ಬೆಂಗಳೂರು-ನಮ್ಮ ಸರ್ಕಾರ ಇಂದು ದಿವಂಗತ ದೇವರಾಜ ಅರಸು ಅವರ 111ನೆಯ ಜನ್ಮದಿನವನ್ನು ಆಚರಣೆ ಮಾಡುತ್ತಿದೆ. ಈ ದೇಶದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ, ಬಡ ಜನತೆಗಾಗಿ, ದೀನ ದಲಿತರಿಗಾಗಿ ಹೋರಾಟ ಮಾಡಿದವರಲ್ಲಿ ದೇವರಾಜ ಅರಸು ಮೊದಲಿಗರು ಎಂದು ಉಪಮುಖ್ಯಮಂತ್ರಿಗಳು ಹಾಗೂ ಕಂದಾಯ ಮತ್ತು ಕ್ರೀಡಾ ಸಚಿವರಾದ ಡಾ. ಜಿ. ಪರಮೇಶ್ವರ ಅವರು ಹೇಳಿದರು.
ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಇರುವ ದೇವರಾಜ ಅರಸು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪುಷ್ಪನಮನ ಸಲ್ಲಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ದೇವರಾಜ ಅರಸು ಅವರು ಸುದೀರ್ಘ ಕಾಲ ಮುಖ್ಯಮಂತ್ರಿಗಳಾಗಿ ಈ ರಾಜ್ಯದಲ್ಲಿ ಅನೇಕ ಐತಿಹಾಸಿಕ ಕಾರ್ಯಕ್ರಮಗಳನ್ನು ಜಾರಿ ಮಾಡುವ ಮೂಲಕ ಶೋಷಿತರು, ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಸಮುದಾಯಕ್ಕೆ ನ್ಯಾಯವನ್ನು ಒದಗಿಸುವಲ್ಲಿ ಯಶಸ್ವಿಯಾದವರು. ರೈತ ಸಮುದಾಯಕ್ಕೆ ‘ಉಳುವವನೇ ಭೂಮಿಯ ಒಡೆಯ’ ಘೋಷವಾಕ್ಯದ ಮೂಲಕ ಯಾರು ಭೂಮಿಯನ್ನು ಉಳುತ್ತಿದ್ದರೋ ಅವರಿಗೆ ಆ ಜಮೀನು, ಭೂಮಿ ಸಿಗಬೇಕು ಎಂಬ ಕಾನೂನಿನ ಮೂಲಕ ಇಡೀ ದೇಶದಲ್ಲಿ ಮೊದಲನೆಯ ಬಾರಿ ಬದಲಾವಣೆಯನ್ನು ತಂದಂತವರು. ಯುವಕರಿಗೆ ಉತ್ತಮ ಭವಿಷ್ಯವನ್ನು ಕಲ್ಪಿಸುವುದು, ಶಿಕ್ಷಣ ಸಂಸ್ಥೆಗಳು, ಹಾಸ್ಟೆಲ್ ಗಳು ಸೇರಿದಂತೆ ಬೇರೆ ಬೇರೆ ರೀತಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ರಾಜ್ಯದಲ್ಲಿ ಮಾಡಿ, ಅಮರರಾಗಿದ್ದಾರೆ ಎಂದರು.
ನಮ್ಮ ಸರ್ಕಾರ ಅವರ ಆದರ್ಶಗಳನ್ನು, ಅವರು ಹಾಕಿಕೊಟ್ಟ ಕಾರ್ಯಕ್ರಮಗಳನ್ನು ಇವತ್ತಿಗೂ ಕೂಡ ಮುಂದುವರಿಸಿಕೊಂಡು ಬರುತ್ತಿದೆ. ಮುಂದೆಯೂ ಕೂಡ ಮುಂದುವರೆಸುತ್ತೇವೆ ಎಂದು ತಿಳಿಸಿದರು