ಬೆಂಗಳೂರು: ಇಂದಿಗೂ ಅನೇಕ ಮಂದಿ ಶೇರು ಮಾರುಕಟ್ಟೆ (Stock market) ಅಂದರೆ ಸಾಕು ಭಾರಿ ಭಯಪಡುತ್ತಾರೆ. ಹೂಡಿಕೆ ಮಾಡಿದ ಹಣ ಎಲ್ಲಿ ಮುಳುಗಿ ಹೋಗುತ್ತದೋ ಎಂಬ ಆತಂಕ ಅವರಲ್ಲಿ ಮನೆಮಾಡಿರುತ್ತದೆ. ಅಂತವರಿಗಾಗಿ ಅಂಚೆ ಕಚೇರಿ ಉಳಿತಾಯ ಯೋಜನೆಗಳು (Post office savings schemes) ಅತ್ಯುತ್ತಮ ಆಯ್ಕೆಯಾಗಿವೆ. ಇಲ್ಲಿ ಸಂಪೂರ್ಣ ಸರ್ಕಾರಿ ಖಾತರಿ (Government guarantee) ಇರುವುದರಿಂದ ಹಣ ಕಳೆದುಕೊಳ್ಳುವ ರಿಸ್ಕ್ ತೀರಾ ಕಡಿಮೆ. ಸುರಕ್ಷಿತ ಹೂಡಿಕೆ (Safe investment) ಮತ್ತು ಪ್ರತಿ ತಿಂಗಳು ಸ್ಥಿರ ಆದಾಯ (Fixed income) ಬಯಸುವ ಮಧ್ಯಮ ವರ್ಗದ ಜನರಿಗೆ ಇವು ಮಿನಿ ಗೋಲ್ಡ್‌ಮೈನ್ ಇದ್ದ ಹಾಗೆ.
ಪೋಸ್ಟ್ ಆಫೀಸ್‌ನ ಯಾವ ಯೋಜನೆಯಲ್ಲಿ ₹15 ಲಕ್ಷ ಹೂಡಿಕೆ ಮಾಡಿದರೆ 5 ವರ್ಷಗಳ ನಂತರ ಎಷ್ಟು ಲಾಭ ಸಿಗುತ್ತೆ? ತಿಂಗಳ ಖರ್ಚಿಗೆ ಎಷ್ಟು ಹಣ ನಿಮ್ಮ ಕೈ ಸೇರುತ್ತೆ?
ಎಂಐಎಸ್ (MIS): ತಿಂಗಳ ಖರ್ಚಿಗೆ ಭರವಸೆಯ ಯೋಜನೆ
ಪ್ರತಿ ತಿಂಗಳು ಮನೆಯ ಖರ್ಚಿಗೆ ಸ್ಥಿರವಾದ ಆದಾಯ ಬೇಕು ಎನ್ನುವವರಿಗೆ ಮಾಸಿಕ ಆದಾಯ ಯೋಜನೆ (MIS) ಸೂಪರ್ ಆಯ್ಕೆಯಾಗಿದೆ.
ಬಡ್ಡಿ ದರ: ವಾರ್ಷಿಕ ಶೇ. 7.4 ರಷ್ಟು ಬಡ್ಡಿ ಸಿಗುತ್ತದೆ.
₹15 ಲಕ್ಷಕ್ಕೆ ಸಿಗೋ ಲಾಭ: ಈ ಪ್ಲಾನ್‌ನಲ್ಲಿ ₹15 ಲಕ್ಷ ಹೂಡಿಕೆ ಮಾಡಿದರೆ, ವರ್ಷಕ್ಕೆ ₹1.11 ಲಕ್ಷ ಬಡ್ಡಿ ಸಿಗಲಿದ್ದು, ಅಂದರೆ ಪ್ರತಿ ತಿಂಗಳಿಗೆ ಸುಮಾರು ₹9,250 ರೂಪಾಯಿ ನಿಮ್ಮ ಕೈ ಸೇರುತ್ತದೆ.
ಮೆಚ್ಯೂರಿಟಿ: 5 ವರ್ಷಗಳ ನಂತರ ನಿಮ್ಮ ಅಸಲು ಹಣವನ್ನು ಯಾವುದೇ ಕಡಿತವಿಲ್ಲದೆ ಮರಳಿ ಪಡೆಯಬಹುದು.
ಹಿರಿಯ ನಾಗರಿಕರಿಗೆ ಬಂಪರ್ ಬಡ್ಡಿ (SCSS)
60 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಪೋಸ್ಟ್ ಆಫೀಸ್‌ನ ಈ ಯೋಜನೆ ಒಂದು ವರದಾನವೇ ಸರಿ.
ಬಡ್ಡಿ ದರ: ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) ಪ್ರಸ್ತುತ ಶೇ. 8.2 ರಷ್ಟು ಭರ್ಜರಿ ಬಡ್ಡಿ ನೀಡುತ್ತಿದೆ.
₹15 ಲಕ್ಷಕ್ಕೆ ಸಿಗೋ ಲಾಭ: ಇದರಲ್ಲಿ ₹15 ಲಕ್ಷ ಹೂಡಿಕೆ ಮಾಡಿದರೆ ವರ್ಷಕ್ಕೆ ₹1.23 ಲಕ್ಷ ರೂ. ಬಡ್ಡಿ ಸಿಗುತ್ತದೆ. ಅಂದರೆ ಪ್ರತಿ ತಿಂಗಳು ಸರಾಸರಿ ₹10,250 ರೂಪಾಯಿಗೂ ಹೆಚ್ಚು ಆದಾಯ ನಿಮ್ಮದಾಗುತ್ತದೆ.
ವಿಶೇಷತೆ: ಪ್ರತಿ ಮೂರು ತಿಂಗಳಿಗೊಮ್ಮೆ ಈ ಬಡ್ಡಿ ಹಣ ನಿಮ್ಮ ಬ್ಯಾಂಕ್ ಖಾತೆಗೆ ಆಟೋಮ್ಯಾಟಿಕ್ ಆಗಿ ಜಮೆಯಾಗುತ್ತದೆ.
ಕಿಸಾನ್ ವಿಕಾಸ್ ಪತ್ರ (KVP): ಹೂಡಿಕೆ ಡಬಲ್ ಮಾಡೋ ಸೂತ್ರ
ಹೂಡಿಕೆ ಮಾಡಿದ ಹಣ ಯಾವುದೇ ರಿಸ್ಕ್ ಇಲ್ಲದೆ ದುಪ್ಪಟ್ಟು (Double) ಆಗಬೇಕು ಎಂದುಕೊಳ್ಳುವವರಿಗೆ ಕಿಸಾನ್ ವಿಕಾಸ್ ಪತ್ರ (KVP) ಹೇಳಿ ಮಾಡಿಸಿದ ಯೋಜನೆ.
ಬಡ್ಡಿ ದರ: ಇಲ್ಲಿ ಶೇ. 7.5 ರಷ್ಟು ಬಡ್ಡಿ ಸಿಗುತ್ತಿದೆ.
ಹಣ ಯಾವಾಗ ಡಬಲ್?: ನಿಮ್ಮ ₹15 ಲಕ್ಷದ ಹೂಡಿಕೆಯು ಸುಮಾರು 115 ತಿಂಗಳಲ್ಲಿ, ಅಂದರೆ 9 ವರ್ಷ 7 ತಿಂಗಳಲ್ಲಿ ಬರೋಬ್ಬರಿ ₹30 ಲಕ್ಷ ರೂಪಾಯಿಗಳಾಗಿ (ಡಬಲ್) ನಿಮಗೆ ಮರಳುತ್ತದೆ. ದೀರ್ಘಾವಧಿಯಲ್ಲಿ ಹಣ ಸುರಕ್ಷಿತವಾಗಿ ಬೆಳೆಯಲು ಇದು ಬೆಸ್ಟ್ ದಾರಿ.
ಪಿಪಿಎಫ್ ಮತ್ತು ಎನ್.ಎಸ್.ಸಿ
ಪಿಪಿಎಫ್ (PPF): ದೀರ್ಘಾವಧಿಯ ಸುರಕ್ಷಿತ ಉಳಿತಾಯಕ್ಕೆ ಹೆಸರುವಾಸಿಯಾಗಿರುವ ಸಾರ್ವಜನಿಕ ಭವಿಷ್ಯ ನಿಧಿ (PPF) ಯೋಜನೆಯಲ್ಲಿ ವರ್ಷಕ್ಕೆ ಶೇ. 7.1 ರಷ್ಟು ಬಡ್ಡಿ ಸಿಗುತ್ತದೆ.
ಎನ್.ಎಸ್.ಸಿ (NSC): ಇನ್ನು ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC) ಯೋಜನೆಯಲ್ಲಿ ಶೇ. 7.7 ರಷ್ಟು ಬಡ್ಡಿ ಸಿಗಲಿದ್ದು, ಇದು 5 ವರ್ಷದ ಅವಧಿಗೆ ಉತ್ತಮ ಲಾಭ ತರುತ್ತದೆ. ಇದರಲ್ಲಿ ಬಡ್ಡಿ ಹಣ ಅಸಲಿಗೆ ಸೇರ್ಪಡೆಯಾಗುತ್ತಾ ಹೋಗುವುದರಿಂದ (Compound Interest), ಅವಧಿ ಮುಗಿಯುವ ಹೊತ್ತಿಗೆ ನಿಮ್ಮ ಕೈಯಲ್ಲಿ ದೊಡ್ಡ ಮೊತ್ತದ ಹಣ ಸಂಗ್ರಹವಾಗಿರುತ್ತದೆ.
ಹೆಣ್ಣುಮಕ್ಕಳ ಭವಿಷ್ಯಕ್ಕೆ ಸುಕನ್ಯಾ ಸಮೃದ್ಧಿ ಯೋಜನೆ (SSA)
ಸಣ್ಣ ಪ್ರಮಾಣದಲ್ಲಿ ತಿಂಗಳು ತಿಂಗಳು ಹೂಡಿಕೆ ಮಾಡಲು ಬಯಸುವವರಿಗೆ ಆರ್‌ಡಿ (RD) ಯೋಜನೆ ಉತ್ತಮವಾಗಿದೆ. ಇನ್ನು ನಿಮ್ಮ ಮನೆಯ ಹೆಣ್ಣುಮಕ್ಕಳ ಉನ್ನತ ಶಿಕ್ಷಣ ಮತ್ತು ಮದುವೆಯ ನಿಧಿಗಾಗಿ ಸುಕನ್ಯಾ ಸಮೃದ್ಧಿ ಯೋಜನೆ (SSA) ಅಂಚೆ ಕಚೇರಿಯಲ್ಲಿಯೇ ಅತಿ ಹೆಚ್ಚಿನ ಅಂದರೆ ಶೇ. 8.2 ರಷ್ಟು ಬಡ್ಡಿಯನ್ನು ನೀಡುತ್ತಿದೆ. ದೀರ್ಘಕಾಲದಲ್ಲಿ ಹೆಣ್ಣುಮಕ್ಕಳಿಗಾಗಿ ಕೋಟ್ಯಂತರ ರೂಪಾಯಿಗಳ ದೊಡ್ಡ ಮೊತ್ತದ ಫಂಡ್ ಕಟ್ಟಲು ಇದಕ್ಕಿಂತ ಬೆಸ್ಟ್ ಸ್ಕೀಮ್ ಮತ್ಯಾವುದೂ ಇಲ್ಲ.