ಮಂಡ್ಯ : ಮದ್ದೂರು ನಗರದ ಕೊಲ್ಲಿ ವೃತ್ತದಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರರ ಪ್ರತಿಮೆ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ ಎಂದು ಶಾಸಕ ಕೆ.ಎಂ.ಉದಯ್ ಭಾನುವಾರ ಹೇಳಿದರು.
ನಗರದ ಶ್ರೀ ಉಗ್ರ ನರಸಿಂಹ ಸ್ವಾಮಿ ದೇವಾಲಯದ ಹಿಂಭಾಗದಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
ನಗರದ ಪ್ರವಾಸಿ ಮಂದಿರದಿಂದ ಕೊಲ್ಲಿ ವೃತ್ತದವರೆಗೆ ರಸ್ತೆ ಅಗಲೀಕರಣ ಕಾಮಗಾರಿ ಇನ್ನೆರಡು ತಿಂಗಳಲ್ಲಿ ಪ್ರಾರಂಭವಾಗಲಿದ್ದು, ಕಾಮಗಾರಿ ಮುಗಿದ ಬಳಿಕ ಕೊಲ್ಲಿ ವೃತ್ತದಲ್ಲಿ ಶ್ರೀ ಜಗಜ್ಯೋತಿ ಬಸವೇಶ್ವರರ ಪ್ರತಿಮೆ ನಿರ್ಮಾಣ ಹಾಗೂ ವೃತ್ತಕ್ಕೆ ಹೆಸರಿಡಲು ಈಗಾಗಲೇ ನಗರಸಭೆಯ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.
ಇತ್ತಿಚೆಗೆ ಸಹಕಾರ ಸಂಘಗಳಲ್ಲಿ ಸಾಕಷ್ಟು ಅವ್ಯವಹಾರಗಳು ನಡೆಯುತ್ತಿರುವುದು ಸಾಮಾನ್ಯವಾಗಿದೆ. ಆದರೆ, ಜಗಜ್ಯೋತಿ ಬಸವೇಶ್ವರ ಪತ್ತಿನ ಸಹಕಾರ ಸಂಘದಲ್ಲಿ ಅಂತಹ ಯಾವುದೇ ಲೋಪಗಳು ಕಂಡು ಬಂದಿಲ್ಲ. ಹೀಗಾಗಿ ಸದಸ್ಯರು ಹಾಗೂ ನಿರ್ದೆಶಕರು ಮುನ್ನೆಚ್ಚರಿಕೆ ಕ್ರಮವಾಗಿ ಲೆಕ್ಕ ಪತ್ರಗಳನ್ನು ಆಗಾಗ್ಗೆ ಗಮನಿಸುತಿರಬೇಕೆಂದು ಸಲಹೆ ನೀಡಿದರು.
ತಾಲೂಕಿನಲ್ಲಿ 22 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ವೀರಶೈವ ಲಿಂಗಾಯತ ಸಮುದಾಯವಿದೆ. ಅದರಲ್ಲಿ ಆರ್ಥಿಕವಾಗಿ ಹಿಂದುಳಿದ ವಸತಿ ವಂಚಿತರಿಗೆ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುವುದು. ಹಾಗೂ ನಗರ ವ್ಯಾಪ್ತಿಯಲ್ಲಿರುವ ಸ್ಮಶಾನವು ಸಾಕಷ್ಟು ಅಧ್ವಾನಗೊಂಡಿದ್ದು, ಇನ್ನು ಮೂರು ತಿಂಗಳಲ್ಲಿ ಸ್ಮಶಾನ ಮತ್ತು ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಇನ್ನು ಜಗಜ್ಯೋತಿ ಬಸವೇಶ್ವರ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡಕ್ಕೆ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದು ಶಾಸಕ ಉದಯ್ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀ ಸಿದ್ದಗಂಗಾ ಮಠದ ಕಿರಿಯ ಸ್ವಾಮೀಜಿಗಳಾದ ಶಿವಸಿದ್ಧೇಶ್ವರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಇದೇ ವೇಳೆ ವೈದ್ಯನಾಥಪುರದ ಜಂಗಮ ಮಠದ ಶ್ರೀ ರೇಣುಕಾ ಶಿವಾಚಾರ್ಯಸ್ವಾಮಿಜಿ, ಮಡೇನಹಳ್ಳಿಯ ತೋಂಟದಾರ್ಯ ಮಠದ ಅರುಣಾಚಲ ಸ್ವಾಮೀಜಿ, ಎಸ್.ಐ.ಹೊನ್ನಲಗೆರೆ ಶಿವ ಕ್ಷೇತ್ರ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಶ್ರೀ ಜಗಜ್ಯೋತಿ ಬಸವೇಶ್ವರ ಪತ್ತಿನ ಸಂಘದ ಅಧ್ಯಕ್ಷ ಪಿ.ರಾಜಶೇಖರ್, ಎಸ್.ವ್ಯಾಸ ವಿಶ್ವ ವಿದ್ಯಾಲಯ ಕುಲಾಧಿಪತಿ ಡಾ.ಹೆಚ್.ಆರ್.ದಯಾನಂದ್ ಸ್ವಾಮಿ, ಕೆ.ಹೆಚ್.ವೀರಭದ್ರಪ್ಪ, ಉಮಾಪತಿ, ಹೆಚ್.ಆರ್.ನಾಗಭೂಷಣ್ ಹಾಗೂ ಸಂಘದ ಪದಾಧಿಕಾರಿಗಳು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ