ಮಂಡ್ಯ : ಜಿಲ್ಲಾ ಕಾಂಗ್ರೆಸ್ ಸಮಿತಿ ನೂತನ ಅಧ್ಯಕ್ಷರನ್ನಾಗಿ ಕುಮಾರ್ ಕೊಪ್ಪ ಅವರನ್ನು ನೇಮಕ ಮಾಡಲಾಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಸ್ಥಳೀಯ ಸಂಸ್ಥೆ ಹಾಗೂ ಮುಂಬರುವ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲೇ ಅಧ್ಯಕ್ಷರನ್ನು ಬದಲಾವಣೆ ಮಾಡುವ ಮೂಲಕ ದಲಿತ ಜನಾಂಗದ ಮುಖಂಡನಿಗೆ ಅವಕಾಶ ಕಲ್ಪಿಸಿದ್ದು, ಪಕ್ಷ ಸಂಘಟನೆಗೆ ವರಿಷ್ಠರು ಒತ್ತು ನೀಡಿದ್ದಾರೆ.
ಜಿಲ್ಲೆಗೆ ನಿಯೋಜಿಸಲಾಗಿದ್ದ ಎಐಸಿಸಿ ವೀಕ್ಷಕರು ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಇತರ ಪ್ರಮುಖರೊಂದಿಗೆ ಸಮಗ್ರವಾಗಿ ಚರ್ಚೆ ನಡೆಸಿದ್ದರು.
ಪಕ್ಷದ ಸಂಘಟನೆ, ಕಾರ್ಯಚಟುವಟಿಕೆಗಳು ಹಾಗೂ ಮುಖಂಡರು, ಕಾರ್ಯಕರ್ತರ ಅಭಿಪ್ರಾಯಗಳನ್ನು ಪರಿಶೀಲಿಸಿದ ಬಳಿಕ ಎಐಸಿಸಿ ವೀಕ್ಷಕರು ತಮ್ಮ ಸಮಗ್ರ ವರದಿಗಳನ್ನು ಸಲ್ಲಿಸಿದ್ದರು. ವರದಿಗಳ ಸಲ್ಲಿಕೆಯ ನಂತರ ಪ್ರತಿ ವೀಕ್ಷಕರೊಂದಿಗೆ ಪ್ರತ್ಯೇಕವಾಗಿ ಚರ್ಚೆ ನಡೆಸಿ ಹಿರಿಯ ಕಾಂಗ್ರೆಸ್ ನಾಯಕರೊಂದಿಗೂ ಸಮಾಲೋಚನೆ ನಡೆಸಿದ ಬಳಿಕ ಅಂತಿಮವಾಗಿ ಕುಮಾರ್ ಕೊಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.
ಮದ್ದೂರು ತಾಲೂಕಿನ ಕೊಪ್ಪ ಗ್ರಾಮದ ಕುಮಾರ್ ಅವರು ಜಲ ಸಂಪನ್ಮೂಲ ಸಚಿವರಾದ ಎನ್.ಚಲುವರಾಯಸ್ವಾಮಿ ಅವರಿಗೆ ಅತ್ಯಾಪ್ತರಾಗಿದ್ದಾರೆ. ಮದ್ದೂರು ತಾಲೂಕು ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಗ್ರಾ.ಪಂ ಮಾಜಿ ಸದಸ್ಯರು, ನಾಗಮಂಗಲ ತಾಲೂಕು ಕಾಂಗ್ರೆಸ್ ಉಪಾಧ್ಯಕ್ಷ,
ನೀರು ಬಳಕೆದಾರರ ಸಹಕಾರ ಸಂಘದ ಅಧ್ಯಕ್ಷರು, ಪು.ತೀ.ನ ಟ್ರಸ್ಟ್ ಸದಸ್ಯರು, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಮನ್ ಮುಲ್ ಮಾಜಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಇನ್ನು ನೂತನ ಜಿಲ್ಲಾಧ್ಯಕ್ಷರಾದ ಕುಮಾರ್ ಕೊಪ್ಪ ಮಾತನಾಡಿ, ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಕಾಂಗ್ರೆಸ್ ಹೈಕಮಾಂಡ್, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಜಲ ಸಂಪನ್ಮೂಲ ಸಚಿವರಾದ ಎನ್.ಚಲುವರಾಯಸ್ವಾಮಿ, ಕೃಷಿ ಸಚಿವರಾದ ಪಿ.ಎಂ.ನರೇಂದ್ರಸ್ವಾಮಿ ಹಾಗೂ ಜಿಲ್ಲೆಯ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು, ನಿಗಮ, ಮಂಡಳಿ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರಿಗೆ ಧನ್ಯವಾದ ತಿಳಿಸಿದರು.
ಈ ಎಲ್ಲರ ಮಾರ್ಗದರ್ಶನದಲ್ಲಿ ಮುಂಬರುವ ಸ್ಥಳೀಯ ಸಂಸ್ಥೆ, ವಿಧಾನಸಭಾ ಚುನಾವಣೆಗೆ ಜಿಲ್ಲಾದ್ಯಂತ ಪ್ರವಾಸ ಕೈಗೊಂಡು 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶಕ್ತಿ ಮೀರಿ ಕೆಲಸ ಮಾಡುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದರು.
ವರದಿ : ಗಿರೀಶ್ ರಾಜ್, ಮಂಡ್ಯ