ನವದೆಹಲಿ: ಕೇಂದ್ರ ಸರ್ಕಾರವು ಬೆಳ್ಳಿ ಆಮದು ನಿಯಮಗಳನ್ನು ದಿಢೀರ್ ಕಠಿಣಗೊಳಿಸಿದ ಬೆನ್ನಲ್ಲೇ, ಇಂದು (ಗುರುವಾರ) ದೇಶದ ಷೇರು ಮಾರುಕಟ್ಟೆಯಲ್ಲಿ ಪ್ರಮುಖ ಜ್ಯುವೆಲ್ಲರಿ ಕಂಪನಿಗಳು ಮತ್ತು ಮೆಟಲ್ (ಲೋಹ) ಉದ್ಯಮದ ಷೇರುಗಳು ತೀವ್ರ ತಲ್ಲಣಕ್ಕೆ ಸಾಕ್ಷಿಯಾಗುತ್ತಿದ್ದು, ಹೂಡಿಕೆದಾರರ ಸಂಪೂರ್ಣ ಗಮನ ಇವುಗಳ ಮೇಲೆಯೇ ನೆಟ್ಟಿದೆ.
ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯದ (DGFT) ಮಾನ್ಯತೆ ಪಡೆದ ಆಮದು ಅಧಿಕಾರ ಪತ್ರವನ್ನು ಸರ್ಕಾರ ಕಡ್ಡಾಯಗೊಳಿಸಿ ಹೊರಡಿಸಿರುವ ನೂತನ ಅಧಿಸೂಚನೆಯು, ಮಾರುಕಟ್ಟೆಯಲ್ಲಿ ಭಾರಿ ಏರಿಳಿತದ ಮುನ್ಸೂಚನೆ ನೀಡಿದೆ.
ಒಂದೇ ತಿಂಗಳಲ್ಲಿ ಕೇಂದ್ರದಿಂದ ಎರಡು ಭಾರಿ ಹೊಡೆತ
ವಿದೇಶಿ ಲೋಹಗಳ ಮೇಲಿನ ದೇಶದ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಭಾರತದ ವಿದೇಶಿ ವಿನಿಮಯ ಗಳಿಕೆಯ (Forex Reserves) ಮೇಲಿನ ಒತ್ತಡವನ್ನು ತಗ್ಗಿಸಲು ಕೇಂದ್ರ ಸರ್ಕಾರ ಕೇವಲ ಒಂದು ತಿಂಗಳ ಅವಧಿಯಲ್ಲಿ ಕೈಗೊಂಡಿರುವ ಎರಡನೇ ದೊಡ್ಡ ಕಠಿಣ ಕ್ರಮ ಇದಾಗಿದೆ.
ಮೇ 13ರ ಆಮದು ಸುಂಕ ಏರಿಕೆ: ಕೇವಲ ಮೂರು ವಾರಗಳ ಹಿಂದಷ್ಟೇ (ಮೇ 13 ರಂದು) ಕೇಂದ್ರ ಸರ್ಕಾರವು ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು ಶೇ. 6 ರಿಂದ ಶೇ. 15 ಕ್ಕೆ ಅಂದರೆ ದುಪ್ಪಟ್ಟಿಗಿಂತಲೂ ಹೆಚ್ಚು ಏರಿಕೆ ಮಾಡಿ ಆಘಾತ ನೀಡಿತ್ತು.
ಜೂನ್ 2ರ ಲೈಸೆನ್ಸ್ ಕಡ್ಡಾಯ: ಆ ಸುಂಕ ಏರಿಕೆಯ ಬಿಸಿ ಆರುವ ಮುನ್ನವೇ, ಈಗ ಮಂಗಳವಾರ ಬಿಡುಗಡೆ ಮಾಡಲಾದ ಹೊಸ ನೋಟಿಫಿಕೇಶನ್ ಪ್ರಕಾರ, ಆರ್‌ಬಿಐ ಸೂಚಿಸಿದ ಬ್ಯಾಂಕ್‌ಗಳು ಅಥವಾ ಐಐಬಿಎಕ್ಸ್ (IIBX) ಮೂಲಕ ನೇರವಾಗಿ ಬೆಳ್ಳಿ ತರುತ್ತಿದ್ದ ಕ್ವಾಲಿಫೈಡ್ ಜ್ಯುವೆಲ್ಲರ್ಸ್‌ಗಳು ಇನ್ಮುಂದೆ ಡಿಜಿಎಫ್‌ಟಿ (DGFT) ಲೈಸೆನ್ಸ್ ಇಲ್ಲದೆ ಒಂದು ಗ್ರಾಂ ಬೆಳ್ಳಿಯನ್ನೂ ದೇಶದೊಳಗೆ ತರುವಂತಿಲ್ಲ ಎಂದು ಕಡ್ಡಾಯಗೊಳಿಸಲಾಗಿದೆ.
ಈ ಪ್ರಮುಖ ಜ್ಯುವೆಲ್ಲರಿ ಮತ್ತು ಮೆಟಲ್ ಷೇರುಗಳ ಮೇಲೆ ಬಿಗ್ ಎಫೆಕ್ಟ್
ಕೇಂದ್ರ ಸರ್ಕಾರದ ಈ ಹಠಾತ್ ನಿರ್ಧಾರದಿಂದಾಗಿ ಇಂದು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲಾದ ಹಲವು ದೈತ್ಯ ಬ್ರ್ಯಾಂಡ್‌ಗಳ ಷೇರುಗಳ ದರದಲ್ಲಿ ಭಾರಿ ಏರಿಳಿತ ನಿರೀಕ್ಷಿಸಲಾಗಿದೆ.
ತಲ್ಲಣಿಸಲಿರುವ ಪ್ರಮುಖ ಜ್ಯುವೆಲ್ಲರಿ ಬ್ರ್ಯಾಂಡ್‌ಗಳು:
ಕೇಂದ್ರದ ಹೊಸ ನಿಯಮದಿಂದಾಗಿ ಪ್ರಸಿದ್ಧ ಜ್ಯುವೆಲ್ಲರಿ ಕಂಪನಿಗಳಾದ ಟೈಟನ್ (Titan), ಕಲ್ಯಾಣ್ ಜ್ಯುವೆಲ್ಲರ್ಸ್ ಪಿಸಿ ಜ್ಯುವೆಲ್ಲರ್ ಮತ್ತು ಸೆನ್ಕೋ ಗೋಲ್ಡ್ ಸೇರಿದಂತೆ ಇನ್ನುಳಿದ ಪ್ರಮುಖ ಆಭರಣ ತಯಾರಿಕಾ ಸಂಸ್ಥೆಗಳ ವ್ಯವಹಾರದ ಮೇಲೆ ನೇರ ಪರಿಣಾಮ ಬೀರಲಿದ್ದು, ಇಂದು ಇವುಗಳ ಷೇರು ದರದಲ್ಲಿ ಭಾರಿ ಬದಲಾವಣೆ ಕಂಡುಬರಲಿದೆ.
ಮೆಟಲ್ (ಲೋಹ) ವಲಯದ ಕಂಪನಿಗಳಿಗೂ ಬಿಸಿ:
ಕೇವಲ ಆಭರಣ ಉದ್ಯಮ ಮಾತ್ರವಲ್ಲದೆ, ದೇಶದ ಪ್ರಮುಖ ಲೋಹ ಹಾಗೂ ಉಕ್ಕು ಉತ್ಪಾದನಾ ಸಂಸ್ಥೆಗಳಾದ ವೇದಾಂತ (Vedanta), ಹಿಂದುಸ್ತಾನ್ ಜಿಂಕ್ (Hindustan Zinc), ನalco (Nalco), ಹಿಂಡಾಲ್ಕೊ (Hindalco), ಸೈಲ್ (SAIL), ಜಿಂದಾಲ್ ಸ್ಟೀಲ್ (Jindal Steel), ಜೆಎಸ್‌ಡಬ್ಲ್ಯೂ ಸ್ಟೀಲ್ (JSW Steel), ಎನ್‌ಎಂಡಿಸಿ (NMDC) ಮತ್ತು ಲಾಯ್ಡ್ಸ್ ಮೆಟಲ್ಸ್ (Lloyds Metals) ಕಂಪನಿಗಳ ಷೇರುಗಳು ಕೂಡ ಇಂದಿನ ಮಾರುಕಟ್ಟೆ ವಹಿವಾಟಿನಲ್ಲಿ ಭಾರಿ ಪ್ರಭಾವಕ್ಕೆ ಒಳಗಾಗುವ ಸಾಧ್ಯತೆಯಿದೆ.
ಡಿಜಿಎಫ್‌ಟಿ ನೋಟಿಫಿಕೇಶನ್‌ನಲ್ಲಿ ಏನಿದೆ?
ಶೇ. 99.9 ಅಥವಾ ಅದಕ್ಕಿಂತ ಹೆಚ್ಚು ಶುದ್ಧತೆ ಹೊಂದಿರುವ ಬೆಳ್ಳಿ ಕಣಗಳು (Silver grains), ಪೌಡರ್ ರೂಪದ ಬೆಳ್ಳಿ, ಕಚ್ಚಾ ಅಥವಾ ಅರೆ-ತಯಾರಿಕಾ ಹಂತದಲ್ಲಿರುವ ಬೆಳ್ಳಿ ಮತ್ತು ಚಿನ್ನ ಅಥವಾ ಪ್ಲಾಟಿನಂ ಲೇಪಿತ ಬೆಳ್ಳಿಯ ಆಮದನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗುತ್ತಿದೆ. ಆರ್‌ಬಿಐ ನೋಟಿಫೈ ಮಾಡಿದ ಬ್ಯಾಂಕ್‌ಗಳು ಅಥವಾ ಐಎಫ್‌ಎಸ್‌ಸಿಎ (IFSCA) ಅಡಿಯಲ್ಲಿ ಇಂಡಿಯಾ ಇಂಟರ್ನ್ಯಾಷನಲ್ ಬುಲಿಯನ್ ಎಕ್ಸ್‌ಚೇಂಜ್ (IIBX) ಮೂಲಕ ಆಮದು ಮಾಡಿಕೊಳ್ಳುವ ಜ್ಯುವೆಲ್ಲರ್ಸ್‌ಗಳಿಗೆ ಅನುಮತಿ ಇದ್ದರೂ ಸಹ, ಇನ್ಮುಂದೆ ಅವರು ಕಡ್ಡಾಯವಾಗಿ ಡಿಜಿಎಫ್‌ಟಿ (DGFT) ಹೊರಡಿಸುವ ಮಾನ್ಯ ಆಮದು ಅಧಿಕಾರ ಪತ್ರವನ್ನು ಹಾಜರುಪಡಿಸಬೇಕಾಗುತ್ತದೆ, ಎಂದು ನಿರ್ದೇಶನಾಲಯದ ಅಧಿಸೂಚನೆ ಸ್ಪಷ್ಟಪಡಿಸಿದೆ.
ಕೇಂದ್ರದ ಈ ನಿಯಂತ್ರಣ ನೀತಿಯಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಬೆಳ್ಳಿಯ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆಯೇ ಮತ್ತು ಇದು ಮುಂಬರುವ ದಿನಗಳಲ್ಲಿ ಆಭರಣಗಳ ಬೆಲೆಯನ್ನು ಮತ್ತಷ್ಟು ಹೆಚ್ಚಿಸಲಿದೆಯೇ ಎಂಬ ಆತಂಕ ಸದ್ಯ ಹೂಡಿಕೆದಾರರಲ್ಲಿ ಮನೆಮಾಡಿದೆ.