ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ‘ಕಳಂಕ’ (Stigma) ಎಂಬುದು ಅತ್ಯಂತ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ರೋಗಿಗಳು ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆಯಲು ಇದು ಪ್ರಮುಖ ತಡೆಯಾಗಿದೆ. ಇದು ವ್ಯಕ್ತಿಯ ಜೀವನದ ಗುಣಮಟ್ಟವನ್ನು ಕುಗ್ಗಿಸುವುದಲ್ಲದೆ, ಅಕಾಲಿಕ ಸಾವಿಗೂ ಕಾರಣವಾಗುತ್ತಿದೆ. ರೋಗನಿರ್ಣಯ ಪದ್ಧತಿಗಳು ಮತ್ತು ಮಾನಸಿಕ ಸಮಸ್ಯೆಗಳ ಕುರಿತಾದ ಸಾಮಾಜಿಕ ಕಳಂಕದ ನಡುವಿನ ಸಂಬಂಧವನ್ನು ನಾಲ್ಕು ಪ್ರಮುಖ ಜಾಗತಿಕ ರೋಗನಿರ್ಣಯ ಚೌಕಟ್ಟುಗಳ (Diagnostic Frameworks) ಆಧಾರದ ಮೇಲೆ ವಿಶ್ಲೇಷಿಸಲಾಗಿದೆ.
ಡಿಎಸ್‌ಎಮ್ (DSM – Diagnostic and Statistical Manual of Mental Disorders): ಅಮೆರಿಕನ್ ಸೈಕಿಯಾಟ್ರಿಕ್ ಅಸೋಸಿಯೇಷನ್ ಅಭಿವೃದ್ಧಿಪಡಿಸಿದ ಈ ಪದ್ಧತಿಯು ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ. ಆದರೆ, ಇದು ರೋಗಲಕ್ಷಣಗಳ ಆಧಾರದ ಮೇಲೆ ಪ್ರತ್ಯೇಕ ವರ್ಗೀಕರಣ ಮಾಡುವುದರಿಂದ, ಮಾನಸಿಕ ಸಮಸ್ಯೆಗಳನ್ನು ಅತಿಯಾಗಿ ಹೈಲೈಟ್ ಮಾಡುತ್ತದೆ ಎಂಬ ವಿಮರ್ಶೆಯಿದೆ. ಬಯೋಮೆಡಿಕಲ್ ವಿವರಣೆಗಳು ರೋಗಿಯ ಮೇಲಿನ ನೈತಿಕ ನಿಂದನೆಯನ್ನು ಕಡಿಮೆ ಮಾಡಿದರೂ, ಸಮಾಜದಲ್ಲಿ ಅಂತಹ ವ್ಯಕ್ತಿಗಳು ‘ಅಪಾಯಕಾರಿ’ ಎಂಬ ಭಾವನೆಯನ್ನು ಮತ್ತು ಅವರೊಡನೆ ಕಾಯ್ದುಕೊಳ್ಳಬೇಕಾದ ಸಾಮಾಜಿಕ ಅಂತರವನ್ನು ಹೆಚ್ಚಿಸಿವೆ.
ಐಸಿಡಿ-11 (ICD-11 – International Classification of Diseases): ವಿಶ್ವ ಆರೋಗ್ಯ ಸಂಸ್ಥೆಯ ಐಸಿಡಿ-11 ಪದ್ಧತಿಯು ಕಠಿಣ ವರ್ಗೀಕರಣದ ಬದಲಿಗೆ ‘ಸ್ಪೆಕ್ಟ್ರಮ್’ ಅಥವಾ ತೀವ್ರತೆಯ ಆಧಾರದ ಮೇಲೆ ವಿಶ್ಲೇಷಿಸಲು ಯತ್ನಿಸುತ್ತದೆ. ಇದು ಜಾಗತಿಕವಾಗಿ ಹೆಚ್ಚು ಬಳಕೆಯಲ್ಲಿದ್ದರೂ, ರೋಗಲಕ್ಷಣಗಳ ತೀವ್ರತೆಯ ಗಡಿಯನ್ನು ಸರಿಯಾಗಿ ನಿರ್ವಚಿಸದೇ ಇರುವುದು ಮತ್ತು ಇತರೆ ಮಾನಸಿಕ ತೊಡಕುಗಳನ್ನು (Comorbidity) ಸರಿಯಾಗಿ ಗುರುತಿಸದೇ ಇರುವುದರಿಂದ, ರೋಗನಿರ್ಣಯದ ಅತಿಯಾದ ಹೆಚ್ಚಳಕ್ಕೆ ಮತ್ತು ಕಳಂಕದ ಮರುಉತ್ಪತ್ತಿಗೆ ಕಾರಣವಾಗುತ್ತಿದೆ.
ಆರ್‌ಡಿಒಸಿ (RDoC – Research Domain Criteria): ಆರ್‌ಡಿಒಸಿ ಪದ್ಧತಿಯು ಆರೋಗ್ಯವಂತ ಮತ್ತು ಅನಾರೋಗ್ಯವಂತ ವ್ಯಕ್ತಿಗಳ ನಡುವಿನ ಕಟ್ಟುನಿಟ್ಟಿನ ಭೇದವನ್ನು ಸಡಿಲಗೊಳಿಸಿ, ಮಾನಸಿಕ ವೈಪರೀತ್ಯಗಳನ್ನು ಸಾಮಾನ್ಯ ವರ್ತನೆಯ ಒಂದು ಭಾಗವಾಗಿ ನೋಡಲು ಯತ್ನಿಸುತ್ತದೆ. ಇದು ರೋಗಿಗಳ ಬಗ್ಗೆ ಸಹಾನುಭೂತಿ ಮೂಡಿಸಲು ಸಹಾಯ ಮಾಡಿದರೂ, ಖಿನ್ನತೆಯಂತಹ ಸಮಸ್ಯೆಗಳಿಗೆ ಸಿಗುವ ಸಹಾನುಭೂತಿ ಸಿಜೋಫ್ರೇನಿಯಾದಂತಹ ತೀವ್ರ ಮಾನಸಿಕ ಕಾಯಿಲೆಗಳಿಗೆ ಸಿಗುತ್ತಿಲ್ಲ. ಇದು ಕಳಂಕವನ್ನು ಸಂಪೂರ್ಣವಾಗಿ ಹೋಗಲಾಡಿಸುವ ಬದಲು, ಅದರ ಸ್ವರೂಪವನ್ನು ಬದಲಾಯಿಸಿದೆ.
ಹೈಟಾಪ್ (HiTOP – Hierarchical Taxonomy of Psychopathology): ಹೈಟಾಪ್ ಪದ್ಧತಿಯು ರೋಗಲಕ್ಷಣಗಳನ್ನು ಅವುಗಳ ಗುಣಲಕ್ಷಣಗಳಿಗೆ ಅನುಗುಣವಾಗಿ ವಿಂಗಡಿಸುವ ಮೂಲಕ ಹಿಂದಿನ ಪದ್ಧತಿಗಳ ಕೊರತೆಗಳನ್ನು ನೀಗಿಸಲು ಯತ್ನಿಸುತ್ತದೆ. ವೈದ್ಯಕೀಯ ಸಿಬ್ಬಂದಿಯ ಮಟ್ಟದಲ್ಲಿ ಇದು ಅತ್ಯಂತ ಕಡಿಮೆ ಕಳಂಕ ಉಂಟುಮಾಡುವ ಪದ್ಧತಿ ಎಂದು ಪರಿಗಣಿಸಲ್ಪಟ್ಟಿದ್ದರೂ, ವಾಸ್ತವಿಕ ವೈದ್ಯಕೀಯ ಆಡಳಿತ, ವಿಮೆ ಮತ್ತು ಕಾನೂನು ವ್ಯವಸ್ಥೆಗಳಲ್ಲಿ ಇದನ್ನು ಸಂಪೂರ್ಣವಾಗಿ ಅಳವಡಿಸಿಕೊಳ್ಳಲು ಇನ್ನು ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿದೆ.
ಒಟ್ಟಿನಲ್ಲಿ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ರೋಗನಿರ್ಣಯ ಪದ್ಧತಿಗಳು ಎಷ್ಟೇ ಆಧುನಿಕಗೊಂಡರೂ, ಅವು ಸಮಾಜದಲ್ಲಿನ ಕಳಂಕವನ್ನು ಸಂಪೂರ್ಣವಾಗಿ ತೊಡೆದುಹಾಕಲು ಸಾಧ್ಯವಾಗಿಲ್ಲ. ವೈದ್ಯಕೀಯ ರೋಗನಿರ್ಣಯ ಮತ್ತು ವರ್ಗೀಕರಣ ವಿಧಾನಗಳನ್ನು ಕೇವಲ ತಾಂತ್ರಿಕವಾಗಿ ನೋಡದೆ, ಅವು ಸಮಾಜ ಮತ್ತು ರೋಗಿಯ ಮೇಲೆ ಬೀರುವ ಮಾನಸಿಕ ಹಾಗೂ ಸಾಮಾಜಿಕ ಪರಿಣಾಮಗಳನ್ನು ಪರಿಗಣಿಸಿ ಸುಧಾರಿಸಬೇಕಾದ ಅಗತ್ಯವಿದೆ.