ಬೆಂಗಳೂರು: ರಾಜ್ಯದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ತಂತ್ರಜ್ಞಾನ ಆಧಾರಿತ ಕ್ರಾಂತಿಗೆ ನಾಂದಿ ಹಾಡಿರುವ ಸರ್ಕಾರ, ಕೆಎಸ್‌ಆರ್‌ಟಿಸಿ, ವಾಯವ್ಯ, ಕಲ್ಯಾಣ ಕರ್ನಾಟಕ ಹಾಗೂ ಬಿಎಂಟಿಸಿ ಸಾರಿಗೆ ನಿಗಮಗಳನ್ನು ಒಂದೇ ಸೂರಿನಡಿ ತರುವ 'ಒಂದು ಕರ್ನಾಟಕ ಮೊಬಿಲಿಟಿ ಆಪ್' ಅನ್ನು ಬಿಡುಗಡೆ ಮಾಡಿದೆ.
ಇದರೊಂದಿಗೆ ಪ್ರಯಾಣಿಕರು ಸುಲಭವಾಗಿ ವಾಟ್ಸಾಪ್ ಮೂಲಕವೇ ಬಸ್ ಟಿಕೆಟ್ ಕಾಯ್ದಿರಿಸುವ ಮತ್ತು ರದ್ದುಪಡಿಸುವ ವಿನೂತನ ವ್ಯವಸ್ಥೆಯನ್ನೂ ಆರಂಭಿಸಲಾಗಿದೆ. ವಿಧಾನಸೌಧದಲ್ಲಿ ಆಯೋಜಿಸಲಾಗಿದ್ದ ಸರ್ಕಾರದ 100 ದಿನಗಳ ಸಂಭ್ರಮಾಚರಣೆ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಈ ನೂತನ ಡಿಜಿಟಲ್ ಸೇವೆಗಳಿಗೆ ಅಧಿಕೃತ ಚಾಲನೆ ನೀಡಿದರು.
ಒಂದೇ ಮೊಬೈಲ್ ವೇದಿಕೆಯಲ್ಲಿ ಸಮಗ್ರ ಸಾರಿಗೆ ಸೇವೆ
ಆಧುನಿಕ ಹಾಗೂ ಬಳಕೆದಾರ ಸ್ನೇಹಿ ವಿನ್ಯಾಸ ಹೊಂದಿರುವ 'ಒಂದು ಕರ್ನಾಟಕ ಮೊಬಿಲಿಟಿ ಆಪ್' ಮೂಲಕ ರಾಜ್ಯದ ನಾಲ್ಕೂ ಸಾರಿಗೆ ಸಂಸ್ಥೆಗಳ ಸೇವೆಗಳು ಪ್ರಯಾಣಿಕರಿಗೆ ಲಭ್ಯವಾಗಲಿವೆ. ಸುರಕ್ಷಿತ ಲಾಗಿನ್, ಪ್ರಯಾಣಿಕರ ಗುರುತಿನ ದೃಢೀಕರಣ, ಹಿಂದಿನ ಬುಕಿಂಗ್ ವಿವರ ಹಾಗೂ ವಹಿವಾಟು ನಿರ್ವಹಣೆ ಸೇರಿದಂತೆ ಹಲವು ಸೌಲಭ್ಯಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಯಾವುದೇ ಸಾರಿಗೆ ನಿಗಮಕ್ಕೆ ಸಂಬಂಧಿಸಿದ ದೂರುಗಳನ್ನು ಒಂದೇ ವೇದಿಕೆಯಲ್ಲಿ ದಾಖಲಿಸಿ, ಪರಿಹಾರದ ಹಂತಗಳನ್ನು ಟ್ರ್ಯಾಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಕ್ಯೂಆರ್ ಕೋಡ್ ಆಧಾರಿತ ಡಿಜಿಟಲ್ ಮಾಸಿಕ ಪಾಸ್ ವಿತರಣೆ ಮತ್ತು ನವೀಕರಣ ಸೌಲಭ್ಯವೂ ಈ ಆಪ್ ಮೂಲಕವೇ ದೊರೆಯಲಿದೆ.
ವಾಟ್ಸಾಪ್ ಮೂಲಕ ಟಿಕೆಟ್ ಬುಕ್ ಮಾಡುವುದು ಹೇಗೆ?
ಪ್ರಯಾಣಿಕರು ತಮ್ಮ ಮೊಬೈಲ್‌ನಿಂದ +91 6364940880 ಸಂಖ್ಯೆಗೆ ಸಂದೇಶ ಕಳುಹಿಸುವ ಮೂಲಕ ನೇರವಾಗಿ KSRTC, NWKRTC ಹಾಗೂ KKRTC ಬಸ್‌ಗಳ ಟಿಕೆಟ್ ಬುಕ್ ಮಾಡಬಹುದು. ಸಂದೇಶ ಕಳುಹಿಸಿದ ತಕ್ಷಣ ವಾಟ್ಸಾಪ್‌ನ ಸಂವಾದಾತ್ಮಕ ವ್ಯವಸ್ಥೆಯು ಮಾರ್ಗದರ್ಶನ ನೀಡಲಿದ್ದು, ಆರಂಭಿಕ ಸ್ಥಳ, ಗಮ್ಯಸ್ಥಾನ ಹಾಗೂ ಪ್ರಯಾಣದ ದಿನಾಂಕ ನಮೂದಿಸಿ ಲಭ್ಯವಿರುವ ಬಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಯುಪಿಐ, ಕ್ರೆಡಿಟ್/ಡೆಬಿಟ್ ಕಾರ್ಡ್ ಅಥವಾ ವಾಲೆಟ್‌ಗಳ ಮೂಲಕ ಹಣ ಪಾವತಿಸಿದ ತಕ್ಷಣವೇ ಇ-ಟಿಕೆಟ್ ವಾಟ್ಸಾಪ್ ಮತ್ತು ಇ-ಮೇಲ್ ಮುಖಾಂತರ ತಲುಪಲಿದೆ.
ರದ್ದತಿಗೂ ವಾಟ್ಸಾಪ್ ನಲ್ಲೇ ಅವಕಾಶ
ವಾಟ್ಸಾಪ್ ಮೂಲಕ ಪಡೆದ ಟಿಕೆಟ್‌ಗಳನ್ನು ರದ್ದುಪಡಿಸಲು ಸಹ ಇದೇ ವ್ಯವಸ್ಥೆ ಅನುಕೂಲ ಕಲ್ಪಿಸಿದೆ. ಪ್ರಯಾಣಿಕರು ಅದೇ ಸಂಖ್ಯೆಗೆ ಸಂದೇಶ ಕಳುಹಿಸಿ ‘Ticket Cancellation’ ಆಯ್ಕೆಯನ್ನು ಆಯ್ದುಕೊಂಡು, ತಮ್ಮ ಪಿಎನ್‌ಆರ್ (PNR) ಸಂಖ್ಯೆ, ನೋಂದಾಯಿತ ಮೊಬೈಲ್ ಸಂಖ್ಯೆ ಹಾಗೂ ವಹಿವಾಟಿನ ಪಾಸ್‌ವರ್ಡ್ (Transaction Password) ನಮೂದಿಸಿ ಸುಲಭವಾಗಿ ಟಿಕೆಟ್ ರದ್ದುಪಡಿಸಬಹುದು.
ಸಹಾಯವಾಣಿ ಸಂಪರ್ಕ ವಿವರ
ಈ ಡಿಜಿಟಲ್ ಕ್ರಾಂತಿಯು ಭವಿಷ್ಯದ ಏಕೀಕೃತ ಮೊಬಿಲಿಟಿ ವ್ಯವಸ್ಥೆಗೆ ಭದ್ರ ಬುನಾದಿ ಹಾಕಲಿದೆ ಎಂದು ನಿಗಮ ತಿಳಿಸಿದೆ. ಟಿಕೆಟ್ ಬುಕಿಂಗ್ ಅಥವಾ ಯಾವುದೇ ತಾಂತ್ರಿಕ ನೆರವಿಗಾಗಿ ಸಾರ್ವಜನಿಕರು ಕೆಎಸ್‌ಆರ್‌ಟಿಸಿಯ ದಿನದ 24 ಗಂಟೆಯ ಕಾಲ್ ಸೆಂಟರ್ ಸಂಖ್ಯೆ 080-26252625 ಅಥವಾ ಅವತಾರ್ (AWATAR) ಕಂಟ್ರೋಲ್ ರೂಂ ಸಂಖ್ಯೆಗಳಾದ 7760990034 / 7760990035 (ಬೆಳಿಗ್ಗೆ 7:00 ರಿಂದ ರಾತ್ರಿ 10:00 ರವರೆಗೆ) ಗೆ ಸಂಪರ್ಕಿಸಬಹುದು.