ನವದೆಹಲಿ- ಪಾಕಿಸ್ತಾನಿ ನಟರಾದ ಫವಾದ್ ಖಾನ್ ಮತ್ತು ಮಹಿರಾ ಖಾನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ನೆಟ್‌ಫ್ಲಿಕ್ಸ್‌ನ ಮುಂಬರುವ ವೆಬ್ ಸರಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡದಂತೆ ನಿಷೇಧಿಸಬೇಕೆಂದು ಅಖಿಲ ಭಾರತ ಚಲನಚಿತ್ರ ಕಾರ್ಮಿಕರ ಸಂಘ (AICWA) ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದೆ.
ಡಿಸೆಂಬರ್ 4ರಂದು ಪ್ರಥಮ ಪ್ರದರ್ಶನಕ್ಕೆ ಸಿದ್ಧವಾಗಿರುವ ಪಾಕಿಸ್ತಾನದ ವೆಬ್ ಸರಣಿ ‘ಜೋ ಬಚಾಯ್ ಹೈ ಸಂಗ್ ಸಮೈತ್ ಲೋ’ (Jo Bachay Hain Sang Samait Lo) ಭಾರತದಲ್ಲಿ ಪ್ರಸಾರವಾಗದಂತೆ ತಡೆಯಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು ಎಂದು ಸಂಘಟನೆ ನವೆಂಬರ್ 24ರಂದು ಪ್ರಧಾನಿಗೆ ಪತ್ರ ಬರೆದಿದೆ.
ಮಾಹಿತಿ ಮತ್ತು ಪ್ರಸಾರ ಸಚಿವಾಲಯವು 2025ರ ಮೇ 8ರಂದು ಹೊರಡಿಸಿದ್ದ ಸಲಹೆಯನ್ನು ಉಲ್ಲೇಖಿಸಿರುವ AICWA, ಪಾಕಿಸ್ತಾನ ಮೂಲದ ಚಲನಚಿತ್ರಗಳು, ಸರಣಿಗಳು ಸೇರಿದಂತೆ ಯಾವುದೇ ರೀತಿಯ ಡಿಜಿಟಲ್ ವಿಷಯಗಳನ್ನು ಭಾರತೀಯ OTT ವೇದಿಕೆಗಳಲ್ಲಿ ಪ್ರಸಾರ ಮಾಡದಂತೆ ಸೂಚಿಸಿರುವ ಸರ್ಕಾರದ ನಿರ್ದೇಶನವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಕೇಂದ್ರ ಸರ್ಕಾರ ಈ ಸಲಹೆ ಹೊರಡಿಸಿತ್ತು. ದೇಶದ ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಪಾಕಿಸ್ತಾನಿ ವಿಷಯಗಳನ್ನು ಪ್ರಸಾರ ಮಾಡುವುದನ್ನು ತಡೆಯುವಂತೆ OTT ವೇದಿಕೆಗಳು ಹಾಗೂ ಡಿಜಿಟಲ್ ಮಧ್ಯವರ್ತಿಗಳಿಗೆ ಸೂಚಿಸಲಾಗಿತ್ತು.
ಶಾಶ್ವತ ಕಾನೂನು ಜಾರಿಗೆ ಒತ್ತಾಯ
ಭಾರತದಲ್ಲಿ ಪಾಕಿಸ್ತಾನಿ ಮೂಲದ ಸರಣಿಗಳು, ಸಿನಿಮಾಗಳು, ಹಾಡುಗಳು ಮತ್ತು ಪಾಡ್‌ಕಾಸ್ಟ್‌ಗಳಿಗೆ ಅವಕಾಶ ನೀಡಬಾರದು ಎಂದು AICWA ತನ್ನ ಪತ್ರದಲ್ಲಿ ಪ್ರತಿಪಾದಿಸಿದೆ. ಅಲ್ಲದೆ, ಈ ಸಂಬಂಧ ಕೇವಲ ಸಲಹೆಗಳಿಗೆ ಸೀಮಿತವಾಗದೆ, ಉಲ್ಲಂಘನೆ ಮಾಡುವ OTT ವೇದಿಕೆಗಳು, ದೂರದರ್ಶನ ವಾಹಿನಿಗಳು ಮತ್ತು ಚಿತ್ರಮಂದಿರಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅವಕಾಶವಿರುವ ಶಾಶ್ವತ ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿದೆ.
ನೆಟ್‌ಫ್ಲಿಕ್ಸ್ ಇಂಡಿಯಾ ಸೇರಿದಂತೆ ಎಲ್ಲ OTT ವೇದಿಕೆಗಳು ಸರ್ಕಾರದ ನಿರ್ದೇಶನಗಳನ್ನು ಪಾಲಿಸಬೇಕು. ಭವಿಷ್ಯದಲ್ಲಿಯೂ ಯಾವುದೇ ಪಾಕಿಸ್ತಾನಿ ನಿರ್ಮಾಣಗಳು ಭಾರತೀಯ ಪ್ರೇಕ್ಷಕರಿಗೆ ಲಭ್ಯವಾಗದಂತೆ ಕಾನೂನುಬದ್ಧ ವ್ಯವಸ್ಥೆ ರೂಪಿಸಬೇಕು ಎಂಬುದು ಸಂಘಟನೆಯ ಪ್ರಮುಖ ಬೇಡಿಕೆಯಾಗಿದೆ.
ಏನಿದು ವೆಬ್ ಸರಣಿ?
ಫರ್ಹತ್ ಇಶ್ತಿಯಾಕ್ ಅವರ ಜನಪ್ರಿಯ ಉರ್ದು ಕಾದಂಬರಿಯನ್ನು ಆಧರಿಸಿ ಈ ವೆಬ್ ಸರಣಿ ನಿರ್ಮಿಸಲಾಗಿದೆ. ಮೂರು ತಲೆಮಾರುಗಳಿಗೆ ಸೇರಿದ ಆರು ಪ್ರೇಮಕಥೆಗಳನ್ನು ಒಳಗೊಂಡಿರುವ ಈ ಕೌಟುಂಬಿಕ ನಾಟಕವನ್ನು ಪಾಕಿಸ್ತಾನ, ಇಟಲಿ ಮತ್ತು ಬ್ರಿಟನ್‌ನಲ್ಲಿ ಚಿತ್ರೀಕರಿಸಲಾಗಿದೆ.
ಮೊಮಿನಾ ದುರೈದ್ ಫಿಲ್ಮ್ಸ್ ನಿರ್ಮಿಸಿರುವ ಈ ಸರಣಿಯಲ್ಲಿ ಫವಾದ್ ಖಾನ್, ಮಹಿರಾ ಖಾನ್, ಅಹದ್ ರಝಾ ಮಿರ್, ಹಮ್ಜಾ ಅಲಿ ಅಬ್ಬಾಸಿ ಮತ್ತು ಹನಿಯಾ ಅಮೀರ್ ಸೇರಿದಂತೆ ಹಲವು ಪ್ರಮುಖ ಪಾಕಿಸ್ತಾನಿ ಕಲಾವಿದರು ನಟಿಸಿದ್ದಾರೆ.
ನೆಟ್‌ಫ್ಲಿಕ್ಸ್‌ನ ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ವಿಭಾಗದ ಮೂಲಕ ಈ ಸರಣಿಯನ್ನು ನಿರ್ಮಿಸಲಾಗಿದ್ದು, ಡಿಸೆಂಬರ್ 4ರಂದು ಬಿಡುಗಡೆಯಾಗಲು ಸಿದ್ಧವಾಗಿದೆ. ಆದರೆ ಭಾರತದಲ್ಲಿನ ಪ್ರೇಕ್ಷಕರಿಗೆ ಈ ಸರಣಿ ಲಭ್ಯವಾಗಲಿದೆಯೇ ಎಂಬುದನ್ನು ನೆಟ್‌ಫ್ಲಿಕ್ಸ್ ಇನ್ನೂ ಅಧಿಕೃತವಾಗಿ ಸ್ಪಷ್ಟಪಡಿಸಿಲ್ಲ.
ಈ ಹಿನ್ನೆಲೆಯಲ್ಲಿ AICWA ಪ್ರಧಾನಿಗೆ ಬರೆದಿರುವ ಪತ್ರ ಮತ್ತು ಸರಣಿಯ ಭಾರತದಲ್ಲಿನ ಪ್ರಸಾರದ ಕುರಿತ ವಿವಾದ ಈಗ ಚರ್ಚೆಗೆ ಗ್ರಾಸವಾಗಿದೆ. ಸರ್ಕಾರ ಈ ಮನವಿಗೆ ಯಾವ ರೀತಿಯ ಪ್ರತಿಕ್ರಿಯೆ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.