ಕೆ.ಆರ್.ಪೇಟೆ: ತಾಲೂಕಿನ ಸಾರಂಗಿ ಗ್ರಾಮದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಿಷಾಹಾರ ಸೇವನೆಯಿಂದ (ಫುಡ್ ಪಾಯಿಸನ್) ಹಲವು ವಿದ್ಯಾರ್ಥಿಗಳು ತೀವ್ರ ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ. ಅಸ್ವಸ್ಥಗೊಂಡ ಮಕ್ಕಳನ್ನು ತಕ್ಷಣವೇ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗುತ್ತಿದೆ.
ಬುಧವಾರ ರಾತ್ರಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಎಂದಿನಂತೆ ರಾತ್ರಿಯ ಊಟ ನೀಡಲಾಗಿತ್ತು. ಊಟ ಸೇವಿಸಿದ ಕೆಲವೇ ಗಂಟೆಗಳಲ್ಲಿ 9ನೇ ತರಗತಿಯ ನಾಲ್ವರು ವಿದ್ಯಾರ್ಥಿಗಳು ಸೇರಿದಂತೆ ಹಲವು ಮಕ್ಕಳಿಗೆ ನಿರಂತರ ವಾಂತಿ ಮತ್ತು ಬೇಧಿ ಕಾಣಿಸಿಕೊಂಡು ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿದೆ. ಕಲುಷಿತ ಆಹಾರ ಸೇವನೆಯೇ ಈ ಅಸ್ವಸ್ಥತೆಗೆ ಕಾರಣ ಎಂದು ಶಂಕಿಸಲಾಗಿದೆ. ಮಕ್ಕಳ ಆರೋಗ್ಯ ಕ್ಷೀಣಿಸುತ್ತಿದ್ದಂತೆ ಎಚ್ಚೆತ್ತ ಶಾಲಾ ಸಿಬ್ಬಂದಿ ಕೂಡಲೇ ಎಲ್ಲರನ್ನೂ ಕೆ.ಆರ್.ಪೇಟೆ ತಾಲೂಕು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.
ಶಾಸಕ ಹೆಚ್.ಟಿ. ಮಂಜು ಭೇಟಿ, ಪರಿಶೀಲನೆ
ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಶಾಸಕ ಹೆಚ್.ಟಿ. ಮಂಜು ಅವರು ತಾಲೂಕು ಆಸ್ಪತ್ರೆಗೆ ಹಾಗೂ ಸಾರಂಗಿ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದ ಅವರು, ಮಕ್ಕಳಿಗೆ ಸೂಕ್ತ ಮತ್ತು ತ್ವರಿತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದರು.
ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಶಾಸಕರು, ವಸತಿ ಶಾಲೆಯಲ್ಲಿ ಅಡುಗೆ ತಯಾರಿಕೆ ಮತ್ತು ಸ್ವಚ್ಛತೆಯ ಲೋಪದ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಸದ್ಯ ಆಸ್ಪತ್ರೆಗೆ ದಾಖಲಾಗಿರುವ ಎಲ್ಲ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಮುಂದುವರಿದಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.