ಮಂಗಳೂರು: ಕರಾವಳಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಇಂದು ಮಂಗಳೂರಿನಲ್ಲಿ ರಾಜ್ಯ ಸಚಿವ ಸಂಪುಟದ ಸಭೆ ನಡೆಯಲಿದ್ದು, ನಗರ ಸಂಪೂರ್ಣ ಸಜ್ಜಾಗಿದೆ. ನಗರದ ನೂತನ ಜಿಲ್ಲಾಧಿಕಾರಿ ಕಚೇರಿಯ (ಪ್ರಜಾಸೌಧ) ಎರಡನೇ ಮಹಡಿಯಲ್ಲಿ ಸಭೆ ಆಯೋಜನೆಯಾಗಿದೆ.
ಬೆಳಿಗ್ಗೆ 10:30ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಸುಮಾರು ಮೂರು ಗಂಟೆಗಳ ಕಾಲ ನಡೆಯಲಿರುವ ಈ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವರು ಕರಾವಳಿ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ಬೆಳವಣಿಗೆಯ ಕುರಿತು ಮಹತ್ವದ ಚರ್ಚೆ ನಡೆಸಲಿದ್ದಾರೆ.
ಪ್ರಮುಖ ಚರ್ಚೆಗಳು ಮತ್ತು ನಿರೀಕ್ಷೆಗಳು
ಜಿಲ್ಲೆಯ ಮರುನಾಮಕರಣ: 'ದಕ್ಷಿಣ ಕನ್ನಡ' ಜಿಲ್ಲೆಯ ಹೆಸರನ್ನು 'ಮಂಗಳೂರು ಜಿಲ್ಲೆ' ಎಂದು ಬದಲಾವಣೆ ಮಾಡುವ ಸಾಧ್ಯತೆ.
ತುಳು ಭಾಷೆಗೆ ಮನ್ನಣೆ: ತುಳು ಭಾಷೆಗೆ ರಾಜ್ಯದ 2ನೇ ಹೆಚ್ಚುವರಿ ಅಧಿಕೃತ ರಾಜ್ಯ ಭಾಷೆ ಸ್ಥಾನಮಾನ ನೀಡುವ ಕುರಿತು ಚರ್ಚೆ.
ಸಿಆರ್‌ಝಡ್ ನಿಯಮ ಪರಿಷ್ಕಾರ: ಕರಾವಳಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಪೂರಕವಾಗಿ ಸಿಆರ್‌ಝಡ್ ನಿಯಮಗಳನ್ನು ಸಡಿಲಿಸುವ ನಿರೀಕ್ಷೆ.
ಮೆಗಾ ಪ್ಯಾಕೇಜ್: ಮಂಗಳೂರಿನ ಮೂಲಸೌಕರ್ಯ ಹಾಗೂ ಅಭಿವೃದ್ಧಿಗಾಗಿ ₹5,000 ಕೋಟಿ ಮೊತ್ತದ ವಿಶೇಷ ಪ್ಯಾಕೇಜ್ ಘೋಷಣೆಯಾಗುವ ಸಾಧ್ಯತೆ.
ವಿಮಾನ ನಿಲ್ದಾಣ ನಾಮಕರಣ: ಮಂಗಳೂರು ವಿಮಾನ ನಿಲ್ದಾಣಕ್ಕೆ 'ಕೋಟಿ ಚೆನ್ನಯ್ಯ' ಹೆಸರು ನಾಮಕರಣ ಮಾಡುವ ನಿರೀಕ್ಷೆ.
ಇತರ ಯೋಜನೆಗಳು: ಮಂಗಳೂರಿನಲ್ಲಿ ಮೆಡಿಕಲ್ ಟೂರಿಸಂ ಹಬ್ ಸ್ಥಾಪನೆ, ಕರಾವಳಿಯಲ್ಲಿ ಐಟಿ ಪಾರ್ಕ್ ನಿರ್ಮಾಣ ಹಾಗೂ ಟೆಂಪಲ್ ಟೂರಿಸಂ ಮತ್ತು ಮೀನುಗಾರಿಕೆ ಬಂದರುಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡುವ ಸಾಧ್ಯತೆ ಇದೆ.