ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹತ್ವದ ಕಾರ್ಯಾಚರಣೆ ನಡೆಸಿರುವ ಕಸ್ಟಮ್ಸ್ ಅಧಿಕಾರಿಗಳು ಪ್ರತ್ಯೇಕವಾಗಿ ಮೂವರು ಬ್ಯಾಂಕಾಕ್ ಪ್ರವಾಸಿಗರನ್ನು ಬಂಧಿಸಿದ್ದು, 7.65 ಕೋಟಿ ರೂಪಾಯಿ ಮೌಲ್ಯದ 21.86 ಕೆಜಿ ಹೈಡ್ರೋ ಗಾಂಜಾ ಜಪ್ತಿ ಮಾಡಿದ್ದಾರೆ.
ವಿದೇಶದಿಂದ ಕಳ್ಳ ಮಾರ್ಗದಲ್ಲಿ ಡ್ರಗ್ಸ್ ಸಾಗಾಣಿಕೆ ಮೇಲೆ ಕಸ್ಟಮ್ಸ್ ಅಧಿಕಾರಿಗಳು ನಿಗಾ ವಹಿಸಿದ್ದಾರೆ. ಇತ್ತೀಚಿಗೆ ಬ್ಯಾಂಕಾಕ್ ಪ್ರವಾಸಿಗರ ಸೋಗಿನಲ್ಲಿ ಡ್ರಗ್ಸ್ ಸಾಗಾಣಿಕೆಗೆ ಯತ್ನಿಸಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.
ಭಾನುವಾರ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬ್ಯಾಂಕಾಕ್ ಪ್ರವಾಸಿಗನ ಬಳಿ 1.75 ಕೋಟಿ ರೂ. ಮೌಲ್ಯದ 5 ಕೆಜಿ ಹೈಡ್ರೋ ಗಾಂಜಾ ಜಪ್ತಿ ಮಾಡಲಾಗಿದೆ. ಜೂನ್ 4ರಂದು ಇಬ್ಬರು ಕಸ್ಟಮ್ಸ್ ಬಲೆಗೆ ಬಿದ್ದಿದ್ದಾರೆ. ಇವರಲ್ಲಿ ಒಬ್ಬನಿಂದ 2.33 ಕೋಟಿ ರೂಪಾಯಿ ಮೌಲ್ಯದ 6.66 ಕೆಜಿ, ಮತ್ತೊಬ್ಬನಿಂದ 3.57 ಕೋಟಿ ರೂ. ಮೌಲ್ಯದ 10.20 ಕೆಜಿ ಹೈಡ್ರೋ ಗಾಂಜಾ ಜಪ್ತಿ ಮಾಡಲಾಗಿದೆ. ಒಟ್ಟಾರೆ ಈ ಮೂವರು ಪೆಡ್ಲರ್ ಗಳಿಂದ 7.65 ಕೋಟಿ ರೂ. ಮೌಲ್ಯದ 21.86 ಕೆಜಿ ಗಾಂಜಾ ವಶಕ್ಕೆ ಪಡೆದು ತನಿಖೆ ನಡೆಸಲಾಗಿದೆ.