ ನರಸಿಂಹ ಮೂರ್ತಿ ಅವರು ಉಪಸ್ಥಿತರಿದ್ದರು.