ಬೆಂಗಳೂರು: ರಾಜ್ಯದ ಸಾಮಾಜಿಕ ಭದ್ರತಾ ಯೋಜನೆಗಳಡಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳಿಗೆ ಸಂಬಂಧಿಸಿದಂತೆ ಸರ್ಕಾರ ಮಹತ್ವದ ಮಾಹಿತಿ ನೀಡಿದೆ. ಪಿಂಚಣಿ ಪಡೆಯಲು ಅರ್ಹತೆ ಇಲ್ಲದವರಿಗೆ ಪಿಂಚಣಿ ಮಂಜೂರಾಗಿರುವುದು ಅಥವಾ ಈಗಾಗಲೇ ಪಿಂಚಣಿ ಪಡೆಯುತ್ತಿರುವವರ ಪೈಕಿ ಸಂದೇಹಾಸ್ಪದ ಫಲಾನುಭವಿಗಳನ್ನು ಗುರುತಿಸಿ ಪರಿಶೀಲನೆ ನಡೆಸುವ ಕಾರ್ಯವನ್ನು ಕೈಗೊಳ್ಳಲಾಗಿದೆ.
ಈ ಕುರಿತು ಕರ್ನಾಟಕ ಸರ್ಕಾರದ ಸಂಬಂಧಪಟ್ಟ ಇಲಾಖೆಯು ಸೆಪ್ಟೆಂಬರ್ 9, 2026ರಂದು ಹೊರಡಿಸಿರುವ ಪತ್ರದಲ್ಲಿ ಮಾಹಿತಿ ನೀಡಿದೆ. ಸರ್ಕಾರದ ಹಿಂದಿನ ಆದೇಶಗಳನ್ವಯ ಸಾಮಾಜಿಕ ಭದ್ರತಾ ಯೋಜನೆಗಳಡಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳ ಮಾಹಿತಿಯನ್ನು ಮೊಬೈಲ್ ಆ್ಯಪ್ ಮೂಲಕ ಪರಿಶೀಲಿಸಲಾಗಿದ್ದು, ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಮಟ್ಟದಲ್ಲಿ ಪರಿಶೀಲನಾ ಕಾರ್ಯ ಕೈಗೊಳ್ಳಲಾಗಿದೆ.
ಅಹವಾಲು ಸಲ್ಲಿಸಲು ಟೋಲ್ ಫ್ರೀ ವ್ಯವಸ್ಥೆ
ಪರಿಶೀಲನೆಯ ವೇಳೆ ಪಿಂಚಣಿ ಸ್ಥಗಿತಗೊಂಡಿರುವ ಅಥವಾ ಫಲಾನುಭವಿಗಳ ಕುಟುಂಬಕ್ಕೆ ಸಂಬಂಧಿಸಿದಂತೆ ಯಾವುದೇ ಕೊರತೆ, ಸಮಸ್ಯೆ ಅಥವಾ ಅಹವಾಲುಗಳಿದ್ದರೆ, ಅವುಗಳನ್ನು ಸಲ್ಲಿಸಲು 1800-425-1247 ಟೋಲ್ ಫ್ರೀ ಸಂಖ್ಯೆಯನ್ನು ಒದಗಿಸಲಾಗಿದೆ.
ಫಲಾನುಭವಿಗಳು ಈ ಸಂಖ್ಯೆಗೆ ಕರೆ ಮಾಡಿದಾಗ, ಅಗತ್ಯವಿದ್ದಲ್ಲಿ ಸಂಬಂಧಪಟ್ಟ ತಾಲ್ಲೂಕು ಕಚೇರಿಗೆ ಕರೆಯನ್ನು ವರ್ಗಾಯಿಸಿ ಸಮಸ್ಯೆ ಅಥವಾ ಅಹವಾಲಿನ ಕುರಿತು ಮಾಹಿತಿ ಪಡೆಯುವ ವ್ಯವಸ್ಥೆ ಮಾಡಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಜಿಲ್ಲಾ ಮಟ್ಟದಲ್ಲೂ ಕ್ರಮ
ತಮ್ಮ ಜಿಲ್ಲೆಯಲ್ಲಿರುವ ಫಲಾನುಭವಿಗಳಿಗೆ ಟೋಲ್ ಫ್ರೀ ಸಂಖ್ಯೆ 1800-425-1247 ಕುರಿತು ಮಾಹಿತಿ ನೀಡುವಂತೆ ಹಾಗೂ ಅಗತ್ಯವಿರುವವರಿಗೆ ಅಹವಾಲು ಸಲ್ಲಿಸಲು ಸಹಕರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಹೀಗಾಗಿ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವವರಿಗೆ ಪಿಂಚಣಿ ಸ್ಥಗಿತ, ದಾಖಲೆಗಳಲ್ಲಿನ ಕೊರತೆ ಅಥವಾ ಪರಿಶೀಲನೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಮೇಲ್ಕಂಡ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ತಮ್ಮ ಅಹವಾಲು ದಾಖಲಿಸಬಹುದು.
