LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ವಿದ್ಯಾರ್ಥಿಗಳ ಸಮಸ್ಯೆ, ಶಿಕ್ಷಣ ಸುಧಾರಣೆಗೆ ಸಚಿವ ಸಂಪುಟ ಉಪ ಸಮಿತಿ: ಒಂದು ತಿಂಗಳಲ್ಲಿ ವರದಿ

ಬೆಂಗಳೂರು- ರಾಜ್ಯದ ವಿದ್ಯಾರ್ಥಿಗಳು ಎದುರಿಸುತ್ತಿರುವ ಪರೀಕ್ಷಾ ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ, ಹೆಚ್ಚುತ್ತಿರುವ ಶಿಕ್ಷಣ ವೆಚ್ಚ, ಕೋಚಿಂಗ್‌ ಕೇಂದ್ರಗಳ ನಿಯಂತ್ರಣ, ಸರ್ಕಾರಿ ಶಿಕ್ಷಣ ಸಂಸ್ಥೆಗಳ ಮೂಲಸೌಕರ್ಯ ಕೊರತೆ, ಉದ್ಯೋಗಕ್ಕೆ ಹೊಂದಿಕೆಯಾಗದ ಪಠ್ಯಕ್ರಮ ಹಾಗೂ ವಿದ್ಯಾರ್ಥಿಗಳ ಮಾನಸಿಕ ಒತ್ತಡ ಸೇರಿದಂತೆ ಹಲವು ಗಂಭೀರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ರಾಜ್ಯ ಸರ್ಕಾರ ಸಚಿವ ಸಂಪುಟ ಉಪ ಸಮಿತಿಯನ್ನು ರಚಿಸಿದೆ.

ಆಗಸ್ಟ್‌ 21ರಂದು ನಡೆದ ಸಚಿವ ಸಂಪುಟದ ನಿರ್ಧಾರದ ಹಿನ್ನೆಲೆಯಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ (ಸಂಪುಟ) ಜೆ. ಕುಮಾರಸ್ವಾಮಿ ಅವರು ಆಗಸ್ಟ್‌ 26ರಂದು ಈ ಕುರಿತು ಅಧಿಕೃತ ಜ್ಞಾಪನ ಹೊರಡಿಸಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಹಜ್ ಮತ್ತು ವಕ್ಫ್ ಸಚಿವ ಯು.ಟಿ. ಖಾದರ್ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಿದ್ದು, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಗೃಹ, ಐಟಿ-ಬಿಟಿ ಹಾಗೂ ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ, ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಶರಣ ಪ್ರಕಾಶ್ ಪಾಟೀಲ್ ಹಾಗೂ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸದಸ್ಯರಾಗಿದ್ದಾರೆ.

ಪರೀಕ್ಷಾ ಅಕ್ರಮಕ್ಕೆ ಕಡಿವಾಣ

*ಪರೀಕ್ಷಾ ಅಕ್ರಮಕ್ಕೆ ಕಡಿವಾಣ*

ಇತ್ತೀಚಿನ ವರ್ಷಗಳಲ್ಲಿ ರಾಜ್ಯದಲ್ಲಿ ವಿವಿಧ ನೇಮಕಾತಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಪ್ರಶ್ನೆಪತ್ರಿಕೆ ಸೋರಿಕೆ, ಅಕ್ರಮ ಹಾಗೂ ನೇಮಕಾತಿ ಪ್ರಕ್ರಿಯೆಯಲ್ಲಿನ ಗೊಂದಲಗಳು ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿವೆ.

ಈ ಹಿನ್ನೆಲೆಯಲ್ಲಿ ಪರೀಕ್ಷೆ ಮತ್ತು ನೇಮಕಾತಿ ವ್ಯವಸ್ಥೆಯ ಪಾವಿತ್ರ್ಯ ಕಾಪಾಡುವುದು ಸಮಿತಿಯ ಪ್ರಮುಖ ಆದ್ಯತೆಯಾಗಿದೆ.

ರಾಜ್ಯ ಮಟ್ಟದ ಪರೀಕ್ಷೆ ಹಾಗೂ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ನ್ಯಾಯಯುತತೆ ಮತ್ತು ಹೊಣೆಗಾರಿಕೆ ಖಚಿತಪಡಿಸುವುದು, ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳನ್ನು ತಡೆಯಲು ಪರಿಣಾಮಕಾರಿ ವ್ಯವಸ್ಥೆ ರೂಪಿಸುವುದು ಹಾಗೂ ಪರೀಕ್ಷೆ-ನೇಮಕಾತಿಗೆ ನಿಗದಿತ ಮತ್ತು ಕಾಲಮಿತಿಯ ವೇಳಾಪಟ್ಟಿ ರೂಪಿಸುವ ಕುರಿತು ಸಮಿತಿ ಶಿಫಾರಸು ಮಾಡಲಿದೆ.

ಇದು ವಿಶೇಷವಾಗಿ ಸರ್ಕಾರಿ ಉದ್ಯೋಗಕ್ಕಾಗಿ ವರ್ಷಗಟ್ಟಲೆ ತಯಾರಿ ನಡೆಸುತ್ತಿರುವ ಯುವಜನರ ಆತಂಕಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವಾಗಲಿದೆ.

ಶಿಕ್ಷಣದ ವೆಚ್ಚಕ್ಕೂ ಕಡಿವಾಣ?

*ಶಿಕ್ಷಣದ ವೆಚ್ಚಕ್ಕೂ ಕಡಿವಾಣ?*

ಖಾಸಗಿ ಶಾಲಾ-ಕಾಲೇಜುಗಳ ಶುಲ್ಕ, ವೃತ್ತಿಪರ ಕೋರ್ಸ್‌ಗಳ ವೆಚ್ಚ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವಿದ್ಯಾರ್ಥಿಗಳು ಅವಲಂಬಿಸುವ ಕೋಚಿಂಗ್‌ ಕೇಂದ್ರಗಳ ಶುಲ್ಕ ದಿನದಿಂದ ದಿನಕ್ಕೆ ಕುಟುಂಬಗಳ ಮೇಲಿನ ಆರ್ಥಿಕ ಹೊರೆಯನ್ನು ಹೆಚ್ಚಿಸುತ್ತಿದೆ.

ಈ ಹಿನ್ನೆಲೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಶುಲ್ಕ ನಿಯಂತ್ರಣ, ಕೋಚಿಂಗ್‌ ಕೇಂದ್ರಗಳ ಮೇಲ್ವಿಚಾರಣೆ ಮತ್ತು ನಿಯಂತ್ರಣ ಹಾಗೂ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳ ಮೇಲಿನ ಶಿಕ್ಷಣದ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಕ್ರಮಗಳ ಕುರಿತು ಸಮಿತಿ ಪರಿಶೀಲಿಸಲಿದೆ.

ಕೋಚಿಂಗ್‌ ಸಂಸ್ಕೃತಿ ಹೆಚ್ಚುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳ ಶಿಕ್ಷಣವು ಕುಟುಂಬದ ಆರ್ಥಿಕ ಸಾಮರ್ಥ್ಯಕ್ಕೆ ಮಾತ್ರ ಸೀಮಿತವಾಗದಂತೆ ವ್ಯವಸ್ಥೆ ರೂಪಿಸುವುದು ಸರ್ಕಾರದ ಮುಂದಿರುವ ಪ್ರಮುಖ ಸವಾಲಾಗಿದೆ.

ಸರ್ಕಾರಿ ಶಿಕ್ಷಣ ಸಂಸ್ಥೆಗಳ ಗುಣಮಟ್ಟದತ್ತ ಗಮನ

ಸರ್ಕಾರಿ ಶಿಕ್ಷಣ ಸಂಸ್ಥೆಗಳ ಗುಣಮಟ್ಟದತ್ತ ಗಮನ

ಸರ್ಕಾರಿ ಶಾಲೆಗಳು, ಪದವಿ ಪೂರ್ವ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಮೂಲಸೌಕರ್ಯ ಬಲಪಡಿಸುವ ಬಗ್ಗೆಯೂ ಉಪ ಸಮಿತಿ ಶಿಫಾರಸು ನೀಡಲಿದೆ.

ಶಿಕ್ಷಕರ ಖಾಲಿ ಹುದ್ದೆ ಭರ್ತಿ, ಪ್ರಯೋಗಾಲಯಗಳು, ಗ್ರಂಥಾಲಯಗಳು, ವಿದ್ಯಾರ್ಥಿ ವಸತಿ ನಿಲಯಗಳು ಹಾಗೂ ಇತರ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದು ಇದರ ಭಾಗವಾಗಿದೆ.

ಸರ್ಕಾರಿ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಅಗತ್ಯ ಸೌಲಭ್ಯಗಳು ದೊರೆತರೆ, ದುಬಾರಿ ಖಾಸಗಿ ಶಿಕ್ಷಣದ ಮೇಲಿನ ಅವಲಂಬನೆ ಕಡಿಮೆಯಾಗುವ ಸಾಧ್ಯತೆಯಿದೆ.

ಶಿಕ್ಷಣದಿಂದ ಉದ್ಯೋಗದವರೆಗೆ ಸಂಪರ್ಕ

ಶಿಕ್ಷಣದಿಂದ ಉದ್ಯೋಗದವರೆಗೆ ಸಂಪರ್ಕ

ಇಂದಿನ ಉದ್ಯೋಗ ಮಾರುಕಟ್ಟೆಯ ಅಗತ್ಯಗಳಿಗೆ ಅನುಗುಣವಾಗಿ ಪಠ್ಯಕ್ರಮ ಬದಲಾಗಬೇಕು ಎಂಬ ಬೇಡಿಕೆ ಬಹುಕಾಲದಿಂದ ಕೇಳಿಬರುತ್ತಿದೆ.

ಕೇವಲ ಪದವಿ ಪಡೆಯುವುದಕ್ಕಿಂತ ಉದ್ಯೋಗಕ್ಕೆ ಬೇಕಾದ ಕೌಶಲ್ಯಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುವ ಅಗತ್ಯ ಹೆಚ್ಚಾಗಿದೆ.

ಈ ಹಿನ್ನೆಲೆಯಲ್ಲಿ ಉದಯೋನ್ಮುಖ ಉದ್ಯೋಗಾವಕಾಶಗಳು ಮತ್ತು ಉದ್ಯಮ ವಲಯದ ಅಗತ್ಯಗಳಿಗೆ ಅನುಗುಣವಾಗಿ ಪಠ್ಯಕ್ರಮ ರೂಪಿಸುವುದು, ಕೌಶಲ್ಯಾಭಿವೃದ್ಧಿ, ಅಪ್ರೆಂಟಿಸ್‌ಶಿಪ್ ಮತ್ತುi ಇಂಟರ್ನ್‌ಶಿಪ್‌ಗಳನ್ನು ಉತ್ತೇಜಿಸುವುದು ಹಾಗೂ ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯಮಗಳ ನಡುವಿನ ಸಹಭಾಗಿತ್ವ ಬಲಪಡಿಸುವ ಕುರಿತು ಸಮಿತಿ ಪರಿಶೀಲಿಸಲಿದೆ.

ವಿದ್ಯಾರ್ಥಿಗಳ ಮಾನಸಿಕ ಆರೋಗ್ಯವೂ ಅಜೆಂಡಾದಲ್ಲಿ

ವಿದ್ಯಾರ್ಥಿಗಳ ಮಾನಸಿಕ ಆರೋಗ್ಯವೂ ಅಜೆಂಡಾದಲ್ಲಿ

ಪರೀಕ್ಷಾ ಒತ್ತಡ, ಸ್ಪರ್ಧಾತ್ಮಕ ಪರೀಕ್ಷೆಗಳ ತೀವ್ರ ಪೈಪೋಟಿ, ಕೋಚಿಂಗ್‌ ಕೇಂದ್ರಗಳ ಒತ್ತಡ ಮತ್ತು ವಸತಿ ನಿಲಯಗಳಲ್ಲಿನ ಪರಿಸ್ಥಿತಿಗಳು ವಿದ್ಯಾರ್ಥಿಗಳ ಮಾನಸಿಕ ಕ್ಷೇಮದ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ.

ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಸಮಾಲೋಚನೆ ಮತ್ತು ಬೆಂಬಲ ವ್ಯವಸ್ಥೆ ಬಲಪಡಿಸುವುದು, ಶೈಕ್ಷಣಿಕ ಹಾಗೂ ಪರೀಕ್ಷಾ ಒತ್ತಡ ನಿರ್ವಹಣೆಗೆ ಕ್ರಮ ರೂಪಿಸುವುದು ಮತ್ತು ವಿಶೇಷವಾಗಿ ಕೋಚಿಂಗ್‌ ಕೇಂದ್ರಗಳು, ವಸತಿ ನಿಲಯಗಳು ಹಾಗೂ ವಸತಿಯುತ ಶಿಕ್ಷಣ ಸಂಸ್ಥೆಗಳಲ್ಲಿ ಆತ್ಮಹತ್ಯೆ ತಡೆ ಕ್ರಮಗಳನ್ನು ರೂಪಿಸುವುದು ಸಮಿತಿಯ ಜವಾಬ್ದಾರಿಯಾಗಿದೆ.

ಇದರ ಮೂಲಕ ಶಿಕ್ಷಣ ವ್ಯವಸ್ಥೆಯಲ್ಲಿ ಅಂಕಗಳು ಮತ್ತು ಉದ್ಯೋಗದ ಫಲಿತಾಂಶಗಳ ಜೊತೆಗೆ ವಿದ್ಯಾರ್ಥಿಗಳ ಒಟ್ಟಾರೆ ಕ್ಷೇಮಕ್ಕೂ ಸರ್ಕಾರ ಆದ್ಯತೆ ನೀಡಲು ಮುಂದಾಗಿದೆ.

ಸಾಮಾಜಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಬೆಂಬಲ

*ಸಾಮಾಜಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಬೆಂಬಲ*

SC, ST, OBC, ಅಲ್ಪಸಂಖ್ಯಾತರು ಹಾಗೂ ಮೊದಲ ತಲೆಮಾರಿನ ಕಲಿಯುವವರ ಶಿಕ್ಷಣ ಪ್ರವೇಶವನ್ನು ಮತ್ತಷ್ಟು ಸುಲಭಗೊಳಿಸುವ ಬಗ್ಗೆಯೂ ಸಮಿತಿ ಗಮನ ಹರಿಸಲಿದೆ.

ವಿದ್ಯಾರ್ಥಿವೇತನ ಮತ್ತು ಆರ್ಥಿಕ ನೆರವು ಬಲಪಡಿಸುವುದು, ವಸತಿ ನಿಲಯಗಳ ಸಾಮರ್ಥ್ಯ ವಿಸ್ತರಿಸುವುದು ಹಾಗೂ ಬಾಲಕಿಯರ ಶಿಕ್ಷಣಕ್ಕೆ ಹೆಚ್ಚಿನ ಉತ್ತೇಜನ ನೀಡುವ ಕ್ರಮಗಳನ್ನು ಶಿಫಾರಸು ಮಾಡುವ ಜವಾಬ್ದಾರಿ ಸಮಿತಿಗಿದೆ.

ರಾಜ್ಯಾದ್ಯಂತ ಸಮಾಲೋಚನೆ

ರಾಜ್ಯಾದ್ಯಂತ ಸಮಾಲೋಚನೆ

ಈ ಸಮಿತಿಯ ವಿಶೇಷ ಅಂಶವೆಂದರೆ ಕೇವಲ ಅಧಿಕಾರಿಗಳು ಮತ್ತು ಸಚಿವರ ಮಟ್ಟದಲ್ಲಿ ವರದಿ ಸಿದ್ಧಪಡಿಸುವ ಬದಲು ರಾಜ್ಯಾದ್ಯಂತ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಶಿಕ್ಷಣ ಸಂಸ್ಥೆಗಳು ಹಾಗೂ ಇತರ ಸಂಬಂಧಿತ ಪಾಲುದಾರರೊಂದಿಗೆ ವ್ಯಾಪಕ ಸಮಾಲೋಚನೆ ನಡೆಸುವಂತೆ ಸರ್ಕಾರ ಸೂಚಿಸಿರುವುದು.

ಅಗತ್ಯವಿದ್ದಲ್ಲಿ ವಿವಿಧ ಕ್ಷೇತ್ರಗಳ ವಿಷಯ ತಜ್ಞರ ನೆರವನ್ನೂ ಸಮಿತಿ ಪಡೆಯಬಹುದು.

ಒಂದು ತಿಂಗಳ ಗಡುವು

ಒಂದು ತಿಂಗಳ ಗಡುವು

ಸಚಿವ ಸಂಪುಟ ಉಪ ಸಮಿತಿಯು ಮೇಲಿನ ಎಲ್ಲ ವಿಚಾರಗಳನ್ನು ಪರಿಶೀಲಿಸಿ ಒಂದು ತಿಂಗಳೊಳಗೆ ವರದಿ ಸಲ್ಲಿಸಬೇಕಾಗಿದೆ. ಉನ್ನತ ಶಿಕ್ಷಣ ಇಲಾಖೆಯನ್ನು ಈ ಸಮಿತಿಗೆ ನೋಡಲ್ ಇಲಾಖೆಯಾಗಿ ನೇಮಿಸಲಾಗಿದೆ.

ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆಯೇ?

ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆಯೇ?

ವಿದ್ಯಾರ್ಥಿಗಳ ಸಮಸ್ಯೆಗಳನ್ನು ಒಂದೇ ವೇದಿಕೆಯಲ್ಲಿ ಸಮಗ್ರವಾಗಿ ಪರಿಶೀಲಿಸಲು ಸರ್ಕಾರ ಮುಂದಾಗಿರುವುದು ಮಹತ್ವದ ಹೆಜ್ಜೆಯಾಗಿದೆ. ಆದರೆ ಸಮಿತಿಯ ಶಿಫಾರಸುಗಳು ಕೇವಲ ವರದಿಗೆ ಸೀಮಿತವಾಗದೆ, ಅವುಗಳನ್ನು ಕಾಲಮಿತಿಯಲ್ಲಿ ಜಾರಿಗೆ ತರುವುದೇ ಈ ಪ್ರಯತ್ನದ ಯಶಸ್ಸನ್ನು ನಿರ್ಧರಿಸಲಿದೆ.

ವಿಶೇಷವಾಗಿ ಪರೀಕ್ಷಾ ಅಕ್ರಮ ತಡೆ, ಸರ್ಕಾರಿ ಶಿಕ್ಷಣ ಸಂಸ್ಥೆಗಳ ಖಾಲಿ ಹುದ್ದೆಗಳ ಭರ್ತಿ, ಕೋಚಿಂಗ್‌ ಮತ್ತು ಶುಲ್ಕ ನಿಯಂತ್ರಣ, ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಹಾಗೂ ಶಿಕ್ಷಣದಿಂದ ಉದ್ಯೋಗದವರೆಗೆ ಪರಿಣಾಮಕಾರಿ ಸಂಪರ್ಕ ಕಲ್ಪಿಸುವ ವಿಚಾರಗಳಲ್ಲಿ ಸರ್ಕಾರ ಯಾವ ಸ್ಪಷ್ಟ ಕ್ರಮಗಳನ್ನು ಕೈಗೊಳ್ಳಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.

ವಿದ್ಯಾರ್ಥಿಗಳ ಸಮಸ್ಯೆಯನ್ನು ಕೇವಲ ಶಿಕ್ಷಣ ಇಲಾಖೆಯ ವ್ಯಾಪ್ತಿಯ ವಿಷಯವಾಗಿ ನೋಡದೆ ಪರೀಕ್ಷೆ, ಉದ್ಯೋಗ, ಆರ್ಥಿಕ ಹೊರೆ, ಮೂಲಸೌಕರ್ಯ, ಕೌಶಲ್ಯಾಭಿವೃದ್ಧಿ ಮತ್ತು ಮಾನಸಿಕ ಕ್ಷೇಮವನ್ನು ಒಳಗೊಂಡ ಸಮಗ್ರ ನೀತಿ ಪ್ರಶ್ನೆಯಾಗಿ ಪರಿಗಣಿಸಲು ರಾಜ್ಯ ಸರ್ಕಾರ ಮುಂದಾಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಬೆಂಗಳೂರಿನ ಕಂಪನಿಯಲ್ಲಿ ಕನ್ನಡಿಗರಿಗೆ ಕೆಲಸ ಇಲ್ಲ ಎಂದ ಕಂಪನಿ : ತ.ನಾಡಿನವರು ಮಾತ್ರ ಅರ್ಜಿ ಸಲ್ಲಿಸಿ!ಬೆಂಗಳೂರಲ್ಲಿ ಗೌರಿ-ಗಣೇಶ ಹಬ್ಬ ಸಂಭ್ರಮಾಚರಣೆ : ಹೂವು, ಹಣ್ಣು, ಪೂಜಾ ಸಾಮಗ್ರಿಗಳ ಖರೀದಿಗೆ ಮುಗಿಬಿದ್ದ ಜನತೆ!BREAKING : ರಾಜ್ಯದ ಜನರಿಗೆ ಬಿಗ್ ಶಾಕ್ : ನೂರರ ಗಡಿ ಸಮೀಪಿಸಿದ ಈರುಳ್ಳಿ ದರ, ಗ್ರಾಹಕರ ಕಣ್ಣಲ್ಲಿ ನೀರು!ರೇಷನ್‌ ಕಾರ್ಡ್‌ ಇ-ಕೆವೈಸಿಗೆ ಈ ದಾಖಲೆ ಬೇಕಿಲ್ಲ, ಆನ್‌ಲೈನ್‌ನಲ್ಲಿ ಹೀಗೆ ಚೆಕ್‌ ಮಾಡ್ಕೋಳಿ : Ration Card E-KYCಗೌರಿ-ಗಣೇಶ ಹಬ್ಬಕ್ಕೆ ಬೆಂಗಳೂರು ಸಜ್ಜು: ವಿಸರ್ಜನೆಗೆ 42 ಕಲ್ಯಾಣಿ, 659 ಮೊಬೈಲ್ ಟ್ಯಾಂಕರ್ ವ್ಯವಸ್ಥೆಬೆಂಗಳೂರಿನ ಬೀದಿಯಲ್ಲಿ ಗಣೇಶನನ್ನು ಕೂರಿಸುತ್ತೀರಾ? ಹಾಗಾದರೇ ಈ ಬೆಸ್ಕಾಂ ಸೂಚನೆಗಳನ್ನು ಪಾಲನೆ ಕಡ್ಡಾಯ!ದಾವಣಗೆರೆಯಲ್ಲಿ ಹಳೇ ದ್ವೇಷದ ಹಿಂಸಾಚಾರಕ್ಕೆ ಯುವಕ ಬಲಿಮಕ್ಕಳ ಮನಸ್ಸು, ಮೆದುಳಿನ ಶಕ್ತಿಗೆ ದಾರಿದೀಪ ಈ ಪುಸ್ತಕ: ತಪ್ಪದೇ ಖರೀದಿಸಿ, ನಿಮ್ಮ ಮಕ್ಕಳಿಗೆ ತಪ್ಪದೇ ಓದಿಸಿ!ಹಿಂದೂಗಳ ಆಚರಣೆಗೆ ಸರ್ಕಾರ ಅಡ್ಡಿ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಕಾಂಗ್ರೆಸ್ ಪಕ್ಷ ಸಂಘಟನೆ ಬಲವರ್ಧನೆಗೆ 'ಕೆಪಿಸಿಸಿ ಕನೆಕ್ಟ್ ಸೆಂಟರ್' ಸ್ಥಾಪನೆ: ಪದಾಧಿಕಾರಿಗಳ ನೇಮಕ