LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

BIG NEWS: ಬೆಂಗಳೂರಿನ ಕೆರೆಗಳ ರಕ್ಷಣೆಗೆ ಸಚಿವ ರಾಮಲಿಂಗಾರೆಡ್ಡಿ ಕಟ್ಟುನಿಟ್ಟಿನ ಕ್ರಮ: STP ಸುಧಾರಣೆಗೆ 30 ದಿನಗಳ ಡೆಡ್ ಲೈನ್ ಫಿಕ್ಸ್!

ಬೆಂಗಳೂರು: ರಾಜಧಾನಿಯ ಜಲಮೂಲಗಳು ಸಂಸ್ಕರಿಸದ ಕೊಳಚೆ ನೀರಿನಿಂದ ಕಲುಷಿತಗೊಳ್ಳುವುದನ್ನು ತಡೆಗಟ್ಟಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಕೆಎಸ್‌ಪಿಸಿಬಿ) ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಪರಿಸರ ಭವನದ ತೇಜಸ್ವಿ ಸಭಾಂಗಣದಲ್ಲಿ ಗುರುವಾರ ಜರುಗಿದ ಉನ್ನತ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ, ನಗರದ ತ್ಯಾಜ್ಯನೀರು ಸಂಸ್ಕರಣಾ ಘಟಕಗಳ (ಎಸ್‌ಟಿಪಿ) ನಿರ್ವಹಣೆ ಮತ್ತು ಹೊಸ ಯೋಜನೆಗಳ ಕುರಿತು ಸಮಗ್ರ ಚರ್ಚೆ ನಡೆಸಲಾಯಿತು.

ನಿತ್ಯ 1,215 ಎಂಎಲ್‌ಡಿ ಸಂಸ್ಕರಿಸದ ತ್ಯಾಜ್ಯನೀರು ಜಲಮೂಲಗಳಿಗೆ

ಜಲಮಂಡಳಿಯ ಅಂಕಿ-ಅಂಶಗಳ ಪ್ರಕಾರ, ನಗರಕ್ಕೆ ಪ್ರತಿದಿನ ಕಾವೇರಿ ಮತ್ತು ಬೋರ್‌ವೆಲ್‌ಗಳ ಮೂಲಕ ಒಟ್ಟು 2,825 ಎಂಎಲ್‌ಡಿ ನೀರು ಪೂರೈಕೆಯಾಗುತ್ತಿದ್ದು, ಅದರಲ್ಲಿ ಬರೋಬ್ಬರಿ 2,580 ಎಂಎಲ್‌ಡಿ ತ್ಯಾಜ್ಯನೀರು ಉತ್ಪತ್ತಿಯಾಗುತ್ತಿದೆ. ಆದರೆ, ಪ್ರಸ್ತುತ ಕಾರ್ಯಾಚರಣೆಯಲ್ಲಿರುವ 37 ಎಸ್‌ಟಿಪಿಗಳ ಒಟ್ಟು ಸಾಮರ್ಥ್ಯ ಕೇವಲ 1,364.5 ಎಂಎಲ್‌ಡಿ ಮಾತ್ರವಿದೆ. ಇದರಿಂದಾಗಿ ಪ್ರತಿದಿನ ಸುಮಾರು 1,215.5 ಎಂಎಲ್‌ಡಿ ಪ್ರಮಾಣದಷ್ಟು ಕೊಳಚೆ ನೀರು ಸಂಸ್ಕರಣೆಯಾಗದೆ ಉಳಿಯುತ್ತಿರುವುದು ಗಂಭೀರ ಕಳವಳಕ್ಕೆ ಕಾರಣವಾಗಿದೆ.

ಹೊಸ ಎಸ್‌ಟಿಪಿ ಕಾಮಗಾರಿಗಳ ಕಾಲಮಿತಿ ನಿಗದಿ

ತ್ಯಾಜ್ಯನೀರು ಸಂಸ್ಕರಣೆಯ ಅಂತರವನ್ನು ಸರಿದೂಗಿಸಲು 1,147 ಎಂಎಲ್‌ಡಿ ಸಾಮರ್ಥ್ಯದ 42 ಹೊಸ ಎಸ್‌ಟಿಪಿ ಕಾಮಗಾರಿಗಳು ಹಾಗೂ ಹಳೆಯ ಘಟಕಗಳ 60 ಎಂಎಲ್‌ಡಿ ಸಾಮರ್ಥ್ಯ ವಿಸ್ತರಣೆ ಕಾರ್ಯಗಳು ಪ್ರಗತಿಯಲ್ಲಿವೆ. ಇವುಗಳನ್ನು ಹಂತಹಂತವಾಗಿ ಪೂರ್ಣಗೊಳಿಸಲು ಕಾಲಮಿತಿ ನಿಗದಿಪಡಿಸಲಾಗಿದೆ. 2026ರ ಡಿಸೆಂಬರ್ ವೇಳೆಗೆ 51 ಎಂಎಲ್‌ಡಿ ಸಾಮರ್ಥ್ಯದ 7 ಘಟಕಗಳು ಹಾಗೂ 2027ರ ಡಿಸೆಂಬರ್ ಅಂತ್ಯಕ್ಕೆ 413 ಎಂಎಲ್‌ಡಿ ಸಾಮರ್ಥ್ಯದ 17 ಘಟಕಗಳು ಲೋಕಾರ್ಪಣೆಯಾಗಲಿವೆ. ಉಳಿದಂತೆ 2028ರ ಡಿಸೆಂಬರ್‌ಗೆ 148 ಎಂಎಲ್‌ಡಿ ಸಾಮರ್ಥ್ಯದ 9 ಘಟಕಗಳು ಮತ್ತು 2029ರ ಡಿಸೆಂಬರ್ ವೇಳೆಗೆ 535 ಎಂಎಲ್‌ಡಿ ಸಾಮರ್ಥ್ಯದ 9 ಘಟಕಗಳ ನಿರ್ಮಾಣ ಪೂರ್ಣಗೊಳ್ಳಲಿದೆ.

ನಿಯಮ ಪಾಲಿಸದ ಘಟಕಗಳಿಗೆ 30 ದಿನಗಳ ಗಡುವು

ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕೆಲವು ಸರ್ಕಾರಿ ಎಸ್‌ಟಿಪಿಗಳು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ) ಹಾಗೂ ಕೆಎಸ್‌ಪಿಸಿಬಿ ನಿಗದಿಪಡಿಸಿದ ಗುಣಮಟ್ಟದ ಮಾನದಂಡಗಳನ್ನು ಪಾಲಿಸುತ್ತಿಲ್ಲ ಎಂಬ ಅಂಶವನ್ನು ಸಚಿವರು ಗಂಭೀರವಾಗಿ ಪರಿಗಣಿಸಿದ್ದಾರೆ. ಅಂತಹ ಘಟಕಗಳು ಮುಂದಿನ 30 ದಿನಗಳ ಒಳಗಾಗಿ ನಿಯಮಾನುಸಾರ ಕಾರ್ಯನಿರ್ವಹಿಸುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಜಲಮಂಡಳಿಗೆ ಎಚ್ಚರಿಕೆ ನೀಡಿದ್ದಾರೆ.

ಅಪಾರ್ಟ್‌ಮೆಂಟ್‌, ಆಸ್ಪತ್ರೆಗಳ ಖಾಸಗಿ ಎಸ್‌ಟಿಪಿಗಳ ತಪಾಸಣೆ

ಕೇವಲ ಸರ್ಕಾರಿ ಘಟಕಗಳಷ್ಟೇ ಅಲ್ಲದೆ, ನಗರದ ಖಾಸಗಿ ಅಪಾರ್ಟ್‌ಮೆಂಟ್‌ಗಳು, ಶಿಕ್ಷಣ ಸಂಸ್ಥೆಗಳು, ವಾಣಿಜ್ಯ ಸಂಕೀರ್ಣಗಳು, ಆಸ್ಪತ್ರೆಗಳು ಹಾಗೂ ಕಚೇರಿ ಕಟ್ಟಡಗಳಲ್ಲಿರುವ ಎಸ್‌ಟಿಪಿಗಳ ಮೇಲೆ ನಿಗಾ ಇಡಲು ಕೆಎಸ್‌ಪಿಸಿಬಿಗೆ ಆದೇಶಿಸಲಾಗಿದೆ. ಈ ಎಲ್ಲಾ ಖಾಸಗಿ ಘಟಕಗಳು ನಿಗದಿತ ಪರಿಸರ ಮಾನದಂಡಗಳಂತೆ ಸರಿಯಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ತಪಾಸಣೆ ನಡೆಸುವಂತೆ ಸೂಚಿಸಲಾಗಿದೆ.

ರಾಜಕಾಲುವೆಗೆ ಕೊಳಚೆ ನೀರು ತಡೆ ಹಾಗೂ ಕೈಗಾರಿಕಾ ತಪಾಸಣೆ

ಮಳೆನೀರು ಹರಿಯುವ ರಾಜಕಾಲುವೆಗಳಿಗೆ ಒಳಚರಂಡಿ ನೀರು ಮಿಶ್ರಣವಾಗುವುದನ್ನು ತಕ್ಷಣ ತಡೆಯಬೇಕೆಂದು ಸಚಿವರು ತಾಕೀತು ಮಾಡಿದ್ದಾರೆ. ಇದಕ್ಕಾಗಿ ಬಿಟ್ಟುಹೋಗಿರುವ ಚರಂಡಿ ಪೈಪ್‌ಲೈನ್‌ಗಳನ್ನು ಜೋಡಿಸಿ, ತ್ಯಾಜ್ಯನೀರು ನೇರವಾಗಿ ಸಂಸ್ಕರಣಾ ಘಟಕಗಳಿಗೆ ತಲುಪುವಂತೆ ಮಾಡಬೇಕು ಮತ್ತು ಹಾಳಾದ ಮ್ಯಾನ್‌ಹೋಲ್‌ಗಳನ್ನು ತಕ್ಷಣ ದುರಸ್ತಿಪಡಿಸಬೇಕು.

ಜತೆಗೆ ಪೀಣ್ಯ, ಜಿಗಣಿ ಸೇರಿದಂತೆ ಕೈಗಾರಿಕಾ ಪ್ರದೇಶಗಳಿಂದ ಹೊರಬರುವ ದ್ರವ ಹಾಗೂ ಘನತ್ಯಾಜ್ಯ ನಿರ್ವಹಣೆ ಕುರಿತು ಜಲಮಂಡಳಿ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಜಂಟಿ ಸ್ಥಳ ಪರಿಶೀಲನೆ ನಡೆಸಲು ತೀರ್ಮಾನಿಸಲಾಗಿದೆ. ನಗರದಲ್ಲಿ ಒಳಚರಂಡಿ ಜಾಲವಿದ್ದರೂ ಸಂಪರ್ಕ ಪಡೆಯದ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿ, ಅಕ್ರಮ ಸಂಪರ್ಕಗಳನ್ನು ಪತ್ತೆಹಚ್ಚಿ ಸಕ್ರಮಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು..

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮಂಡ್ಯದ ಬಸರಾಳು ಕೆರೆಯಲ್ಲಿ ಸಾವಿರಾರು ಮೀನುಗಳ ಮಾರಣಹೋಮ: ನೀರಿಲ್ಲದೆ ಬರದ ಭೀತಿ, ಕಣ್ಣೀರಿಡುತ್ತಿರುವ ಗ್ರಾಮಸ್ಥರುಮಂಡ್ಯ ಜಿಲ್ಲಾ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಕುಮಾರ್ ಕೊಪ್ಪ ನೇಮಕಮಂಡ್ಯದ ಕೆ.ಆರ್ ಪೇಟೆಯಲ್ಲಿ ಮೊರಾರ್ಜಿ ಶಾಲೆಯಲ್ಲಿ ಕಲುಷಿತ ಆಹಾರ ಸೇವಿಸಿ ಮಕ್ಕಳು ಅಸ್ವಸ್ಥ: ಆಸ್ಪತ್ರೆಗೆ ದಾಖಲುಮದ್ದೂರಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ರೈತ ಕುಟುಂಬದಿಂದ ಉಪವಾಸ ಸತ್ಯಾಗ್ರಹಕೇಂದ್ರ ಸರ್ಕಾರ ಜಾರಿಗೊಳಿಸಿರುವ ರಾಷ್ಟ್ರವ್ಯಾಪಿ ಹದಿಹರೆಯದ ಬಾಲಕಿಯರಿಗೆ ಎಚ್‌ಐವಿ ಲಸಿಕೆ ವಿರುದ್ಧದ ಅರ್ಜಿ ವಜಾಗೊಳಿಸಿದ ಸುಪ್ರೀಂಹೆದ್ದಾರಿ ಇಷ್ಟೊಂದು ತಡವಾಗಿ ನಿರ್ಮಾಣವಾಗಿರುವುದಕ್ಕೆ ನನಗೆ ನಾಚಿಕೆಯಾಗ್ತಿದೆ, ಇನ್ನುಮುಂದೆ ನಾನು ಉದ್ಘಾಟನೆ ಮಾಡಲ್ಲ: ನಿತಿನ್ ಗಡ್ಕರಿಎಎಪಿ ರಾಷ್ಟ್ರೀಯ ಸಂಚಾಲಕರಾಗಿ ಮುಂದುವರೆದ ಕೇಜ್ರಿವಾಲ್‌ಬಲಿಷ್ಠ ಕರ್ನಾಟಕಕ್ಕೆ ನವ ಸಂಕಲ್ಪ: ಸಿಎಂ ಡಿ.ಕೆ.ಶಿವಕುಮಾರ್ಕರ್ನಾಟಕದಲ್ಲಿ ಉರ್ದು ಮಾಧ್ಯಮ ಶಿಕ್ಷಣದ ಸ್ಥಿತಿಗತಿ: ‘ಅಧ್ಯಯನ ವರದಿ-2025’ ಸ್ವೀಕರಿಸಿದ ಸಚಿವ ಮಧು ಬಂಗಾರಪ್ಪಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಬೆಂಗಳೂರು ಮತ್ತು ತಿರುನೆಲ್ವೇಲಿ ನಡುವೆ ವಿಶೇಷ ರೈಲುಗಳ ಸಂಚಾರ