ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ 4,46,58,413 ಮತದಾರರಿದ್ದು, ಮತದಾರರ ಪಟ್ಟಿ ಪರಿಷ್ಕರಣೆ, ನೋಟಿಸ್ಗಳ ಜಾರಿ ಹಾಗೂ ವಿಚಾರಣೆ ಪ್ರಕ್ರಿಯೆ ಭರದಿಂದ ಸಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ (CEO) ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಮುಖ್ಯ ಚುನಾವಣಾಧಿಕಾರಿಗಳು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಮತದಾರರ ನೋಂದಣಿ ಅಧಿಕಾರಿಗಳೊಂದಿಗೆ (ERO) ವಿಡಿಯೋ ಕಾನ್ಫರೆನ್ಸ್ ಮೂಲಕ ಪರಿಶೀಲನಾ ಸಭೆ ನಡೆಸಿದ್ದು, ನೋಟಿಸ್ಗಳ ಶೀಘ್ರ ಜಾರಿ ಮತ್ತು ವಿಚಾರಣೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಸ್ಪಷ್ಟ ನಿರ್ದೇಶನ ನೀಡಿದ್ದಾರೆ.
ಪ್ರಮುಖ ಅಂಶಗಳು ಹಾಗೂ ಅಂಕಿ-ಅಂಶಗಳು:
-
ಒಟ್ಟು ಮತದಾರರ ಸಂಖ್ಯೆ:
2026ರ ಸೆಪ್ಟೆಂಬರ್ 10ರ ವರದಿಯನ್ವಯ ರಾಜ್ಯದಲ್ಲಿ ಒಟ್ಟು 4,46,58,413 ಮತದಾರರಿದ್ದಾರೆ. ಇದರಲ್ಲಿ 2,21,69,552 ಪುರುಷರು, 2,24,85,987 ಮಹಿಳೆಯರು ಹಾಗೂ 2,874 ತೃತೀಯ ಲಿಂಗಿ ಮತದಾರರಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು (35.93 ಲಕ್ಷ) ಮತದಾರರಿದ್ದರೆ, ಕೊಡಗು ಜಿಲ್ಲೆಯಲ್ಲಿ ಅತಿ ಕಡಿಮೆ (4.05 ಲಕ್ಷ) ಮತದಾರರಿದ್ದಾರೆ.
-
ನೋಟಿಸ್ ಜಾರಿ ಹಾಗೂ ವಿಚಾರಣೆ:
ಮ್ಯಾಪಿಂಗ್ ಆಗದ ಹಾಗೂ ದೋಷಪೂರಿತ (No Mapping & Anomalies) ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಒಟ್ಟು 43,81,760 ನೋಟಿಸ್ಗಳನ್ನು ಸಿದ್ಧಪಡಿಸಲಾಗಿದೆ. ಈ ಪೈಕಿ 24,97,075 (ಶೇ. 56.99) ನೋಟಿಸ್ಗಳನ್ನು ಮತದಾರರಿಗೆ ತಲುಪಿಸಲಾಗಿದೆ. ವಿತರಿಸಲಾದ ನೋಟಿಸ್ಗಳಲ್ಲಿ ಈವರೆಗೆ 7,03,710 (ಶೇ. 28.18) ವಿಚಾರಣೆಗಳು ಪೂರ್ಣಗೊಂಡಿದ್ದು, 17,93,365 ವಿಚಾರಣೆಗಳು ಬಾಕಿ ಇವೆ.
-
ಪ್ರಮುಖ ದಿನಾಂಕಗಳು:
-
ನೋಟಿಸ್ಗಳ ಅಂತಿಮ ವಿಚಾರಣೆಯು 2026ರ ಅಕ್ಟೋಬರ್ 12 ರಂದು ನಡೆಯಲಿದೆ.
-
ಆಕ್ಷೇಪಣೆ, ಹಕ್ಕು-ದೂರುಗಳು ಹಾಗೂ ನೋಟಿಸ್ ಹಂತದ ಅಂತಿಮ ವಿಲೇವಾರಿಗೆ 2026ರ ಅಕ್ಟೋಬರ್ 22 ಕೊನೆಯ ದಿನವಾಗಿದೆ.
-
ಪರಿಶೀಲನೆಗಳ ನಂತರ ಅಂತಿಮ ಮತದಾರರ ಪಟ್ಟಿಯನ್ನು 2026ರ ಅಕ್ಟೋಬರ್ 27 ರಂದು ಪ್ರಕಟಿಸಲಾಗುತ್ತದೆ.
-
ಸೆಪ್ಟೆಂಬರ್ 19 ಮತ್ತು 20 ರಂದು 'ವಿಶೇಷ ಮತದಾರರ ನೋಂದಣಿ ಅಭಿಯಾನ'
ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ನೋಂದಣಿಗಾಗಿ ರಾಜ್ಯಾದ್ಯಂತ ಸೆಪ್ಟೆಂಬರ್ 19 ಮತ್ತು 20, 2026 ರಂದು ಎರಡನೇ ಹಂತದ ವಿಶೇಷ ನೋಂದಣಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಮತ್ತು ಯುವಜನರು ಇದರ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ.
ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗೆ ಮಹತ್ವದ ವಿನಾಯಿತಿ
ನೋಟಿಸ್ ಜಾರಿಯಾದ ಹಿರಿಯ ನಾಗರಿಕರು (Senior Citizens), ವಿಕಲಚೇತನರು (PwD), ಅನಾರೋಗ್ಯ ಪೀಡಿತರು ಹಾಗೂ ಅನಿವಾಸಿ ಭಾರತೀಯ (Overseas) ಮತದಾರರು ಖುದ್ದಾಗಿ ವಿಚಾರಣೆಗೆ ಹಾಜರಾಗಲು ಸಾಧ್ಯವಾಗದಿದ್ದಲ್ಲಿ, ಅವರ ಪರವಾಗಿ ಅವರ ಕುಟುಂಬದ ಯಾವುದೇ ವಯಸ್ಕ ಸದಸ್ಯರು ERO/AERO ಕಚೇರಿಗೆ ಹಾಜರಾಗಿ ಅಗತ್ಯ ದಾಖಲೆ ಹಾಗೂ ವಿವರಗಳನ್ನು ಸಲ್ಲಿಸಲು ಚುನಾವಣಾ ಆಯೋಗ ಅಧಿಕೃತ ಅನುಮತಿ ನೀಡಿದೆ.
ಮತಗಟ್ಟೆ ಬದಲಾವಣೆ ಕುರಿತು ಆಯೋಗದ ಸ್ಪಷ್ಟನೆ
ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹಳೆಯ ಭಾಗ (Part Number) ಅಥವಾ ಕ್ರಮ ಸಂಖ್ಯೆಯಲ್ಲಿ (Serial Number) ಹೆಸರು ಕಾಣಿಸದಿರುವ ಕುರಿತು ಹಲವು ಮತದಾರರು ಗೊಂದಲ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಸ್ಪಷ್ಟನೆ ನೀಡಿರುವ ಮುಖ್ಯ ಚುನಾವಣಾಧಿಕಾರಿಗಳು:
"ಮತಗಟ್ಟೆಗಳ ಪುನಾರಚನೆ (Rationalization) ಹಾಗೂ ಮತದಾರರ ಮರು-ಕ್ರಮಸಂಖ್ಯೆ ಪ್ರಕ್ರಿಯೆಯಿಂದಾಗಿ ಭಾಗ ಸಂಖ್ಯೆ ಮತ್ತು ಕ್ರಮ ಸಂಖ್ಯೆಗಳು ಬದಲಾಗಿರಬಹುದು. ಮತದಾರರು ಗಾಬರಿಯಾಗುವ ಅಗತ್ಯವಿಲ್ಲ. ಅಧಿಕೃತ ವೆಬ್ಸೈಟ್ voters.eci.gov.in ಅಥವಾ ECINET ಮೊಬೈಲ್ ಆ್ಯಪ್ ಮೂಲಕ ತಮ್ಮ EPIC ಸಂಖ್ಯೆಯನ್ನು ನಮೂದಿಸಿ ಹಾಲಿ ಮತಗಟ್ಟೆ ವಿವರಗಳನ್ನು ಸುಲಭವಾಗಿ ಪರಿಶೀಲಿಸಬಹುದು" ಎಂದು ತಿಳಿಸಿದ್ದಾರೆ.
ಹೊಸ ಮತದಾರರ ನೋಂದಣಿ (ಫಾರ್ಮ್ 6): ಆನ್ಲೈನ್ ಮತ್ತು ಆಫ್ಲೈನ್ ಸೌಲಭ್ಯ
2026ರ ಅಕ್ಟೋಬರ್ 1ಕ್ಕೆ 18 ವರ್ಷ ಪೂರೈಸುವ ಯುವಕರು ಅಥವಾ ಈವರೆಗೆ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಅರ್ಹ ನಾಗರಿಕರು ಹೆಸರು ಸೇರ್ಪಡೆಗೆ ಫಾರ್ಮ್ 6 ಮೂಲಕ ಅರ್ಜಿ ಸಲ್ಲಿಸಬಹುದು.
-
ಅರ್ಜಿ ಸಲ್ಲಿಕೆ ಹೇಗೆ?
-
ಆನ್ಲೈನ್: voters.eci.gov.in ಪೋರ್ಟಲ್ ಅಥವಾ ECINET ಮೊಬೈಲ್ ಆ್ಯಪ್ ಮೂಲಕ ಲಾಗಿನ್ ಆಗಿ ಫಾರ್ಮ್ 6 ಮತ್ತು ಸ್ವಯಂ ದೃಢೀಕರಣ ನಮೂನೆ (Declaration Form) ಸಲ್ಲಿಸಬಹುದು.
-
ಆಫ್ಲೈನ್: ಸಂಬಂಧಪಟ್ಟ ಬೂತ್ ಮಟ್ಟದ ಅಧಿಕಾರಿಗಳು (BLO) ಅಥವಾ ಮತದಾರರ ನೋಂದಣಿ ಅಧಿಕಾರಿಗಳ (ERO/AERO) ಕಚೇರಿಯಿಂದ ಭೌತಿಕ ಅರ್ಜಿ ಪಡೆದು ದಾಖಲೆಗಳೊಂದಿಗೆ ಸಲ್ಲಿಸಬಹುದು.
-
-
ಅಗತ್ಯ ದಾಖಲೆಗಳು: ವಯಸ್ಸಿನ ದಾಖಲೆ (ಜನನ ಪ್ರಮಾಣಪತ್ರ, ಶಾಲಾ ಅಂಕಪಟ್ಟಿ, ಪಾಸ್ಪೋರ್ಟ್ ಇತ್ಯಾದಿ), ವಿಳಾಸದ ಪುರಾವೆ ಹಾಗೂ ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರ.
ಹೆಚ್ಚಿನ ಮಾಹಿತಿ ಹಾಗೂ ಸಹಾಯಕ್ಕಾಗಿ ಮತದಾರರು ಸಹಾಯವಾಣಿ ಸಂಖ್ಯೆ 1950 ಅಥವಾ 1800 4255 1950 ಅನ್ನು ಸಂಪರ್ಕಿಸಬಹುದಾಗಿದೆ.