ಚಿಕ್ಕಮಗಳೂರು: ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ (PSI) ಎಂದು ಸುಳ್ಳು ಹೇಳಿ, ಖಾಕಿ ವೇಷಧರಿಸಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಹಣ ಹಾಗೂ ಬಂಗಾರ ಪಡೆದು ವಂಚಿಸುತ್ತಿದ್ದ ಖತರ್ನಾಕ್ ಮಹಿಳೆ ನಿವೇದಿತಾ ಗೌಡ ಎಂಬಾಕೆಯನ್ನು ಚಿಕ್ಕಮಗಳೂರು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಶಾರ್ಟ್ ಕಟ್ ಹೇರ್ ಕಟಿಂಗ್ ಹಾಗೂ ಪೊಲೀಸ್ ಸಮವಸ್ತ್ರದ ಮಾದರಿಯ ಉಡುಪು ಧರಿಸಿ ಗಾಂಭೀರ್ಯ ಪ್ರದರ್ಶಿಸುತ್ತಿದ್ದ ಈಕೆ, ತಾನು ಬೆಂಗಳೂರಿನ ರಾಜಗೋಪಾಲನಗರ ಠಾಣೆಯ ಪಿಎಸ್ಐ ಎಂದು ಜನರನ್ನು ನಂಬಿಸುತ್ತಿದ್ದಳು. ಕೆಫೆಗಳಿಗೆ ಬರುವ ಶ್ರೀಮಂತ ಮಹಿಳೆಯರು ಹಾಗೂ ಯುವಕರನ್ನೇ ಟಾರ್ಗೆಟ್ ಮಾಡುತ್ತಿದ್ದ ನಿವೇದಿತಾ, ತಾನು ಡ್ಯೂಟಿಗೆ ರಜೆ ಹಾಕಿ ಬಂದಿರುವುದಾಗಿ ಹೇಳಿ ಪರಿಚಯ ಮಾಡಿಕೊಂಡು ಬಲೆಗೆ ಬೀಳಿಸುತ್ತಿದ್ದಳು.
ಇದುವರೆಗೆ ಸುಮಾರು 25ಕ್ಕೂ ಹೆಚ್ಚು ಜನರಿಗೆ ಕೋಟ್ಯಂತರ ರೂಪಾಯಿ ಹಣ ಹಾಗೂ ಚಿನ್ನಾಭರಣ ವಂಚಿಸಿರುವುದು ಬೆಳಕಿಗೆ ಬಂದಿದ್ದು, ಸಂತ್ರಸ್ತರು ನೀಡಿದ ದೂರಿನನ್ವಯ ಚಿಕ್ಕಮಗಳೂರು ನಗರ ಹಾಗೂ ಬಸವನಹಳ್ಳಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಕೇವಲ ಚಿಕ್ಕಮಗಳೂರು ಮಾತ್ರವಲ್ಲದೆ ರಾಜ್ಯದ ಹಲವು ಜಿಲ್ಲೆಗಳಲ್ಲಿಯೂ ಈಕೆ ಇದೇ ರೀತಿ ಪಿಎಸ್ಐ ಎಂದು ವಂಚನೆ ಎಸಗಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಬಂಧಿತಳ ಮೊಬೈಲ್ ಪರಿಶೀಲಿಸಿದಾಗ ಬೇರೆ ಬೇರೆ ಹೆಸರುಗಳಿರುವ ನಕಲಿ ಆಧಾರ್ ಕಾರ್ಡ್‌ಗಳು ಪತ್ತೆಯಾಗಿದ್ದು, ಪೊಲೀಸರೇ ಅಚ್ಚರಿಗೊಂಡಿದ್ದಾರೆ.
ಇನ್ನು ವಂಚನೆಯಿಂದ ಸಂಪಾದಿಸಿದ ಹಣ ಹಾಗೂ ಚಿನ್ನಾಭರಣಗಳನ್ನು ನಿವೇದಿತಾ ತನ್ನ ಪ್ರಿಯಕರನಿಗೆ ನೀಡುತ್ತಿದ್ದಳು ಎಂಬ ಆಘಾತಕಾರಿ ವಿಷಯ ಹೊರಬಿದ್ದಿದೆ. ಆಕೆಯ ಪ್ರಿಯಕರ, ಚಿಕ್ಕಮಗಳೂರು ನಿವಾಸಿ ದೇವು ಎಂಬಾತ ಪ್ರಸ್ತುತ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ನಕಲಿ ಪಿಎಸ್ಐ ನಿವೇದಿತಾ ಗೌಡ ಬಂಧನದಿಂದಾಗಿ ಆಕೆಯ ಜಾಲದಲ್ಲಿದ್ದ ಇನ್ನಷ್ಟು ಅಕ್ರಮಗಳು ಹಾಗೂ ವಂಚನೆಗೊಳಗಾದವರ ಮಾಹಿತಿಗಳು ಹೊರಬೀಳುವ ಸಾಧ್ಯತೆಯಿದೆ.