ಬೆಂಗಳೂರು: ನಗರದ ಬನ್ನೇರುಘಟ್ಟ ರಸ್ತೆಯ ವಿವರ್ಸ್ ಕಾಲೋನಿಯಲ್ಲಿರುವ ನ್ಯೂ ಬ್ಲಾಸಮ್ ಖಾಸಗಿ ಶಾಲೆಯಲ್ಲಿ 12 ವರ್ಷದ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮೃತ ವಿದ್ಯಾರ್ಥಿಯನ್ನು ಅರ್ಹಾನ್ ಪಾಷಾ (12) ಎಂದು ಗುರುತಿಸಲಾಗಿದೆ.
ಮಾಹಿತಿಯ ಪ್ರಕಾರ, ಶಾಲೆಯ ತರಗತಿ ಕೊಠಡಿಯೊಳಗೆ ಇದ್ದ ವೇಳೆ ಅರ್ಹಾನ್ ಪಾಷಾ ಏಕಾಏಕಿ ಕುಸಿದು ಬಿದ್ದಿದ್ದಾನೆ. ಆದರೆ, ವಿದ್ಯಾರ್ಥಿ ಕುಸಿದು ಬಿದ್ದ ತಕ್ಷಣ ಆಸ್ಪತ್ರೆಗೆ ಕರೆದೊಯ್ಯದೆ ಶಾಲಾ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ವಿದ್ಯಾರ್ಥಿ ಕುಸಿದು ಬಿದ್ದ ಬಳಿಕ ಸುಮಾರು 45 ನಿಮಿಷಗಳ ಕಾಲ ಆತನನ್ನು ಶಾಲೆಯ ಕೊಠಡಿಯಲ್ಲೇ ಇರಿಸಲಾಗಿತ್ತು ಎಂದು ಕುಟುಂಬಸ್ಥರು ಆರೋಪಿಸಿದ್ದು, ಬಳಿಕ ಆಸ್ಪತ್ರೆಗೆ ಕರೆದೊಯ್ದರೂ ಅಷ್ಟರಲ್ಲಾಗಲೇ ಬಾಲಕ ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಇನ್ನೂ ಆತಂಕಕಾರಿ ಸಂಗತಿಯೆಂದರೆ, ಅರ್ಹಾನ್ ಕುಸಿದು ಬೀಳುತ್ತಿರುವ ದೃಶ್ಯ ಶಾಲೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೊ ಈಗ ತನಿಖೆಗೆ ಪ್ರಮುಖ ಸಾಕ್ಷಿಯಾಗುವ ಸಾಧ್ಯತೆ ಇದೆ. ಘಟನೆಯ ನಂತರ ಪೋಷಕರು ಹಾಗೂ ಸಾರ್ವಜನಿಕರು ಶಾಲೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಶಾಲಾ ಆಡಳಿತದ ನಿರ್ಲಕ್ಷ್ಯದಿಂದಲೇ ಬಾಲಕನ ಜೀವ ಹೋಗಿದೆ ಎಂದು ಆರೋಪಿಸಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದು, ಸಿಸಿಟಿವಿ ದೃಶ್ಯಾವಳಿ ಹಾಗೂ ವೈದ್ಯಕೀಯ ವರದಿಯನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ.