ಗದಗ: ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಎಲ್ಲಾ ವರ್ಗದ, ವಯಸ್ಸಿನ ಹಾಗೂ ನಗರ ಮತ್ತು ಗ್ರಾಮೀಣ ಭಾಗದ ಜನರಿಂದ ಬಿಜೆಪಿ ಅಭ್ಯರ್ಥಿ ಎಸ್. ವಿ. ಸಂಕನೂರು ಅವರಿಗೆ ಅಭೂತಪೂರ್ವ ಮತ್ತು ಒಮ್ಮತದ ಬೆಂಬಲ ಸಿಗುತ್ತಿದೆ. ಅತ್ಯಧಿಕ ಮತಗಳ ಲೀಡ್‌ನಲ್ಲಿ ಅವರು ಗೆದ್ದು ಬರುವ ಸಂಪೂರ್ಣ ವಿಶ್ವಾಸವಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಗದಗನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರವು ಹಾವೇರಿ, ಗದಗ, ಹುಬ್ಬಳ್ಳಿ, ಧಾರವಾಡ ಉತ್ತರ ಕನ್ನಡ ಸೇರಿದಂತೆ ಎಲ್ಲಡೆ ಕಳೆದ ಎರಡು ವಾರಗಳಿಂದ ನಿರಂತರವಾಗಿ ನಡೆಯುತ್ತಿದೆ. ಎಲ್ಲಾ ವರ್ಗದ, ವಯಸ್ಸಿನ ಹಾಗೂ ನಗರ ಮತ್ತು ಗ್ರಾಮೀಣ ಭಾಗದ ಜನರಿಂದ ಸಂಕನೂರು ಅವರಿಗೆ ಅಭೂತಪೂರ್ವ ಮತ್ತು ಒಮ್ಮತದ ಬೆಂಬಲ ಸಿಗುತ್ತಿದೆ ಎಂದು ಹೇಳಿದರು.
ಬಿಜೆಪಿ ಗೆಲುವಿನ ವಿಶ್ವಾಸ:
ಪಶ್ಚಿಮ ಪದವೀಧರ ಮತ್ತು ಪಶ್ಚಿಮ ಟೀಚರ್ಸ್ ಕ್ಷೇತ್ರಗಳಲ್ಲಿ 1984ರಿಂದಲೂ ಎಚ್.ಕೆ. ಪಾಟೀಲ್ ಹೊರತುಪಡಿಸಿ ಉಳಿದ ಎಲ್ಲಾ ಸಂದರ್ಭಗಳಲ್ಲೂ ಬಿಜೆಪಿ ಗೆದ್ದುಕೊಂಡು ಬಂದಿದೆ. ಈ ಬಾರಿಯೂ ಪಕ್ಷದ ಬಲ, ಕಾರ್ಯಕರ್ತರ ಸಕ್ರಿಯ ಪಾತ್ರ ಹಾಗೂ ಸಂಕನೂರು ಅವರ ವೈಯಕ್ತಿಕ ವರ್ಚಸ್ಸಿನಿಂದಾಗಿ ಅತ್ಯಧಿಕ ಮತಗಳ ಲೀಡ್‌ನಲ್ಲಿ ಅವರು ಗೆದ್ದು ಬರುವ ಸಂಪೂರ್ಣ ವಿಶ್ವಾಸವಿದೆ ಎಂದು ಬೊಮ್ಮಾಯಿ ವ್ಯಕ್ತಪಡಿಸಿದ್ದಾರೆ.
ಗದಗ ಕೌನ್ಸಿಲ್ ಸದಸ್ಯರ ಕೆಲಸ:
ಗದಗ ಜಿಲ್ಲೆಯಲ್ಲಿ ಮತ್ತು ಕೌನ್ಸಿಲ್‌ನಲ್ಲಿ ಪ್ರತಿನಿಧಿಸಿರುವ ಸ್ಥಳೀಯ ಪ್ರತಿನಿಧಿಗಳು ಅತ್ಯಂತ ಉತ್ತಮ ಕೆಲಸ ಮಾಡಿದ್ದು, ಜನರಿಗೆ ಅವರ ಬಗ್ಗೆ ಸಂಪೂರ್ಣ ಮಾಹಿತಿಯಿದೆ. ಕಾಂಗ್ರೆಎಸ್ ಅಭ್ಯರ್ಥಿ ಲಿಂಬೆಕಾಯಿ ಅವರ ಸ್ಪರ್ಧೆಯಿಂದ ಸ್ವಲ್ಪ ಪೈಪೋಟಿ ಕಂಡುಬಂದರೂ, ಸಂಕನೂರು ಅವರ ಸಂಘಟನೆ ಹಾಗೂ ಬೆಂಬಲದಿಂದಾಗಿ ಶೇಕಡಾವಾರು 90% ಕ್ಕಿಂತ ಹೆಚ್ಚು ಮತಗಳು ಲಭಿಸುವ ವಿಶ್ವಾಸವಿದೆ.
ಗೆಲುವಿನ ದಾಖಲೆ ಕಳೆದ ಮೂರು ಬಾರಿ ಬಿಜೆಪಿ ಅಭ್ಯರ್ಥಿಗಳು ಮೊದಲ ರೌಂಡ್‌ನಲ್ಲೇ ಜಯಗಳಿಸಿದ್ದು, ಈ ಬಾರಿಯೂ ದಾಖಲೆ ಪ್ರಮಾಣದ ಲೀಡ್‌ನೊಂದಿಗೆ ಸಂಕನೂರು ಗೆದ್ದುಬರಲಿದ್ದಾರೆ ಎಂದು ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗದಗ, ಹಾವೇರಿ ಹಾಗೂ ಧಾರವಾಡ ಭಾಗದಲ್ಲಿ ಕಾಂತಕುಮಾರ್ ಅವರ ಪ್ರಚಾರವು ಬಹಳ ಜೋರಾಗಿ ನಡೆಯುತ್ತಿದ್ದು, ಅವರೇ ಗೆಲುವು ಸಾಧಿಸಬಹುದು ಎಂಬ ಪರಿಸ್ಥಿತಿಯಿದೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆಯ ರಾಜಕೀಯವೇ ಬೇರೆ, ಅವರು ಯಾವ ಹಿನ್ನೆಲೆಯಿಂದ ಬಂದಿದ್ದರೂ ಸಹ ಗ್ರಾಜ್ಯುವೇಟ್ಸ್ ಅನ್ನು ಸಮರ್ಥವಾಗಿ ಪ್ರತಿನಿಧಿಸಬಲ್ಲ ವ್ಯಕ್ತಿತ್ವ ಸಂಕನೂರು ಅವರಿಗೆ ಬಿಟ್ಟರೆ ಬೇರೆಯವರಿಗೆ ಇಲ್ಲ ಎಂದು ಹೇಳಿದರು.
ಸಚಿವರ ಅವಮಾನ ಪ್ರಕರಣ:
ಮೈಸೂರಿನಲ್ಲಿ ಸಚಿವರನ್ನೇ ಒಳಗೆ ಬಿಡಲಿಲ್ಲ ಎಂಬ ಮತ್ತು ದಲಿತ ಸಚಿವರನ್ನು ಅವಮಾನಿಸಿದ್ದಾರೆ ಎಂಬ ಪ್ರಕರಣದ ಕುರಿತು ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿಗಳು ಇದಕ್ಕೆ ಸೂಕ್ತ ಸಮಂಜಸ ಉತ್ತರ ನೀಡಿಲ್ಲ. ಪ್ರೊಟೊಕಾಲ್ ನೋಡಿಕೊಳ್ಳುವ ಅಧಿಕಾರಿಗಳಿಗೆ ಸರಿಯಾದ ಸೂಚನೆ ಇಲ್ಲದೆಯೊ ಅಥವಾ ಸ್ವಪ್ರೇರಣೆಯಿಂದಲೋ ಈ ರೀತಿ ಗೊಂದಲ ಉಂಟಾಗುತ್ತದೆ. ಅದರಲ್ಲೂ ದಲಿತ ಮಂತ್ರಿ ಮೊದಲ ಬಾರಿಗೆ ಮಂತ್ರಿಯಾದವರಿಗೆ ಈ ರೀತಿ ಮುಜುಗರ ಉಂಟಾಗುವಂತೆ ಮಾಡಬಾರದು. ಇದು ತಪ್ಪು ಈ ಪ್ರಕರಣ ಕುರಿತು ಮೇಲಾಧಿಕಾರಿಗಳೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇದು ರಿಪಬ್ಲಿಕ್ ಆಫ್ ಇಂಡಿಯಾದ ದಸರಾ ಉತ್ಸವವಾಗಿದ್ದು, ಜನ ದೊಡ್ಡ ಸಂಖ್ಯೆಯಲ್ಲಿ ಬರುತ್ತಾರೆ. ಆದರೆ ಸ್ಥಳೀಯ ಆಡಳಿತ ಸಾಮಾನ್ಯ ಜನರ ರಕ್ಷಣೆಗಿಂತ ವಿಐಪಿಗಳು, ಸಿನೆಮಾ ನಟರ ಬಂದೊಬಸ್ತ್ ಗೆ ಹೆಚ್ಚಿನ ಆದ್ಯತೆ ನೀಡಿದ್ದರಿಂದ ಗೊಂದಲಗಳು ಉಂಟಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯ ಹೈಕೋರ್ಟ್ ಎಸ್ಸಿ ಮೀಸಲಾತಿ ಹೆಚ್ಚಳವನ್ನು ರದ್ದುಗೊಳಿಸಿರುವುದರ ಕುರಿತು ಕೇಳಿದ ಪ್ರಶ್ನೆಗೆ ಈ ಬಗ್ಗೆ ಸುಪ್ರೀಂ ಕೋರ್ಟ್ ಗೆ ಮೆಲ್ಮನವಿ ಸಲ್ಲಿಸುವಂತೆ ಈಗಾಗಲೇ ಹೇಳಿದ್ದೇವೆ. ರಾಜ್ಯ ಸರ್ಕಾರವೂ ಸುಪ್ರೀಂ ಕೋರ್ಟ್ ಗೆ ಹೋಗಲು ತೀರ್ಮಾನಿಸಿದೆ. ಸುಪ್ರೀಂ ಕೋರ್ಟ್ ನಲ್ಲಿ ನಮ್ಮ ಪರವಾಗಿ ತೀರ್ಪು ಬರುವಂತೆ ಮಾಡಲು ಎಲ್ಲ ರೀತಿಯ ಕಾನೂನಾತ್ಮಕ ಹೋರಾಟ ಮಾಡಲು ನಾವು ಸಿದ್ದರಾಗಿದ್ದೇವೆ. ಈ ಕುರಿತು ಸರ್ಕಾರಕ್ಕೆ ಅಗತ್ಯ ಸಲಹೆ ಸೂಚನೆಗಳನ್ನು ನೀಡುವುದಾಗಿ ತಿಳಿಸಿದರು.
ಸೊರೊಸ್ ರಾಹುಲ್ ಭೇಟಿ:
ಜಾರ್ಜ್ ಸೊರೊಸ್ ಅವರು ವಿದೇಶದಲ್ಲಿ ರಾಹುಲ್ ಗಾಂಧಿಯವರನ್ನು ಭೇಟಿಯಾಗಿದ್ದಾರೆ. ಸೊರೊಸ್ ಅವರು ನಮ್ಮ ದೇಶದ ವಿರುದ್ಧ ಹಲವು ಬಾರಿ ಹೇಳಿಕೆಗಳನ್ನು ನೀಡಿದ್ದು, ಅವರು ಎಲ್ಲೆಲ್ಲಿ ಹೋಗಿದ್ದಾರೋ ಅಲ್ಲಿ ಅವರ ಪುತ್ರನನ್ನು ಭೇಟಿಯಾಗಲು ಹಾಗೂ ಕಾಂಟ್ಯಾಕ್ಟ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬ ಸುದ್ದಿಗಳಿವೆ. ಅಮೇರಿಕಾದಲ್ಲಿ ರಾಹುಲ್ ಗಾಂಧಿಯ ರಾಯಭಾರಿ ಶ್ಯಾಮ್ ಪಿತ್ರೊಡಾ ಅವರ ಸಂಪರ್ಕದಲ್ಲಿದ್ದಾರೆ. ಸೊರೊಸ್ ಅವರು ಈ ದೇಶವನ್ನು ಅಸ್ಥಿರಗೊಳಿಸಲು ಬಯಸುತ್ತಾರೆ. ಅವರ ಹಣಬಲವು ದೇಶದ ಅಸ್ಥಿರತೆಗೆ ಬಳಕೆಯಾಗುತ್ತಿದೆ ಎಂಬುದು ಈಗಾಗಲೇ ಜನರಲ್ಲಿ ಚರ್ಚೆಯಾಗಿರುವ ನಿರ್ಧಾರವಾಗಿದೆ. ಆದರೆ, ಅವರ ಪ್ರಯತ್ನ ಯಶಸ್ವಿಯಾಗುವುದಿಲ್ಲ ಎಂದು ಹೇಳಿದರು.