ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೆ ಏನು ತಿನ್ನಬೇಕು, ಯಾವುದನ್ನು ತಿನ್ನಬಾರದು ಎಂಬ ಗೊಂದಲ ಮಧುಮೇಹಿಗಳಲ್ಲಿ ಸಾಮಾನ್ಯ. ಅನ್ನ ತಿಂದರೆ ಸಕ್ಕರೆ ಹೆಚ್ಚಾಗುತ್ತದೆಯೇ? ಮಾವಿನ ಹಣ್ಣು ತಿನ್ನಬಹುದೇ? ಆಲೂಗಡ್ಡೆ ಸಂಪೂರ್ಣ ಬಿಡಬೇಕೇ? ಎಂಬ ಪ್ರಶ್ನೆಗಳು ಹಲವರನ್ನು ಕಾಡುತ್ತವೆ. ಮಧುಮೇಹ ಪತ್ತೆಯಾದ ಬಳಿಕ ಇಷ್ಟದ ಆಹಾರಗಳನ್ನೆಲ್ಲ ಬಿಟ್ಟುಬಿಡುವವರೂ ಇದ್ದಾರೆ. ಆದರೆ ನಿಜವಾಗಿಯೂ ಮಧುಮೇಹ ನಿಯಂತ್ರಣಕ್ಕೆ ಇಷ್ಟೆಲ್ಲ ಆಹಾರ ನಿರ್ಬಂಧ ಅಗತ್ಯವಿದೆಯೇ?
ತಜ್ಞರ ಪ್ರಕಾರ, ಮಧುಮೇಹವಿದೆ ಎಂದ ಮಾತ್ರಕ್ಕೆ ಅನ್ನ, ಹಣ್ಣು ಅಥವಾ ಇಷ್ಟದ ಆಹಾರಗಳನ್ನು ಸಂಪೂರ್ಣವಾಗಿ ತ್ಯಜಿಸುವ ಅಗತ್ಯವಿಲ್ಲ. ಬದಲಿಗೆ ಯಾವ ಆಹಾರವನ್ನು ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಸರಿಯಾದ ಆಹಾರ ಪದ್ಧತಿ ಅನುಸರಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಸಹಾಯವಾಗುತ್ತದೆ.
ನವೆಂಬರ್ 14ರಂದು ವಿಶ್ವ ಮಧುಮೇಹ ದಿನ ಆಚರಿಸಲಾಗುತ್ತದೆ. 2026ರ ಈ ವರ್ಷದ ಥೀಮ್ ‘Early Action on Diabetes’. ಮಧುಮೇಹವನ್ನು ಆರಂಭದಲ್ಲೇ ಪತ್ತೆಹಚ್ಚುವುದು ಮತ್ತು ಸೂಕ್ತ ಚಿಕಿತ್ಸೆ ಪಡೆಯುವ ಮಹತ್ವವನ್ನು ಈ ಅಭಿಯಾನ ಸಾರುತ್ತದೆ. ಹಾಗಾದರೆ ಮಧುಮೇಹಿಗಳು ತಮ್ಮ ದಿನನಿತ್ಯದ ಊಟದಲ್ಲಿ ಯಾವ ಆಹಾರಗಳನ್ನು ಸೇರಿಸಿಕೊಳ್ಳಬೇಕು? ಯಾವುದನ್ನು ಕಡಿಮೆ ಮಾಡಬೇಕು? ಇಲ್ಲಿದೆ ಮಾಹಿತಿ.
ಮಧುಮೇಹಿಗಳ ತಟ್ಟೆಯಲ್ಲಿ ಇರಬೇಕಾದ 7 ಆಹಾರಗಳು
1. ಅನ್ನಕ್ಕೆ ಪರ್ಯಾಯವಾಗಿ ರಾಗಿ, ಜೋಳ ಬೇಕೇ?
ಬಿಳಿ ಅಕ್ಕಿ ಮತ್ತು ಮೈದಾದಂತಹ ಹೆಚ್ಚು ಸಂಸ್ಕರಿಸಿದ ಧಾನ್ಯಗಳ ಬದಲಿಗೆ ಓಟ್ಸ್, ಕಂದು ಅಕ್ಕಿ, ಗೋಧಿ, ಬಾರ್ಲಿ, ರಾಗಿ, ಜೋಳ ಮತ್ತು ಸಜ್ಜೆಯನ್ನು ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಇವುಗಳಲ್ಲಿರುವ ನಾರಿನಂಶ ಜೀರ್ಣಕ್ರಿಯೆಯನ್ನು ನಿಧಾನಗೊಳಿಸಿ ಊಟದ ಬಳಿಕ ರಕ್ತದಲ್ಲಿನ ಸಕ್ಕರೆ ಏರಿಕೆಯನ್ನು ನಿಯಂತ್ರಿಸಲು ನೆರವಾಗಬಹುದು. ಅನ್ನವನ್ನು ಸಂಪೂರ್ಣವಾಗಿ ಬಿಡುವ ಬದಲು ಸೇವಿಸುವ ಪ್ರಮಾಣದ ಬಗ್ಗೆ ಎಚ್ಚರಿಕೆ ವಹಿಸಿ.
2. ಹಸಿರು ತರಕಾರಿಗಳಿಗೆ ಆದ್ಯತೆ ನೀಡಿ
ಪಾಲಕ್, ಮೆಂತ್ಯೆ ಸೊಪ್ಪು, ಹೂಕೋಸು, ಎಲೆಕೋಸು, ಸೌತೆಕಾಯಿ, ಬೀನ್ಸ್ ಮತ್ತು ಸೋರೆಕಾಯಿಯಂತಹ ತರಕಾರಿಗಳನ್ನು ಪ್ರತಿದಿನದ ಊಟದಲ್ಲಿ ಸೇರಿಸಿಕೊಳ್ಳಿ. ಇವುಗಳಲ್ಲಿ ನಾರಿನಂಶ, ವಿಟಮಿನ್ ಮತ್ತು ಖನಿಜಾಂಶಗಳಿದ್ದು, ಕಾರ್ಬೋಹೈಡ್ರೇಟ್ ಪ್ರಮಾಣವೂ ಸಾಮಾನ್ಯವಾಗಿ ಕಡಿಮೆ ಇರುತ್ತದೆ.
3. ಬೇಳೆ ಮತ್ತು ಕಾಳುಗಳನ್ನು ಮರೆಯಬೇಡಿ
ತೊಗರಿಬೇಳೆ, ಕಡಲೆ, ರಾಜ್ಮಾ, ಅಲಸಂದೆ ಮತ್ತು ಮೊಳಕೆಕಾಳುಗಳು ಉತ್ತಮ ಸಸ್ಯಜನ್ಯ ಪ್ರೋಟೀನ್ ಹಾಗೂ ನಾರಿನ ಮೂಲಗಳಾಗಿವೆ. ಇವು ಹೊಟ್ಟೆ ತುಂಬಿದ ಅನುಭವ ನೀಡುತ್ತವೆ. ಸಾಂಬಾರ್, ಬೇಳೆಸಾರು, ಕಡಲೆ ಸಲಾಡ್ ಅಥವಾ ಮೊಳಕೆಕಾಳಿನ ರೂಪದಲ್ಲಿ ಸೇವಿಸಬಹುದು. ಆದರೆ ಪ್ರಮಾಣದ ಮೇಲೆ ನಿಗಾ ಇರಲಿ.
4. ಪ್ರೋಟೀನ್ ಇರುವ ಆಹಾರ ಸೇವಿಸಿ
ಮೊಟ್ಟೆ, ಮೀನು, ಚರ್ಮ ತೆಗೆದ ಕೋಳಿ ಮಾಂಸ, ತೋಫು, ಪನೀರ್ ಮತ್ತು ಸಕ್ಕರೆ ಸೇರಿಸದ ಮೊಸರು ಪ್ರೋಟೀನ್ ಒದಗಿಸುತ್ತವೆ. ಸ್ನಾಯುಗಳ ಆರೋಗ್ಯಕ್ಕೂ ಇವು ಸಹಕಾರಿ. ಕರಿದ ಆಹಾರಗಳ ಬದಲಿಗೆ ಬೇಯಿಸಿದ ಅಥವಾ ಗ್ರಿಲ್ ಮಾಡಿದ ಆಹಾರಗಳನ್ನು ಆಯ್ಕೆ ಮಾಡಿಕೊಳ್ಳಿ.
5. ಹಣ್ಣುಗಳನ್ನು ಸಂಪೂರ್ಣವಾಗಿ ಬಿಡಬೇಡಿ
ಮಧುಮೇಹವಿದೆ ಎಂದು ಹಣ್ಣುಗಳನ್ನು ತ್ಯಜಿಸುವ ಅಗತ್ಯವಿಲ್ಲ. ಸೇಬು, ಪೇರಳೆ, ಕಿತ್ತಳೆ, ಪಪ್ಪಾಯಿ ಮತ್ತು ಬೆರ್ರಿ ಹಣ್ಣುಗಳನ್ನು ಮಿತವಾಗಿ ಸೇವಿಸಬಹುದು. ಹಣ್ಣಿನ ರಸಕ್ಕಿಂತ ಸಂಪೂರ್ಣ ಹಣ್ಣನ್ನು ತಿನ್ನುವುದು ಉತ್ತಮ. ಏಕೆಂದರೆ ಅದರಲ್ಲಿ ನಾರಿನಂಶ ಉಳಿದಿರುತ್ತದೆ.
6. ಬಾದಾಮಿ, ವಾಲ್ನಟ್ ತಿನ್ನಿ
ಬಾದಾಮಿ, ವಾಲ್ನಟ್, ಪಿಸ್ತಾ, ಚಿಯಾ ಬೀಜ, ಅಗಸೆ ಬೀಜ ಮತ್ತು ಕುಂಬಳಕಾಯಿ ಬೀಜಗಳಲ್ಲಿ ಆರೋಗ್ಯಕರ ಕೊಬ್ಬು ಹಾಗೂ ನಾರಿನಂಶವಿದೆ. ದಿನನಿತ್ಯ ಮಿತ ಪ್ರಮಾಣದಲ್ಲಿ ಉಪ್ಪು ಸೇರಿಸದ ಒಣಹಣ್ಣುಗಳನ್ನು ಸೇವಿಸಬಹುದು.
7. ಸಕ್ಕರೆ ರಹಿತ ಪಾನೀಯಗಳನ್ನು ಆಯ್ಕೆ ಮಾಡಿ
ಸಕ್ಕರೆ ಸೇರಿಸದ ಚಹಾ, ಕಾಫಿ ಮತ್ತು ಮಜ್ಜಿಗೆಯನ್ನು ಸೇವಿಸಬಹುದು. ಆದರೆ ಸಕ್ಕರೆ ಬೆರೆಸಿದ ಪಾನೀಯಗಳು, ತಂಪು ಪಾನೀಯಗಳು ಮತ್ತು ಪ್ಯಾಕ್ ಮಾಡಿದ ಜ್ಯೂಸ್ಗಳಿಂದ ದೂರವಿರುವುದು ಉತ್ತಮ.
ಈ 6 ಆಹಾರಗಳನ್ನು ತಿನ್ನುವಾಗ ಎಚ್ಚರ!
1. ತಂಪು ಪಾನೀಯ ಮತ್ತು ಪ್ಯಾಕ್ ಮಾಡಿದ ಜ್ಯೂಸ್
ಸಾಫ್ಟ್ ಡ್ರಿಂಕ್ಸ್, ಎನರ್ಜಿ ಡ್ರಿಂಕ್ಸ್, ಸಿಹಿ ಐಸ್ ಟೀ ಮತ್ತು ಪ್ಯಾಕ್ ಮಾಡಿದ ಹಣ್ಣಿನ ಜ್ಯೂಸ್ಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ವೇಗವಾಗಿ ಹೆಚ್ಚಿಸಬಹುದು. ಇವುಗಳ ಬದಲಿಗೆ ನೀರು ಅಥವಾ ಸಕ್ಕರೆ ರಹಿತ ಪಾನೀಯಗಳನ್ನು ಸೇವಿಸಿ.
2. ಮೈದಾ ಪದಾರ್ಥಗಳು
ಬಿಳಿ ಬ್ರೆಡ್, ಮೈದಾ ಬಿಸ್ಕತ್, ಕೇಕ್, ಪೇಸ್ಟ್ರಿ ಮತ್ತು ನೂಡಲ್ಸ್ಗಳಲ್ಲಿ ನಾರಿನಂಶ ಕಡಿಮೆ ಇರಬಹುದು. ಇವುಗಳ ಬದಲಿಗೆ ಸಂಪೂರ್ಣ ಧಾನ್ಯಗಳಿಂದ ತಯಾರಿಸಿದ ಆಹಾರಗಳಿಗೆ ಆದ್ಯತೆ ನೀಡಿ.
3. ಸಿಹಿತಿಂಡಿಗಳು
ಮೈಸೂರು ಪಾಕ್, ಜಿಲೇಬಿ, ಗುಲಾಬ್ ಜಾಮೂನ್, ಐಸ್ಕ್ರೀಮ್ ಮತ್ತು ಕೇಕ್ಗಳಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಇರಬಹುದು. ಹಬ್ಬ ಅಥವಾ ವಿಶೇಷ ಸಂದರ್ಭಗಳಲ್ಲಿ ತಿನ್ನಲೇಬೇಕೆಂದಿದ್ದರೆ ಪ್ರಮಾಣವನ್ನು ಬಹಳ ಕಡಿಮೆ ಇಟ್ಟುಕೊಳ್ಳಿ.
4. ಕರಿದ ತಿಂಡಿಗಳು
ಸಮೋಸಾ, ಪಕೋಡ, ಚಿಪ್ಸ್ ಮತ್ತು ಫಾಸ್ಟ್ಫುಡ್ಗಳಲ್ಲಿ ಹೆಚ್ಚಿನ ಕ್ಯಾಲೊರಿ, ಉಪ್ಪು ಹಾಗೂ ಸ್ಯಾಚುರೇಟೆಡ್ ಕೊಬ್ಬು ಇರಬಹುದು. ಇವುಗಳನ್ನು ನಿಯಮಿತವಾಗಿ ಸೇವಿಸುವುದನ್ನು ತಪ್ಪಿಸಿ.
5. ಸಂಸ್ಕರಿಸಿದ ಮಾಂಸ
ಸಾಸೇಜ್, ಬೇಕನ್, ಸಲಾಮಿ ಮತ್ತು ಕೊಬ್ಬಿನ ಕೆಂಪು ಮಾಂಸದ ಸೇವನೆಯನ್ನು ಮಿತಿಗೊಳಿಸಿ. ಇವುಗಳ ಬದಲಿಗೆ ಮೀನು, ಮೊಟ್ಟೆ, ಕೋಳಿ ಮಾಂಸ ಮತ್ತು ಬೇಳೆಗಳಿಗೆ ಆದ್ಯತೆ ನೀಡಬಹುದು.
6. ಗುಪ್ತ ಸಕ್ಕರೆ ಇರುವ ಆಹಾರಗಳು
ಫ್ಲೇವರ್ಡ್ ಮೊಸರು, ಪ್ಯಾಕ್ ಮಾಡಿದ ಸಾಸ್ಗಳು, ಸೀರಿಯಲ್ಸ್, ಸಲಾಡ್ ಡ್ರೆಸ್ಸಿಂಗ್ ಮತ್ತು ಕೆಲವು ಆರೋಗ್ಯ ಪಾನೀಯಗಳಲ್ಲಿ ಹೆಚ್ಚುವರಿ ಸಕ್ಕರೆ ಇರಬಹುದು. ಹೀಗಾಗಿ ಖರೀದಿಸುವ ಮೊದಲು ಪ್ಯಾಕೆಟ್ ಮೇಲಿನ ಪೌಷ್ಟಿಕಾಂಶದ ವಿವರಗಳನ್ನು ಪರಿಶೀಲಿಸುವುದನ್ನು ಮರೆಯಬೇಡಿ.
ಮಧುಮೇಹ ನಿಯಂತ್ರಣಕ್ಕೆ ಈ ಸಂಗತಿಗಳು ನೆನಪಿರಲಿ
-
ಆಹಾರದ ಪ್ರಮಾಣವನ್ನು ನಿಯಂತ್ರಿಸಿ.
-
ನಾರಿನಂಶ ಹೆಚ್ಚಿರುವ ಆಹಾರಗಳನ್ನು ಸೇವಿಸಿ.
-
ಕಾರ್ಬೋಹೈಡ್ರೇಟ್ ಜೊತೆಗೆ ಪ್ರೋಟೀನ್ ಮತ್ತು ತರಕಾರಿಗಳನ್ನೂ ಸೇರಿಸಿಕೊಳ್ಳಿ.
-
ಹೆಚ್ಚುವರಿ ಸಕ್ಕರೆ ಇರುವ ಆಹಾರ ಮತ್ತು ಪಾನೀಯಗಳನ್ನು ಕಡಿಮೆ ಮಾಡಿ.
-
ನಿಯಮಿತ ವ್ಯಾಯಾಮ ಮಾಡಿ ಮತ್ತು ವೈದ್ಯರ ಸಲಹೆ ಪಾಲಿಸಿ.
ಮಧುಮೇಹವಿದೆ ಎಂದು ಇಷ್ಟದ ಆಹಾರಗಳನ್ನೆಲ್ಲ ಬಿಟ್ಟು ಕಷ್ಟಪಡುವ ಅಗತ್ಯವಿಲ್ಲ. ಆಹಾರದ ಆಯ್ಕೆ, ಸೇವಿಸುವ ಪ್ರಮಾಣ ಮತ್ತು ಜೀವನಶೈಲಿಯಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳುವುದು ಮುಖ್ಯ. ಪ್ರತಿಯೊಬ್ಬರ ಆರೋಗ್ಯ ಸ್ಥಿತಿ ಮತ್ತು ಔಷಧಿಗಳ ಆಧಾರದ ಮೇಲೆ ಆಹಾರ ಪದ್ಧತಿ ಬದಲಾಗಬಹುದು. ಆದ್ದರಿಂದ ವೈದ್ಯರು ಅಥವಾ ನೋಂದಾಯಿತ ಆಹಾರ ತಜ್ಞರ ಸಲಹೆಯಂತೆ ಆಹಾರ ಕ್ರಮ ರೂಪಿಸಿಕೊಳ್ಳಿ. ಇನ್ಸುಲಿನ್ ಅಥವಾ ರಕ್ತದ ಸಕ್ಕರೆ ಕಡಿಮೆ ಮಾಡುವ ಔಷಧಿ ತೆಗೆದುಕೊಳ್ಳುವವರು ವೈದ್ಯರ ಸಲಹೆಯಿಲ್ಲದೆ ಊಟ ಬಿಡಬಾರದು ಅಥವಾ ಕಾರ್ಬೋಹೈಡ್ರೇಟ್ ಪ್ರಮಾಣವನ್ನು ಹಠಾತ್ತನೆ ಕಡಿಮೆ ಮಾಡಬಾರದು.
Disclaimer : ಈ ಲೇಖನದಲ್ಲಿರುವ ಮಾಹಿತಿಯು ಸಾಮಾನ್ಯ ಆರೋಗ್ಯ ಜಾಗೃತಿಗಾಗಿ ಮಾತ್ರ. ಇದು ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಲ್ಲ. ಮಧುಮೇಹಿಗಳ ಆಹಾರ ಪದ್ಧತಿ ಅವರ ಆರೋಗ್ಯ ಸ್ಥಿತಿ, ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತು ಔಷಧಿಗಳ ಆಧಾರದ ಮೇಲೆ ಬದಲಾಗಬಹುದು. ಯಾವುದೇ ಆಹಾರ ಬದಲಾವಣೆ ಮಾಡುವ ಮೊದಲು ವೈದ್ಯರು ಅಥವಾ ತಜ್ಞರ ಸಲಹೆ ಪಡೆಯಿರಿ.