ಮಂಡ್ಯ : ಕಳೆದ ಎರಡು ವರ್ಷಗಳಿಂದ ವಿದ್ಯುತ್ ಕಂಬಗಳನ್ನು ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸದೇ ಇರುವ ಸೆಸ್ಕ್ ಅಧಿಕಾರಿಗಳ ಕ್ರಮ ಖಂಡಿಸಿ ರೈತ ಕುಟುಂಬವೊಂದು ಮದ್ದೂರು ಸೆಸ್ಕ್ ಕಚೇರಿ ಎದುರು ಗುರುವಾರದಿಂದ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ.
ಮದ್ದೂರು ತಾಲೂಕಿನ ಸಬ್ಬನಹಳ್ಳಿ ಗ್ರಾಮದ ಮಹೇಶ್ ಹಾಗೂ ಕುಟುಂಬಸ್ಥರು ಪ್ರತಿಭಟನೆ ಕೈಗೊಂಡಿದ್ದು, ಬೇಡಿಕೆ ಈಡೇರುವ ತನಕ ಉಪವಾಸ ಸತ್ಯಾಗ್ರಹ ಹಿಂಪಡೆಯುವುದಿಲ್ಲ ಎಂದು ಸೆಸ್ಕ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ರೈತ ಮಹೇಶ್ ಮಾತನಾಡಿ, ಸಬ್ಬನಹಳ್ಳಿ ಗ್ರಾಮದಲ್ಲಿ ನನ್ನ ತಾಯಿ ಹೆಸರಿನಲ್ಲಿರುವ ಸರ್ವೆ ನಂಬರ್ 88 ರಲ್ಲಿ 30 ಗುಂಟೆ ಜಮೀನಿದೆ. ಈ ಜಮೀನಿಗೆ ನನ್ನ ಸ್ವಂತ ಹಣದಲ್ಲಿ ವಿದ್ಯುತ್ ಸಂಪರ್ಕ ಪಡೆಯಲು ಚೆಸ್ಕಾಂ ಕಛೇರಿ ನಿಯಮದಂತೆ ಹಣ ಪಾವತಿಸಿ ಆರ್.ಆರ್.ಸಂಖ್ಯೆ ಎಂಐಪಿ-13041 ಅನುಮತಿ ಪಡೆದು ನಿಗಮದವರು ಕಂಬಗಳನ್ನು ಅಳವಡಿಸಿದ್ದು, ತಂತಿಗಳನ್ನು ಸಹ ಹಾಕಿರುತ್ತಾರೆ. ಆದರೆ ನಮ್ಮ ಪಕ್ಕದ ಜಮೀನಿನವರು ಲೈನ್ ಎಳೆಯದಂತೆ ಕಿರುಕುಳ ನೀಡುವುದರ ಜೊತೆಗೆ ಕಂಬ ಮತ್ತು ತಂತಿಗಳನ್ನು ಕಳವು ಮಾಡಲಾಗಿದೆ ಎಂದು ಆರೋಪಿಸಿದರು.
ಈ ಸಂಬಂಧ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಕೂಡ ಪ್ರಕರಣ ದಾಖಲಾಗಿದೆ. ಬೇರೆಯವರ ಎರಡು ಎಕರೆ ಜಮೀನಿನಲ್ಲಿ ಕಬ್ಬು ವ್ಯವಸಾಯ ಕೂಡ ಮಾಡಿದ್ದೇನೆ. ಅದು ಕೂಡ ನೀರಿಲ್ಲದೆ ಒಣಗುತ್ತಿದೆ. ಲಕ್ಷಾಂತರ ರೂಪಾಯಿ ಕೈ ಸಾಲ ಮಾಡಿಕೊಂಡು ಜೀವನದಲ್ಲಿ ಸಾಕಷ್ಟು ನೊಂದಿದ್ದೇನೆ. ನನ್ನ ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸಕ್ಕೆ ವ್ಯವಸಾಯವನ್ನೆ ನೆಚ್ಚಿಕೊಂಡು ಬದುಕು ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ.
ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಒಣಗುತ್ತಿರುವ ಬೆಳೆಗಳಿಗೆ ನಾನು ಕೊರೆಸಿರುವ ಬೋರ್ ವೆಲ್ ನಿಂದ ನೀರು ಹರಿಸಲು ವಿದ್ಯುತ್ ಸಂಪರ್ಕವನ್ನು ವ್ಯವಸ್ಥೆ ಮಾಡಬೇಕು. ಇಲ್ಲದಿದ್ದರೆ ನಾನು ಮತ್ತು ನನ್ನ ಕುಟುಂಬ ನ್ಯಾಯಕ್ಕಾಗಿ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದು, ಬೇಡಿಕೆ ಈಡೇರವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಅಳಲು ತೋಡಿಕೊಂಡರು.
ಇದೇ ವೇಳೆ ಮಹೇಶ್ ಕುಟುಂಬದವರಾದ ವಿಶ್ವಾಸ್, ಧೃತಿ, ರೇಣುಕಾ, ಲಿಂಗರಾಜು, ಲಿಂಗಯ್ಯ ಸೇರಿದಂತೆ ಇತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ