ಮಂಡ್ಯ: ಕಳೆದ ವರ್ಷ ಕೋಮು ಸಂಘರ್ಷಕ್ಕೆ ಸಾಕ್ಷಿಯಾಗಿದ್ದ ಮದ್ದೂರು ಪಟ್ಟಣದಲ್ಲಿ ಈ ಬಾರಿ ಅಪರೂಪದ ಸಾಮರಸ್ಯ ಹಾಗೂ ಭಾವೈಕ್ಯತೆಯ ಗಣೇಶೋತ್ಸವ ಕಣ್ಮನ ಸೆಳೆದಿದೆ. ಸ್ಥಳೀಯ ಶಾಸಕ ಕದಲೂರು ಉದಯ್ ಅವರ ನೇತೃತ್ವದಲ್ಲಿ ನಡೆದ ಅದ್ದೂರಿ ಗಣೇಶೋತ್ಸವ ಮೆರವಣಿಗೆಯಲ್ಲಿ ಮುಸ್ಲಿಂ ಬಾಂಧವರು ಮುಂಚೂಣಿಯಲ್ಲಿ ನಿಂತು, ಹಿಂದೂ-ಮುಸ್ಲಿಂ ಬಾಂಧವ್ಯದ ಹೊಸ ಸಂದೇಶ ಸಾರಿದ್ದಾರೆ.
ಕೇಸರಿ ಶಾಲು ಧರಿಸಿ ಸ್ವಾಗತ, ಗಣೇಶನಿಗೆ ಬೃಹತ್ ಹಾರ ಸಮರ್ಪಣೆ
ಮದ್ದೂರು ಪಟ್ಟಣದ ಪೇಟೆ ಬೀದಿಯಲ್ಲಿರುವ ಹಜರತ್ ದೌಡ್ ತೆ ಪೀರ್ ಬಾಬಾ ದರ್ಗಾ ಹಾಗೂ ಮಸೀದಿ ಮುಂಭಾಗದಲ್ಲಿ ಮುಸ್ಲಿಂ ಸಮುದಾಯದ ಮುಖಂಡರು ಹಾಗೂ ಯುವಕರು ಸ್ವತಃ ಕೇಸರಿ ಶಾಲು ಧರಿಸಿ ಗಣೇಶ ಶೋಭಾಯಾತ್ರೆಗೆ ಆತ್ಮೀಯ ಸ್ವಾಗತ ಕೋರಿದರು. ಮಸೀದಿ ಮುಂದೆ ಗಣಪತಿಗೆ ಬೃಹತ್ ಹೂವಿನ ಹಾರ ಹಾಕಿ ವಿಶೇಷ ಪೂಜೆ ಸಲ್ಲಿಸಿದ ದೃಶ್ಯ ಸೌಹಾರ್ದತೆಯ ಪ್ರತೀಕವಾಗಿತ್ತು. ಇದೇ ವೇಳೆ ಶಾಸಕ ಕದಲೂರು ಉದಯ್ ಅವರಿಗೂ ಹಾರ ಹಾಕಿ ಅಭಿನಂದಿಸಿದರು.
ಗಣಪತಿ ಮೆರವಣಿಗೆಗೆ ಮುಸ್ಲಿಮರೇ ಸಾರಥಿ: ಒಟ್ಟಿಗೆ ಕುಣಿದು ಸಂಭ್ರಮ
ಗಣೇಶ ಮೂರ್ತಿಯನ್ನು ಹೊತ್ತಿದ್ದ ಟ್ರ್ಯಾಕ್ಟರ್‌ಗೆ ಮುಸ್ಲಿಂ ಯುವಕನೇ ಚಾಲಕನಾಗಿ (ಸಾರಥಿ) ಸೇವೆ ಸಲ್ಲಿಸುವ ಮೂಲಕ ಗಮನ ಸೆಳೆದರು. ವಿಸರ್ಜನಾ ಮೆರವಣಿಗೆಯುದ್ದಕ್ಕೂ ಹಿಂದೂ ಯುವಕರ ಜೊತೆ ಹೆಗಲಿಗೆ ಹೆಗಲು ಕೊಟ್ಟು ಹೆಜ್ಜೆ ಹಾಕಿದ ಮುಸ್ಲಿಂ ಬಾಂಧವರು, ಗಣಪತಿಗೆ ಜೈಕಾರ ಕೂಗಿ ಒಟ್ಟಿಗೆ ಹೆಜ್ಜೆ ಹಾಕಿ ನೃತ್ಯ ಮಾಡಿದರು. ದರ್ಗಾದ ಮುಂದೆ ಸಾಲುಗಟ್ಟಿ ನಿಂತಿದ್ದ ನೂರಾರು ಮುಸ್ಲಿಮರು ಮೆರವಣಿಗೆಯಲ್ಲಿದ್ದ ಭಕ್ತರಿಗೆ ಕುಡಿಯುವ ನೀರು, ನಂದಿನಿ ಮಜ್ಜಿಗೆ ಪ್ಯಾಕೆಟ್‌ಗಳು ಹಾಗೂ ಜ್ಯೂಸ್ ವಿತರಿಸಿ ಉಪಚರಿಸಿದರು.
ಕೋಮು ವಿಷಬೀಜ ಬಿತ್ತುವವರಿಗೆ ತಕ್ಕ ಉತ್ತರ: ಶಾಸಕ ಕದಲೂರು ಉದಯ್
ಕಾರ್ಯಕ್ರಮದ ಬಳಿಕ ಮಾತನಾಡಿದ ಮದ್ದೂರು ಶಾಸಕ ಕದಲೂರು ಉದಯ್, "ಮದ್ದೂರಿನಲ್ಲಿ ಇಂದು ಸರ್ವಧರ್ಮೀಯರೂ ಒಗ್ಗೂಡಿ ಸಾಮರಸ್ಯದ ಗಣೇಶೋತ್ಸವವನ್ನು ಅತ್ಯಂತ ಭಕ್ತಿ-ಭಾವದಿಂದ ಆಚರಿಸಿದ್ದಾರೆ. ಕಳೆದ ಬಾರಿ ನಡೆದ ಅಹಿತಕರ ಘಟನೆಗಳನ್ನು ಮುಂದಿಟ್ಟುಕೊಂಡು ಕೋಮು ಗಲಭೆ ಸೃಷ್ಟಿಸಿ, ರಾಜಕೀಯ ಬಣ್ಣ ಬಳಿದು ಲಾಭ ಪಡೆಯಲು ಯತ್ನಿಸಿದವರಿಗೆ ಮದ್ದೂರಿನ ಜನತೆ ತಕ್ಕ ಉತ್ತರ ನೀಡಿದ್ದಾರೆ. ಪ್ರಚೋದನಕಾರಿ ಹೇಳಿಕೆ ನೀಡಿ ವಿಷಬೀಜ ಬಿತ್ತುವ ಬಿಜೆಪಿಯ ರಾಜಕೀಯ ಲೆಕ್ಕಾಚಾರ ಇಲ್ಲಿ ಯಶಸ್ವಿಯಾಗಿಲ್ಲ. ಇಡೀ ಪಟ್ಟಣದ ಜನರು ಶಾಂತಿ ಮತ್ತು ಸಹಬಾಳ್ವೆಗೆ ಸಾಕ್ಷಿಯಾಗಿದ್ದಾರೆ" ಎಂದು ತಿಳಿಸಿದರು.
ವರದಿ: ಗಿರೀಶ್ ರಾಜ್, ಮಂಡ್ಯ