ಬೆಂಗಳೂರು: ರೈತರ ತೀವ್ರ ವಿರೋಧದ ನಡುವೆಯೂ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಸ್ವಪಕ್ಷದ ಶಾಸಕರೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಂಡ್ಯ ಕಾಂಗ್ರೆಸ್ ಶಾಸಕ ರವಿ ಗಣಿಗ ಸರ್ಕಾರದ ನಡೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಾವೇರಿ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ಶಾಸಕ ರವಿ ಗಣಿಗ, ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ. ನಮ್ಮ ರಾಜ್ಯದ ರೈತರಿಗೆ ಬೆಳೆಗಳಿಗೆ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾದರೆ ಸಮಸ್ಯೆ ಮತ್ತಷ್ಟು ಗಂಭೀರವಾಗಲಿದೆ. ಮೊದಲು ನಮ್ಮ ರೈತರ ಹಿತ ಕಾಯಬೇಕು ಎಂದು ಹೇಳಿದರು.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಮುಂದೆ ರಾಜ್ಯದ ನೈಜ ಪರಿಸ್ಥಿತಿಯನ್ನು ಸರ್ಕಾರ ಸಮರ್ಥವಾಗಿ ಮಂಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ನೀರಿನ ಕೊರತೆ ಇದೆ ಎಂಬುದನ್ನು ಅಂಕಿ-ಅಂಶಗಳ ಸಮೇತ ಪ್ರಾಧಿಕಾರದ ಮುಂದೆ ಬಲವಾಗಿ ಪ್ರತಿಪಾದಿಸಬೇಕು ಎಂದಿದ್ದಾರೆ.
ಇದಕ್ಕಾಗಿ ತಜ್ಞರ ತಂಡವನ್ನು CWMA ಮುಂದೆ ಕಳುಹಿಸಬೇಕು. ಜೊತೆಗೆ ತಕ್ಷಣವೇ ವಿಧಾನಸಭೆ ಅಧಿವೇಶನ ಕರೆದು, ರಾಜ್ಯದ ನೀರಿನ ಪರಿಸ್ಥಿತಿ ಬಗ್ಗೆ ಒಮ್ಮತದ ನಿರ್ಣಯ ಕೈಗೊಂಡು ಬಲವಾದ ವಾದ ಮಂಡಿಸಬೇಕು ಎಂದು ಸಲಹೆ ನೀಡಿದರು.
ತಮಿಳುನಾಡಿಗೆ ನೀರು ಬಿಡುವ ವಿಚಾರದಲ್ಲಿ ಈಗಾಗಲೇ ವಿರೋಧ ಪಕ್ಷಗಳು ಹಾಗೂ ರೈತ ಮುಖಂಡರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಆಡಳಿತ ಪಕ್ಷದ ಶಾಸಕರೇ ಸರ್ಕಾರದ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊರಹಾಕಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ.