ಬೆಂಗಳೂರು: ರಾಜ್ಯದ ನ್ಯಾಯಬೆಲೆ (ರೇಷನ್) ಅಂಗಡಿಗಳ ಕಾರ್ಯನಿರ್ವಹಣಾ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದ್ದು, ಅಕ್ಟೋಬರ್ 1ರಿಂದ ಹೊಸ ಸಮಯ ಜಾರಿಗೆ ಬರಲಿದೆ. ಇದರೊಂದಿಗೆ ಪಡಿತರ ಕಾರ್ಡ್‌ದಾರರಿಗೆ ಇ-ಕೆವೈಸಿ ಮಾಡಿಸಲು ಅಕ್ಟೋಬರ್ 20ರವರೆಗೆ ಕಾಲಾವಕಾಶ ವಿಸ್ತರಿಸಿ ಸರ್ಕಾರ ಆದೇಶಿಸಿದೆ.
ಸರ್ವರ್ ಸಮಸ್ಯೆ ಹಾಗೂ ತಾಂತ್ರಿಕ ದೋಷಗಳಿಂದಾಗಿ ಜನರು ಎದುರಿಸುತ್ತಿದ್ದ ಸಂಕಷ್ಟಕ್ಕೆ ಸ್ಪಂದಿಸಿ ರಾಜ್ಯ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಹಾಗೂ ಪಡಿತರ ವಿತರಣಾ ವ್ಯವಸ್ಥೆಯನ್ನು ಮತ್ತಷ್ಟು ಜನಸ್ನೇಹಿಯಾಗಿಸಲು ಅಕ್ಟೋಬರ್ 1ರಿಂದ ರೇಷನ್ ಅಂಗಡಿಗಳು ದಿನಕ್ಕೆ ಎರಡು ಪಾಳಿಯಲ್ಲಿ ತೆರೆಯಲಿವೆ.
ಬೆಳಗಿನ ಅವಧಿ: ಬೆಳಗ್ಗೆ 7:00 ರಿಂದ ಮಧ್ಯಾಹ್ನ 12:00 ರವರೆಗೆ
ಸಂಜೆಯ ಅವಧಿ: ಸಂಜೆ 4:00 ರಿಂದ ರಾತ್ರಿ 8:00 ರವರೆಗೆ
ಕೂಲಿ-ಕಾರ್ಮಿಕರು ಹಾಗೂ ನೌಕರರು ಬೆಳಗ್ಗೆ ಕೆಲಸಕ್ಕೆ ತೆರಳುವ ಮುನ್ನ ಅಥವಾ ಸಂಜೆ ಕೆಲಸ ಮುಗಿಸಿ ಮನೆಗೆ ಹಿಂದಿರುಗುವಾಗ ಸುಲಭವಾಗಿ ರೇಷನ್ ಪಡೆಯಲು ಮತ್ತು ಇ-ಕೆವೈಸಿ ಮಾಡಿಸಿಕೊಳ್ಳಲು ಈ ಸಮಯ ನಿಗದಿಪಡಿಸಲಾಗಿದೆ.
ಅ.20ರವರೆಗೆ ಇ-ಕೆವೈಸಿ ಗಡುವು ವಿಸ್ತರಣೆ:
ರಾಜ್ಯದಲ್ಲಿ ಬೋಗಸ್ ಕಾರ್ಡ್ ಪತ್ತೆ ಹಾಗೂ ಪಡಿತರ ಸೋರಿಕೆ ತಡೆಗೆ ಆಹಾರ ಇಲಾಖೆಯು ಇ-ಕೆವೈಸಿ ಕಡ್ಡಾಯಗೊಳಿಸಿದೆ. ಈ ಹಿಂದೆ ಸೆಪ್ಟೆಂಬರ್ 30 ಕೊನೆಯ ದಿನವಾಗಿತ್ತು. ಆದರೆ ಸರ್ವರ್ ಸಮಸ್ಯೆಯಿಂದಾಗಿ ನ್ಯಾಯಬೆಲೆ ಅಂಗಡಿಗಳ ಮುಂಭಾಗ ಜನ ಸರದಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಜನರ ಪರದಾಟವನ್ನು ಗಮನಿಸಿ, ಸರ್ವರ್ ಸಮಸ್ಯೆಯನ್ನು ತಕ್ಷಣ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಇ-ಕೆವೈಸಿ ಪೂರ್ಣಗೊಳಿಸಲು ಅಕ್ಟೋಬರ್ 20ರವರೆಗೆ ಅಂತಿಮ ಗಡುವು ನೀಡಲಾಗಿದೆ. ಸಾರ್ವಜನಿಕರು ಯಾವುದೇ ಗೊಂದಲವಿಲ್ಲದೆ ಸಮೀಪದ ನ್ಯಾಯಬೆಲೆ ಅಂಗಡಿಗೆ ತೆರಳಿ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಕೋರಲಾಗಿದೆ.