ಪಣಜಿ- ಮುಂಬೈ-ಗೋವಾ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ವಿಳಂಬವಾಗುತ್ತಿರುವುದಕ್ಕೆ ತೀವ್ರ ಬೇಸರವಾಗುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅಸಮಾಧಾನ ಹೊರ ಹಾಕಿದ್ದಾರೆ.
ಸಮಾರಂಭದಲ್ಲಿ ಪಾಲ್ಗೊಳ್ಳದ ನಿರ್ಧಾರ
ಕಾಮಗಾರಿ ಸಂಪೂರ್ಣ ಮುಕ್ತಾಯಗೊಂಡರೂ ನಾನು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಪಣಜಿ ಸಮೀಪದ ಪೋರ್ವೊರಿಮ್‌ನಲ್ಲಿ 6 ಪಥಗಳ ಎಲಿವೇಟೆಡ್ ರಸ್ತೆ ಕಾರಿಡಾರ್ ಉದ್ಘಾಟಿಸಿ ಮಾತನಾಡಿದ ಅವರು, ಹೆದ್ದಾರಿ ಕಾಮಗಾರಿ ಇಷ್ಟೊಂದು ದೀರ್ಘಾವಧಿ ವಿಳಂಬವಾಗಿರುವುದಕ್ಕೆ ನನಗೆ ನಾಚಿಕೆಯಾಗುತ್ತಿದೆ. ಹಾಗಾಗಿಯೇ ಈ ಹೆದ್ದಾರಿಯ ಉದ್ಘಾಟನಾ ಕಾರ್ಯಕ್ರಮಕ್ಕೆ ನಾನು ಬರುವುದಿಲ್ಲ ಎಂದು ಈ ಹಿಂದೆಯೇ ನಿರ್ಧರಿಸಿದ್ದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂಬಂಧ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವುದಾಗಿ ತಿಳಿಸಿದ ಗಡ್ಕರಿ ಮುಂಬರುವ ಅಕ್ಟೋಬರ್‌ನಲ್ಲಿ ಖುದ್ದು ತಾವೇ ಮುಂಬೈ ಏರ್‌ಪೋರ್ಟ್‌ಗೆ ಬಂದು, ಅಲ್ಲಿಂದ ರಸ್ತೆ ಮಾರ್ಗವಾಗಿ ಗೋವಾಕ್ಕೆ ಪ್ರಯಾಣಿಸಿ ಹೆದ್ದಾರಿಯ ಸ್ಥಿತಿಗತಿ ಹಾಗೂ ಪ್ರಯಾಣಿಕರಿಗೆ ಆಗುತ್ತಿರುವ ಅನುಕೂಲ-ಅನನುಕೂಲಗಳನ್ನು ಪರಿಶೀಲಿಸುವುದಾಗಿ ತಿಳಿಸಿದರು.
ವಿಳಂಬದ ಕುರಿತು ಕ್ರಮ
ರಸ್ತೆ ಕಾಮಗಾರಿಗಳ ವಿಳಂಬ ಹಾಗೂ ಕಳಪೆ ಕಾಮಗಾರಿಗೆ ಕಾರಣರಾದ ಗುತ್ತಿಗೆದಾರರು ಮತ್ತು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ ಅವರು, ಒಂದು ವರ್ಷದಲ್ಲಿ ಅತಿ ಹೆಚ್ಚು ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವ ಹಾಗೂ ಬೇಜವಾಬ್ದಾರಿ ಅಧಿಕಾರಿಗಳನ್ನು ಅಮಾನತುಗೊಳಿಸುವ ಮೂಲಕ ಹೊಸ ದಾಖಲೆ ನಿರ್ಮಿಸಲು ಬಯಸಿದ್ದೇನೆ ಎಂದರು.
ಮಾರುಕಟ್ಟೆ ಹಾಗೂ ಸುರಕ್ಷತಾ ಪ್ರಶ್ನೆಗಳು
440 ಕಿ.ಮೀ ಉದ್ದದ ಮುಂಬೈ-ಗೋವಾ ಹೆದ್ದಾರಿ ಅಗಲೀಕರಣಕ್ಕೆ ಭಾರೀ ಮೊತ್ತ ಖರ್ಚು ಮಾಡಿದ್ದರೂ, ಮೊದಲ ಮಳೆಗಾಲದಲ್ಲೇ ನೂತನ ರಸ್ತೆಗಳಲ್ಲಿ ಗುಂಡಿಗಳು ಬಿದ್ದು ಹಾಳಾಗಿದ್ದಕ್ಕೆ ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದರು.ಮೇ ತಿಂಗಳಿನಿಂದ ಖಾರ್ಪದ ಟೋಲ್ ಪ್ಲಾಜಾದಲ್ಲಿ ಟೋಲ್ ಸಂಗ್ರಹ ಆರಂಭವಾಗಿದ್ದರೂ, ರಸ್ತೆಯಲ್ಲಿ ನೀರಿನ ನಿಲುಗಡೆ, ಟ್ರಾಫಿಕ್ ಜಾಮ್ ಹಾಗೂ ದುರಸ್ತಿ ಕಾರ್ಯಗಳು ಮುಂದುವರಿದಿವೆ.
2021ರಲ್ಲಿ ಕರ್ನಾಲಾ ವನ್ಯಜೀವಿ ಧಾಮದ ಬಳಿ ನಿರ್ಮಿಸಲಾಗಿದ್ದ ಮಂಕಿ ಓವರ್‌ಪಾಸ್ ಕುಸಿದುಬಿದ್ದಿದ್ದು, ಹೆದ್ದಾರಿಯಲ್ಲಿ ಸುರಕ್ಷತೆಯ ಬಗ್ಗೆ ತೀವ್ರ ಆತಂಕಕ್ಕೆ ಕಾರಣವಾಗಿದೆ.