ಬೆಂಗಳೂರು: ಸಾಮಾಜಿಕ ನ್ಯಾಯದ ಪರವಾಗಿ ಧ್ವನಿ ಎತ್ತುವವರು, ಕೋಮುವಾದದ ವಿರುದ್ಧ ಹೋರಾಡುವವರು, ಸಂವಿಧಾನವನ್ನು ರಕ್ಷಿಸುವ ಹೋರಾಟಗಾರರು ಮತ್ತು ಪ್ರಗತಿಪರ ಚಿಂತನೆ ಹೊಂದಿರುವ ಕೋಟ್ಯಾಂತರ ಕಾಂಗ್ರೆಸ್ಸೇತರ ಕಾರ್ಯಕರ್ತರೂ ನಮ್ಮ ದೇಶದ ಈ ದುರಿತ ಕಾಲದಲ್ಲಿ ನಮ್ಮೊಂದಿಗೆ ಕೈ ಜೋಡಿಸಬೇಕಿದೆ ಎಂದು ಕೆಪಿಸಿಸಿ ನೂತಮ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ರಾಜ್ಯದ ಜನತೆಗೆ ಕರೆಕೊಟ್ಟಿದ್ದಾರೆ.
ತಮ್ಮ ಸಾಮಾಜಿಕ ಜಾಲ ತಾಣ ಎಕ್ಸ್ ನಲ್ಲಿ ಸುಧೀರ್ಘವಾದ ಪೋಸ್ಟ್ ಮಾಡಿರುವ ಅವರು, ದೇಶದಲ್ಲಿ ದ್ವೇಷದ ರಾಜಕಾರಣ, ಧರ್ಮದ ಹೆಸರಿನ ಧ್ರುವೀಕರಣ ಮತ್ತು ಸಂವಿಧಾನ ವಿರೋಧಿ ಪ್ರವೃತ್ತಿಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ಸಾಮಾಜಿಕ ಸಾಮರಸ್ಯ ಮತ್ತು ಜಾತ್ಯತೀತ ಮೌಲ್ಯಗಳನ್ನು ನಿರಂತರವಾಗಿ ಪ್ರತಿಪಾದಿಸುತ್ತಾ ಬಂದಿರುವ ನನಗೆ, ದೇಶದ ದುರಿತ ಕಾಲದಲ್ಲಿ ಕಾಂಗ್ರೆಸ್ ರಾಜ್ಯ ಘಟಕದ ನೇತೃತ್ವ ಸಿಕ್ಕಿರುವುದು ಹೊಸ ಜವಾಬ್ದಾರಿ, ಸವಾಲು ನೀಡಿದಂತಾಗಿದೆ. ಈ ಸವಾಲು ಮತ್ತು ಜವಾಬ್ದಾರಿಯನ್ನು ಪಕ್ಷದ ಸೈದ್ದಾಂತಿಕ ಕಾರ್ಯಕರ್ತರ ಬಲದಿಂದ ಯಶಸ್ವಿಯಾಗಿ ಪೂರೈಸುತ್ತೇನೆ ಎಂಬ ಅಚಲ ನಂಬಿಕೆ ನನಗಿದೆ ಎಂದು ಹೇಳಿದ್ದಾರೆ.
ಹಿಂದುಳಿದ ವರ್ಗಗಳು, ದಲಿತರು, ಅಲ್ಪಸಂಖ್ಯಾತರು, ರೈತರು, ಕಾರ್ಮಿಕರು, ಮಹಿಳೆಯರು ಮತ್ತು ಯುವಜನರ ಆಶೋತ್ತರಗಳನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಹಾಗಾಗಿ ಈ ನಿಟ್ಟಿನಲ್ಲೇ ನಾನು ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಬೂತ್ ಮಟ್ಟದಿಂದ ಸಂಘಟಿಸಿ, ಸೈದ್ಧಾಂತಿಕವಾಗಿ ಬಲಪಡಿಸೋಣ. ರಾಜ್ಯದಲ್ಲಿರುವ ಸಮರ್ಥ ಸೈದ್ದಾಂತಿಕ ನಾಯಕರು, ಕಾರ್ಯಕರ್ತರು ಈ ನಿಟ್ಟಿನಲ್ಲಿ ನನ್ನ ಕೈಜೋಡಿಸಲಿದ್ದಾರೆ.ಕಾಂಗ್ರೆಸ್ಸಿಗರಾದ ನಾವೂ ಕೂಡಾ ಕಾಂಗ್ರೆಸ್ ಮತ್ತು ಕಾಂಗ್ರೆಸ್ಸೇತರ ಜಾತ್ಯಾತೀತ ಯುವ ಸಮುದಾಯವನ್ನು ಒಟ್ಟುಗೂಡಿಸಿಕೊಂಡು ಹೋಗಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಂವಿಧಾನವೇ ನಮ್ಮ ದಾರಿ, ಸಾಮಾಜಿಕ ನ್ಯಾಯವೇ ನಮ್ಮ ಗುರಿ, ಜಾತ್ಯತೀತತೆಯೇ ನಮ್ಮ ಶಕ್ತಿ ಎಂಬ ಕಾಂಗ್ರೆಸ್‍ನ ಮೂಲ ಸಂದೇಶವನ್ನು ಬಲಪಡಿಸುವ ಈ ನಿರ್ಧಾರದ ಜೊತೆ ಕಾಂಗ್ರೆಸ್ ಕಾರ್ಯಕರ್ತರು, ನಾಯಕರು, ಜಾತ್ಯಾತೀತ ಯುವ ಸಮುದಾಯ, ಕಾಂಗ್ರೆಸ್ಸೇತರ ಜಾತ್ಯಾತೀತ ಪಕ್ಷ, ಸಂಘಟನೆಗಳು ನನ್ನ ಜೊತೆ ಕೈ ಜೋಡಿಸುತ್ತದೆ ಎಂಬ ಭರವಸೆಯಲ್ಲಿ ಎಐಸಿಸಿ ನೀಡಿದ ಜವಾಬ್ದಾರಿಯನ್ನು ಒಪ್ಪಿ ನಿರ್ವಹಿಸುತ್ತೇನೆ ಎಂದು ಆಶ್ವಾಸನೆ ನೀಡಿದ್ದಾರೆ.
ಕಾಂಗ್ರೆಸ್ ನ ಕೇಂದ್ರ ನಾಯಕತ್ವದ ಈ ನಿರ್ಧಾರವು ಕೇವಲ ಒಬ್ಬ ವ್ಯಕ್ತಿಗೆ ನೀಡಿರುವ ಹುದ್ದೆಯಲ್ಲ. ಇದು ಕಾಂಗ್ರೆಸ್ ಪಕ್ಷದ ಮೂಲ ಸಿದ್ಧಾಂತಗಳಾದ ಸಾಮಾಜಿಕ ನ್ಯಾಯ, ಜಾತ್ಯತೀತತೆ, ಪ್ರಜಾಪ್ರಭುತ್ವ, ಸಂವಿಧಾನವಾದ ಮತ್ತು ದುರ್ಬಲ ವರ್ಗಗಳ ಸಬಲೀಕರಣದ ಪರವಾಗಿ ನೀಡಿರುವ ಸ್ಪಷ್ಟ ಸಂದೇಶವಾಗಿದೆ ಎಂದು ನಾನು ಭಾವಿಸುತ್ತೇನೆ.ದೀರ್ಘಕಾಲದಿಂದ ಪಕ್ಷದ ವಿವಿಧ ಹಂತಗಳಲ್ಲಿ ಸೇವೆ ಸಲ್ಲಿಸಿರುವ ನಾನು ಯಾವುದೇ ಅಧಿಕಾರದ ಹುದ್ದೆಗಳಿಗಾಗಿ ರಾಜಕೀಯ ಮಾಡದೇ, ನನ್ನ ಜೀವನ ಪೂರ್ತಿ ಕಾಂಗ್ರೆಸ್ ತತ್ವಗಳ ಜಾರಿಗೆ ಮೀಸಲಿಟ್ಟಿದ್ದೇನೆ. ಅಧಿಕಾರಕ್ಕಿಂತ ಸಿದ್ಧಾಂತ ದೊಡ್ಡದು, ಹುದ್ದೆಗಿಂತ ಜನರ ಹಿತ ಮುಖ್ಯ ಎಂಬ ನಿಲುವಿನಂತೆ ನಾನು ರಾಜಕೀಯ ಬದುಕನ್ನು ಕಟ್ಟಿಕೊಂಡಿದ್ದೇನೆ. ಹಾಗಾಗಿ ಕೆಪಿಸಿಸಿ ಅಧ್ಯಕ್ಷ ಹುದ್ದೆ ಎಂಬ ಪಕ್ಷ ಕಟ್ಟುವ ಕಾಯಕವನ್ನು ಅತ್ಯಂತ ಸಂತೋಷದಿಂದ ಸ್ವೀಕರಿಸಿದ್ದೇನೆ ಎಂದು ಮೆಚ್ಚುಗೆ ಹೊರಹಾಕಿದ್ದಾರೆ.
ತಮ್ಮನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ನನ್ನನ್ನು ನೇಮಿಸಿದ ಎಐಸಿಸಿ ಅಧ್ಯಕ್ಷರಾದ ಎಂ. ಮಲ್ಲಿಕಾರ್ಜುಖರ್ಗೆ, ನನ್ನ ಮೇಲೆ ಪ್ರೀತಿ ವಿಶ್ವಾಸ ನಂಬಿಕೆ ಇರಿಸಿ ಜವಾಬ್ದಾರಿ ವಹಿಸಿದ ನನ್ನ ಅಚ್ಚುಮೆಚ್ಚಿನ ನಾಯಕಿ ಸೋನಿಯಾ ಗಾಂಧಿ, ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ, ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ , ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ವಾದ್ರಾ, ಹಾಗೂ ಕೆಪಿಸಿಸಿ ರಾಜ್ಯ ಉಸ್ತುವಾರಿ ರಣಜಿತ್ ಸಿಂಗ್ ಸರ್ಜೇವಾಲ ಅವರುಗಳಿಗೆ ಹರಿಪ್ರಸಾದ್ ಧನ್ಯವಾದ ಹೇಳಿದ್ದಾರೆ.