ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ರಾತ್ರಿ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತವೊಂದು ಸೋಷಿಯಲ್ ಮೀಡಿಯಾದಲ್ಲಿ ಹಾಗೂ ನಾಗರಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ತಾವು ಯಾವುದೇ ತಪ್ಪು ಮಾಡದಿದ್ದರೂ, ನಿಯಮಬದ್ಧವಾಗಿ ಚಲಿಸುತ್ತಿದ್ದ ಕಾರಿಗೆ ರಾಂಗ್ ರೂಟ್‌ನಲ್ಲಿ ಬಂದ ಎಸ್‌ಯುವಿ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಕುಟುಂಬವೊಂದು ಸಂಕಷ್ಟಕ್ಕೆ ಸಿಲುಕಿದೆ.
ಅಕ್ಟೋಬರ್ 14 ರಂದು ರಾತ್ರಿ ಒಂಬತ್ತು ಗಂಟೆಯ ಸುಮಾರಿಗೆ ಮಹಿಳೆಯೊಬ್ಬರು ತಮ್ಮ ಪತಿ ಮತ್ತು 67 ವರ್ಷ ವಯಸ್ಸಿನ ಅತ್ತೆಯೊಂದಿಗೆ ತಮ್ಮ ಕಿಯಾ ಸೋನೆಟ್ (Kia Sonet) ಕಾರಿನಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಕೇವಲ 15 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದ ವೇಳೆ, ಏಕಾಏಕಿ ಎದುರಿನಿಂದ ತಪ್ಪಾದ ದಿಕ್ಕಿನಲ್ಲಿ (Wrong side) ಬಂದ ಕಪ್ಪು ಬಣ್ಣದ ಮಹೀಂದ್ರಾ ಸ್ಕಾರ್ಪಿಯೋ ಕಾರು ಇವರ ವಾಹನಕ್ಕೆ ಮುಖಾಮುಖಿ ಡಿಕ್ಕಿ ಹೊಡೆದಿದೆ.
ಅಪಘಾತದ ಭೀಕರತೆ ಮತ್ತು ದೌರ್ಜನ್ಯ: ಡಿಕ್ಕಿಯ ಭರಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ವಾಹನ ಚಲಾಯಿಸಲು ಅಸಾಧ್ಯವಾದ ಸ್ಥಿತಿಯಲ್ಲಿದೆ. ಈ ಅಪಘಾತದಲ್ಲಿ ಮಹಿಳೆಗೆ ಕೈ, ತುಟಿ, ಕಿವಿ ಹಾಗೂ ಎದೆಗೆ ಪೆಟ್ಟಾಗಿದ್ದರೆ, ಅವರ ಪತಿಗೆ ಮೂಗಿನ ಮೇಲೆ ತೀವ್ರ ಪೆಟ್ಟಾಗಿ ರಕ್ತಸ್ರಾವವಾಗಿದೆ. ಇನ್ನು ಇತ್ತೀಚೆಷ್ಟೇ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರ ವೃದ್ಧ ಅತ್ತೆಗೂ ಗಂಭೀರ ಪೆಟ್ಟಾಗಿ ನೋವು ಹಾಗೂ ಊತ ಕಾಣಿಸಿಕೊಂಡಿದೆ.
ಆದರೆ ಡಿಕ್ಕಿಯ ನಂತರ ನಡೆದ ಘಟನೆ ಇನ್ನಷ್ಟು ಆಘಾತಕಾರಿಯಾಗಿದೆ. ಆರೋಪಿ ಚಾಲಕ ಚಂದ್ರಶೇಖರ್ ಅಗರ್ವಾಲ್ ಸ್ಥಳದಲ್ಲೇ ಬೈದಾಡಿ, ಹಲ್ಲೆ ನಡೆಸಿ, ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಅಲ್ಲದೆ ಮಹಿಳೆಯ ಬಟ್ಟೆ ಎಳೆದು ದೌರ್ಜನ್ಯ ಎಸಗಿ, ತಮಗೆ ಪೊಲೀಸರ ಭಯವಿಲ್ಲ ಎಂದು ಧಮ್ಕಿ ಹಾಕಿದ್ದಾನೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಡ್ಯಾಶ್‌ಕ್ಯಾಮ್‌ನ ಪ್ರಾಮುಖ್ಯತೆ: ಈ ಸಂಪೂರ್ಣ ಘಟನೆಯು ಕಾರಿನಲ್ಲಿದ್ದ ಡ್ಯಾಶ್‌ಕ್ಯಾಮ್ (Dashcam) ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅಪಘಾತದ ನೈಜ ಸ್ವರೂಪವನ್ನು ಹೊರಹಾಕಲು ಪ್ರಮುಖ ಸಾಕ್ಷಿಯಾಗಿದೆ. ಭಾರತೀಯ ರಸ್ತೆಗಳಲ್ಲಿ ಚಾಲನೆ ಮಾಡುವುದು ದಿನದಿಂದ ದಿನಕ್ಕೆ ಎಷ್ಟು ಅಪಾಯಕಾರಿಯಾಗುತ್ತಿದೆ ಎಂಬುದಕ್ಕೆ ಈ ಘಟನೆ ಕನ್ನಡಿ ಹಿಡಿದಿದ್ದು, ಇಂದಿನ ಕಾಲದಲ್ಲಿ ವಾಹನಗಳಲ್ಲಿ ಡ್ಯಾಶ್‌ಕ್ಯಾಮ್ ಅಳವಡಿಸುವುದು ಯಾವುದೇ ಐಷಾರಾಮಿ ಸಂಗತಿಯಲ್ಲ, ಬದಲಿಗೆ ಅನಿವಾರ್ಯ ಸುರಕ್ಷತಾ ಸಾಧನ ಎಂಬ ಸಂದೇಶವನ್ನು ಈ ಕಥೆ ಸಾರಿದೆ.