ಬೆಂಗಳೂರು: ದೇಶಾದ್ಯಂತ ಇರುವ ಎಲ್‌ಪಿಜಿ (LPG) ಸಿಲಿಂಡರ್ ಬಳಕೆದಾರರಿಗೆ ತೈಲ ಕಂಪನಿಗಳು ಪ್ರಮುಖ ಸೂಚನೆಯೊಂದನ್ನು ನೀಡಿದ್ದು, ಅಕ್ಟೋಬರ್ 01 ರಿಂದ ಗ್ಯಾಸ್ ಬುಕ್ಕಿಂಗ್ ಮಾಡಲು ಆಧಾರ್ ಇ-ಕೆವೈಸಿ (e-KYC) ಮಾಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಸಬ್ಸಿಡಿ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಲು ಮತ್ತು ಅಕ್ರಮ ಬಳಕೆಗೆ ತಡೆಹಾಕಲು ಈ ನಿಯಮವನ್ನು ಜಾರಿಗೆ ತರಲಾಗುತ್ತಿದೆ.
ಕೋಟಿಗಟ್ಟಲೆ ಗ್ರಾಹಕರಿಂದ ಬಾಕಿ ಇದೆ ಇ-ಕೆವೈಸಿ: ವರದಿಗಳ ಪ್ರಕಾರ, ದೇಶದಲ್ಲಿ ಇದುವರೆಗೂ ಒಟ್ಟು 27.43 ಕೋಟಿ ಗ್ರಾಹಕರು ಮಾತ್ರ ತಮ್ಮ ಆಧಾರ್ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ. ಆದರೆ, ಇನ್ನು ಸುಮಾರು 3.16 ಕೋಟಿ ಜನರು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಇ-ಕೆವೈಸಿ ಮಾಡಿಸಲು ಗ್ರಾಹಕರಿಗೆ ಅನುಕೂಲವಾಗುವಂತೆ ತೈಲ ಸಂಸ್ಥೆಗಳು ಹಲವು ಸುಲಭ ಆಯ್ಕೆಗಳನ್ನು ಒದಗಿಸಿವೆ.
ಮನೆಯಲ್ಲೇ ಕುಳಿತು ಅಥವಾ ಡೆಲಿವರಿ ಬಾಯ್ ಬಳಿ ಇ-ಕೆವೈಸಿ ಮಾಡಲು ಅವಕಾಶ: ಗ್ರಾಹಕರು ಇ-ಕೆವೈಸಿಗಾಗಿ ಸುಲಭವಾಗಿ ಅನುಸರಿಸಬಹುದಾದ ಮೂರು ಮುಖ್ಯ ಮಾರ್ಗಗಳು ಇಲ್ಲಿವೆ:
-
ಡೆಲಿವರಿ ವೇಳೆ ಸಿಲಿಂಡರ್ ಪೂರೈಕೆದಾರರ ಬಳಿ: ನಿಮ್ಮ ಮನೆಗೆ ಸಿಲಿಂಡರ್ ಡೆಲಿವರಿ ಮಾಡಲು ಬರುವ ವ್ಯಕ್ತಿಯ ಬಳಿ ಇರುವ ಮೊಬೈಲ್ ಆ್ಯಪ್‌ನಲ್ಲಿ ಬೆರಳಚ್ಚು (ಬಯೋಮೆಟ್ರಿಕ್) ನೀಡಿ ಇ-ಕೆವೈಸಿ ಪ್ರಕ್ರಿಯೆಯನ್ನು ಕ್ಷಣಾರ್ಧದಲ್ಲಿ ಮುಗಿಸಬಹುದು.
-
ಗ್ಯಾಸ್ ಏಜೆನ್ಸಿಗೆ ನೇರ ಭೇಟಿ: ಗ್ರಾಹಕರು ತಮ್ಮ ಹತ್ತಿರದ ಗ್ಯಾಸ್ ವಿತರಕರ (ಏಜೆನ್ಸಿ) ಕಚೇರಿಗೆ ನೇರವಾಗಿ ತೆರಳಿ ಬಯೋಮೆಟ್ರಿಕ್ ನೀಡಿ ಇ-ಕೆವೈಸಿ ಪೂರ್ಣಗೊಳಿಸಬಹುದು.
-
ಮೊಬೈಲ್ ಆ್ಯಪ್ ಮೂಲಕ ಸೆಲ್ಫ್ ಇ-ಕೆವೈಸಿ: ಗ್ರಾಹಕರು ತಮ್ಮ ಮೊಬೈಲ್‌ನಲ್ಲೇ ಸ್ವತಃ ಇ-ಕೆವೈಸಿ ಮಾಡಿಕೊಳ್ಳಬಹುದು. ಇಂಡಿಯನ್ ಆಯಿಲ್ ಬಳಕೆದಾರರು ‘Indian Oil One’, ಭಾರತ್ ಗ್ಯಾಸ್ ಬಳಕೆದಾರರು ‘Hello BPCL’ ಹಾಗೂ ಹೆಚ್‌ಪಿ ಬಳಕೆದಾರರು ‘HP Pay’ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಮನೆಯಲ್ಲೇ ಕುಳಿತು ಇ-ಕೆವೈಸಿ ಪೂರ್ಣಗೊಳಿಸಬಹುದು.
ಇ-ಕೆವೈಸಿ ಮಾಡಿಸದಿದ್ದರೆ ಸಬ್ಸಿಡಿ ರಹಿತ ಮಾರುಕಟ್ಟೆ ದರ ಅನ್ವಯ: ಒಂದು ವೇಳೆ ಗ್ರಾಹಕರಿಗೆ ಸಬ್ಸಿಡಿ ದರದಲ್ಲಿ ಗ್ಯಾಸ್ ಪಡೆಯುವುದು ಬೇಡವಾದಲ್ಲಿ, ತಮಗೆ ಮೊಬೈಲ್ ಆ್ಯಪ್ ಅಥವಾ ಬಯೋಮೆಟ್ರಿಕ್ ಇ-ಕೆವೈಸಿ ಅಗತ್ಯವಿಲ್ಲ ಎಂದು ಸ್ವಯಂ ಘೋಷಿಸಬೇಕಾಗುತ್ತದೆ. ಇ-ಕೆವೈಸಿ/ಬಯೋಮೆಟ್ರಿಕ್ ನೀಡದ ಅಥವಾ ಸಬ್ಸಿಡಿ ಬೇಡವೆಂದು ತಿಳಿಸುವ ಗ್ರಾಹಕರು ಇನ್ಮುಂದೆ ಗ್ಯಾಸ್ ಸಿಲಿಂಡರ್‌ಗಳನ್ನು ಸಬ್ಸಿಡಿ ರಹಿತವಾಗಿ, ಸಂಪೂರ್ಣ ಮಾರುಕಟ್ಟೆ ದರದಲ್ಲೇ ಖರೀದಿಸಬೇಕಾಗುತ್ತದೆ.