ಒಂದು ಸಿನಿಮಾ ಸೋತರೆ ಅದರ ಬಗ್ಗೆ ಚರ್ಚೆಯಾಗುವುದು ಸಹಜ. ಆದರೆ ಅದೇ ಚಿತ್ರದ ಸೋಲನ್ನು ವೇದಿಕೆಯಲ್ಲೇ ಹಾಸ್ಯದ ವಸ್ತುವಾಗಿಸಿದರೆ? ಅದರಲ್ಲೂ ಚಿತ್ರದ ನಟಿಯೇ ಎದುರಿಗೆ ಕುಳಿತಿರುವಾಗ! ಇಂತಹದ್ದೇ ಸ್ವಾರಸ್ಯಕರ ಪ್ರಸಂಗವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಬಾಕ್ಸ್ ಆಫೀಸ್ ಸೋಲನ್ನು ಮುಂದಿಟ್ಟುಕೊಂಡು ಖ್ಯಾತ ಹಾಸ್ಯ ಕಲಾವಿದ ಸಮಯ್ ರೈನಾ, ನಟಿ ಹುಮಾ ಖುರೇಷಿ ಅವರನ್ನು ತಮಾಷೆ ಮಾಡಿದ್ದಾರೆ. ಆದರೆ, ಸಮಯ್ ಅವರ ವ್ಯಂಗ್ಯಕ್ಕೆ ಹುಮಾ ಕೂಡ ಸುಮ್ಮನಾಗಿಲ್ಲ. ವೇದಿಕೆಯಲ್ಲೇ ತಕ್ಷಣ ತಿರುಗೇಟು ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಸಿನಿಮಾ ಸೋಲಿನ ಬಗ್ಗೆ ಸಮಾಯ್ ವ್ಯಂಗ್ಯ!
ಸಮಯ್ ರೈನಾ ನಡೆಸಿಕೊಡುವ ‘ಇಂಡಿಯಾಸ್ ಗಾಟ್ ಲೇಟೆಂಟ್’ ಸೀಸನ್ 2ರ ಇತ್ತೀಚಿನ ಸಂಚಿಕೆಯಲ್ಲಿ ಹುಮಾ ಖುರೇಷಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಈ ವೇಳೆ ಮಾತಿನ ನಡುವೆ ಯಶ್ ನಟನೆಯ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್ ಅಪ್ಸ್’ ಚಿತ್ರದ ಸೋಲಿನ ವಿಚಾರ ಪ್ರಸ್ತಾಪವಾಯಿತು.
ಸಾಮಾನ್ಯವಾಗಿ ತಮ್ಮ ಕಾರ್ಯಕ್ರಮಕ್ಕೆ ಸೆಲೆಬ್ರಿಟಿಗಳು ಬಂದ ಬಳಿಕ ಅವರ ಸಿನಿಮಾಗಳು ಫ್ಲಾಪ್ ಆಗುತ್ತವೆ ಎಂದು ಸಮಯ್ ಹೇಳಿದ್ದಾರೆ. ಆದರೆ ಹುಮಾ ವಿಚಾರದಲ್ಲಿ ಮಾತ್ರ ಪರಿಸ್ಥಿತಿ ಉಲ್ಟಾ ಆಗಿದೆ ಎಂದು ಕಾಲೆಳೆದಿದ್ದಾರೆ.
“ಸಾಮಾನ್ಯವಾಗಿ ಜನರು ಇಂಡಿಯಾಸ್ ಗಾಟ್ ಲೇಟೆಂಟ್‌ಗೆ ಬರುತ್ತಾರೆ. ಆಮೇಲೆ ಅವರ ಸಿನಿಮಾಗಳು ಫ್ಲಾಪ್ ಆಗುತ್ತವೆ. ಆದರೆ ಸಿನಿಮಾ ಫ್ಲಾಪ್ ಆದ ಬಳಿಕ ಇಲ್ಲಿಗೆ ಬಂದ ಮೊದಲ ವ್ಯಕ್ತಿ ನೀವೇ” ಎಂದು ಸಮಯ್ ತಮಾಷೆ ಮಾಡಿದ್ದಾರೆ.
‘ನಿಜ ಜೀವನದಲ್ಲಿ ನೀನೇ ಟಾಕ್ಸಿಕ್!’ ಹುಮಾ ತಿರುಗೇಟು
ಸಮಯ್ ಮಾತಿಗೆ ಹುಮಾ ಖುರೇಷಿ ಕೂಡ ತಕ್ಷಣವೇ ಪಂಚ್ ನೀಡಿದ್ದಾರೆ. “ನಾನು ಟಾಕ್ಸಿಕ್ ಎಂಬ ಸಿನಿಮಾದಲ್ಲಿ ನಟಿಸಿದ್ದೇನೆ ಅಷ್ಟೇ. ಆದರೆ ನಿಜ ಜೀವನದಲ್ಲಿ ನೀನೇ ಟಾಕ್ಸಿಕ್” ಎಂದು ಉತ್ತರಿಸಿದ್ದಾರೆ.
ಇದಕ್ಕೆ ಸಮಯ್, “ಕನಿಷ್ಠ ನನ್ನನ್ನು ನೋಡುವವರಾದರೂ ಇದ್ದಾರೆ” ಎಂದು ಮತ್ತೊಂದು ಹಾಸ್ಯದ ಬಾಣ ಬಿಟ್ಟಿದ್ದಾರೆ. ಇಬ್ಬರ ನಡುವಿನ ಈ ಸಂಭಾಷಣೆ ಕಾರ್ಯಕ್ರಮದಲ್ಲಿ ನಗೆಯ ಅಲೆ ಎಬ್ಬಿಸಿದೆ.
ಇಷ್ಟಕ್ಕೇ ಮುಗಿಯದ ಮಾತಿನ ಚಕಮಕಿ ಮುಂದುವರಿದಿದೆ. ಈಗಿನ ಕಾಲದಲ್ಲಿ ಕೆಲವರು ಸಿನಿಮಾಗಳನ್ನು ಇಷ್ಟಪಡದಿದ್ದರೂ ಅವುಗಳನ್ನು ಟೀಕಿಸುವುದಕ್ಕಾಗಿ ನೋಡುತ್ತಾರೆ. ಇದನ್ನೇ ‘ಹೇಟ್ ವಾಚಿಂಗ್’ ಎಂದು ಕರೆಯಲಾಗುತ್ತದೆ ಎಂದು ಹುಮಾ ಹೇಳಿದ್ದಾರೆ. ಅದಕ್ಕೆ ಸಮಾಯ್, ಜನರು ‘ಟಾಕ್ಸಿಕ್’ ಸಿನಿಮಾವನ್ನೂ ಇದೇ ಕಾರಣಕ್ಕೆ ನೋಡಬಹುದು ಎಂದು ತಿರುಗೇಟು ನೀಡಿದ್ದಾರೆ.
ಯಶ್ ಸಿನಿಮಾದಲ್ಲಿ ಹುಮಾ ಖುರೇಷಿ ಪಾತ್ರವೇನು?
ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್, ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಚಿತ್ರದಲ್ಲಿ ಹುಮಾ ಎಲಿಜಬೆತ್ ಎಂಬ ನಕಾರಾತ್ಮಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಭರ್ಜರಿ ಓಪನಿಂಗ್, ಆಮೇಲೆ ನಿರಾಸೆ!
ಚಿತ್ರದ ಬಗ್ಗೆ ಆರಂಭದಿಂದಲೂ ಭಾರಿ ನಿರೀಕ್ಷೆಗಳಿದ್ದವು. ಮೊದಲ ದಿನವೇ ಸುಮಾರು ₹100 ಕೋಟಿ ಗಳಿಕೆಯೊಂದಿಗೆ ಭರ್ಜರಿ ಆರಂಭ ಪಡೆದಿದ್ದರೂ, ನಂತರದ ದಿನಗಳಲ್ಲಿ ಪ್ರೇಕ್ಷಕರಿಂದ ವ್ಯಕ್ತವಾದ ನಕಾರಾತ್ಮಕ ಪ್ರತಿಕ್ರಿಯೆ ಮತ್ತು ವಿಮರ್ಶೆಗಳು ಚಿತ್ರದ ಗಳಿಕೆಗೆ ಹೊಡೆತ ನೀಡಿದವು.
ಮೂಲ ವರದಿಯ ಪ್ರಕಾರ, ಚಿತ್ರ ತನ್ನ ಸಂಪೂರ್ಣ ಚಿತ್ರಮಂದಿರದ ಪ್ರದರ್ಶನದಲ್ಲಿ ₹300 ಕೋಟಿ ದಾಟಲಷ್ಟೇ ಸಾಧ್ಯವಾಯಿತು. ಇದೀಗ ಸಿನಿಮಾದ ಸೋಲಿನ ವಿಚಾರವಾಗಿ ಹುಮಾ ಮತ್ತು ಸಮಾಯ್ ನಡುವಿನ ಈ ತಮಾಷೆಯ ಸಂಭಾಷಣೆ ಗಮನ ಸೆಳೆಯುತ್ತಿದೆ.